ಗಡಿ ಭದ್ರತೆ ಜೊತೆ ವಿಕೋಪ ನಿರ್ವಹಣೆಗೂ ಸೈ "ಅಸ್ಸಾಂ ರೈಫಲ್ಸ್"

ಮೇಘಾಲಯ: ಬಾಂಗ್ಲಾದೇಶ, ಮ್ಯಾನ್ಮಾರ್ ಸೇರಿದಂತೆ ಈಶಾನ್ಯ ಭಾರತದ ಗಡಿ ಭದ್ರತೆ ಜೊತೆಗೆ ಗಡಿ ಭಾಗದಲ್ಲಿ ಪ್ರಾಕೃತಿಕ ವಿಕೋಪಗಳ ನಿರ್ವಹಣೆಯಲ್ಲಿಯೂ ಆದಿವಾಸಿ ಜನರ ಹಿತರಕ್ಷಣಾ ಕಾರ್ಯ ನಡೆಸುತ್ತಿದೆ ಅಸ್ಸಾಂ ರೈಫಲ್ಸ್ ಪಡೆ.
ಈಶಾನ್ಯದ ಏಳು ರಾಜ್ಯಗಳನ್ನು ಬೆಸೆಯುವಲ್ಲಿ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ಅಸ್ಸಾಂ ರೈಫಲ್ಸ್ ಪಡೆಯ ಮೇಘಾಲಯದ ಮುಖ್ಯ ಕಚೇರಿಗೆ ಬುಧವಾರ ಕರ್ನಾಟಕ ಮಾಧ್ಯಮ ತಂಡ ಭೇಟಿ ನೀಡಿತು.
ಭಾರತದ ಸರ್ಕಾರದ ಬೆಂಗಳೂರಿನ ವಾರ್ತಾ ಶಾಖೆಯು ಮೇಘಾಲಯಕ್ಕೆ ಆಯೋಜಿಸಿದ್ದ ಮಾಧ್ಯಮ ಪ್ರವಾಸದ ಭಾಗವಾಗಿ ಈ ಭೇಟಿ ನೀಡಲಾಯಿತು. ಭಾರತದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಅರೆಸೇನಾ ಪಡೆ ಖ್ಯಾತಿಯ ಅಸ್ಸಾಂ ರೈಫಲ್ಸ್ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಈ ಸಂದರ್ಭದಲ್ಲಿ ಬ್ರಿಗೇಡಿಯರ್ ಸಂದೀಪ್ ಚಟರ್ಜಿ ಅವರು ಮಾಧ್ಯಮ ತಂಡಕ್ಕೆ ಅಸ್ಸಾಂ ರೈಫಲ್ಸ್ ಕಾರ್ಯ ವೈಖರಿಯ ಕುರಿತು ಮಾಹಿತಿ ನೀಡಿದರು.
1835ರಲ್ಲಿ ಸ್ಥಾಪನೆಯಾದ ಈ ಪಡೆಯು ಮೊದಲನೇ ಮತ್ತು ಎರಡನೇ ಮಹಾಯುದ್ಧಗಳಲ್ಲಿ ಪ್ರಮುಖ ಪಾತ್ರ ವಹಿಸಿದ ಹೆಗ್ಗಳಿಕೆ ಹೊಂದಿದೆ. ಸ್ವಾತಂತ್ರ್ಯಾ ನಂತರದ 1962ರ ಚೀನಾ ಯುದ್ಧ, 1965 ಮತ್ತು 1971ರ ಪಾಕಿಸ್ತಾನದ ವಿರುದ್ಧದ ಯುದ್ಧಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದೇಶದ ಗಡಿಗಳನ್ನು ರಕ್ಷಿಸಿದ ಹೆಗ್ಗಳಿಕೆ ಹೊಂದಿದೆ ಎಂದು ಹೇಳಿದರು.
ಭಾರತ ಮತ್ತು ಮಯನ್ಮಾರ್ ಗಡಿಯ ವ್ಯಾಪ್ತಿಯಲ್ಲಿ ಅಸ್ಸಾಂ ರೈಫಲ್ಸ್ ಕಾರ್ಯನಿರ್ವಹಿಸುತ್ತಿದೆ. ಇದು ಈ ಗಡಿ ಭಾಗದಲ್ಲಿ ಶಾಂತಿ ಹಾಗೂ ಸಾಮರಸ್ಯವನ್ನು ಸ್ಥಾಪಿಸಲು ಕಾರಣವಾಗಿದೆ. ಗಡಿ ಭಾಗದ ಜನರ ಸಾಂಸ್ಕೃತಿಕ ಸಂಬಂಧಗಳನ್ನು ಗೌರವಿಸುತ್ತಾ, ಭದ್ರತೆಯ ದೃಷ್ಟಿಯಿಂದ ಈಗ ಪಾರದರ್ಶಕ ಕ್ರಮಗಳನ್ನು ಕೈಗೊಳ್ಳಲಾಗಿದೆ.
