ವಾಯುಪ್ರದೇಶ ಮುಚ್ಚಿದ ಮಧ್ಯಪ್ರಾಚ್ಯ; ಮಂಗಳೂರಿನಿಂದ ಗಲ್ಫ್‌ಗೆ ತೆರಳುವ ವಿಮಾನ ಹಾರಾಟ ರದ್ದು

ಮಂಗಳೂರು: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ದಾಳಿ ನಡೆಸಿದ ಬಳಿಕ ಮುಂಜಾಗ್ರತಾ ಕ್ರಮವಾಗಿ ಗಲ್ಫ್ ರಾಷ್ಟ್