1643 ಕಿ.ಮೀ. ವ್ಯಾಪ್ತಿಯ ಗಡಿ ಪ್ರದೇಶದಲ್ಲಿ ಮಯನ್ಮಾರ್ ನಿಂದ ಬರುವವರಿಗೆ ಅಥವಾ ಮಯನ್ಮಾರ್ ಗೆ ಖರೀದಿ ಗೆ ಉಭಯ ದೇಶಗಳ 16 ಕಿ. ಮೀ. ವರೆಗೆ ಸಂಚರಿಸಲು ಅವಕಾಶವಿತ್ತು. ಈಗ ಅದನ್ನು 10 ಕಿ.ಮೀ. ವ್ಯಾಪ್ತಿಗೆ ಸೀಮಿತಗೊಳಿಸಿ ಅವರ ಮೇಲೆ ಸೂಕ್ತ ನಿಗಾ ವಹಿಸಲಾಗುತ್ತಿದೆ. ಇದರಲ್ಲಿ ಪಾರದರ್ಶಕ ಕ್ರಮಗಳನ್ನು ಕೈಗೊಳ್ಳಾಗಿದೆ ಎಂದು ಬಿಗ್ರೇಡಿಯರ್ ಸಂದೀಪ್ ಚಟರ್ಜಿ ವಿವರಿಸಿದರು.
ಕೇವಲ ರಕ್ಷಣೆಗೆ, ಆಂತರಿಕ ದಂಗೆಯ ದಮನಕ್ಕೆ ಮಾತ್ರ ಸೀಮಿತವಾಗದ ಈ ಪಡೆಯು, ಗಡಿ ಭಾಗದ ಬುಡಕಟ್ಟು ಸಮುದಾಯಗಳ ಏಳಿಗೆಗೆ ಶ್ರಮಿಸುತ್ತಿದೆ. ಪ್ರವಾಹದಂತಹ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ನೆರವಾಗು ವುದು, ಆರೋಗ್ಯ ಸೇವೆ ಒದಗಿಸುವುದು ಮತ್ತು ಮೂಲ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಜನರ ವಿಶ್ವಾಸ ಗಳಿಸಿದೆ ಎಂದು ಅಸ್ಸಾಂ ರೈಫಲ್ಸ್ ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಲೆಫ್ಟಿನೆಂಟ್ ವಿಕಾಸ್ ಅವರು ಹೇಳಿದರು.
ಈ ಸಂದರ್ಭದಲ್ಲಿ ಪಿಐಬಿ ಶಿಲ್ಲಾಂಗ್ ನ ಸಹಾಯಕ ನಿರ್ದೇಶಕರಾದ ಶ್ರೀ ಗೋಪಾಜಿತ್ ದಾಸ್, ಪಿಐಬಿ ಬೆಂಗಳೂರಿನ ಸಹಾಯಕ ನಿರ್ದೇಶಕರಾದ ಎಂ ಮಧು ಮತ್ತು ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸುಮಾರು 66,000 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹೊಂದಿರುವ ಅಸ್ಸಾಂ ರೈಫಲ್ಸ್ ಈಶಾನ್ಯ ರಾಜ್ಯಗಳಲ್ಲಿ ಶಾಂತಿ ಸ್ಥಾಪಿಸುವುದು, ಆಂತರಿಕ ದಂಗೆಗಳನ್ನು ದಮನ ಮಾಡುವುದು ಮತ್ತು ಕಳ್ಳ ಸಾಗಾಣಿಕೆಯಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯುವಲ್ಲಿ ಇದು ನಿರ್ಣಾಯಕ ಪಾತ್ರ ವಹಿಸುತ್ತಿದೆ. 2015 ರಿಂದ ಮಹಿಳೆಯರು ಸೇನಾನಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಸುಮಾರು 2500 ಮಹಿಳೆಯರು ಈ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇದೇ ವೇಳೆ ಮೇಘಾಲಯದ ರಿಬೋಯಿ ಜಿಲ್ಲೆಯಲ್ಲಿ ನೈಸರ್ಗಿಕವಾಗಿ ಯಾವುದೇ ರಾಸಾಯನಿಕ ಬಳಸದೆ ತಯಾರಿಸ ಲಾಗುವ ಅಹಿಂಸಾ ರೇಷ್ಮೆ (Eri Silk or Peace Silk) ಉತ್ಪನ್ನಗಳ ಡಿವಾನ್ ಗ್ರಾಮಕ್ಕೆ ಭೇಟಿ ನೀಡಲಾಯಿತು. ಇತ್ತಿಚೆಗೆ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ನಲ್ಲಿ ಈ ಹಳ್ಳಿಯ ವೈವಿಧ್ಯತೆ ಮತ್ತು ಸಾಧನೆ ಕುರಿತು ಪ್ರಸ್ತಾಪಿಸಿದ್ದರು.







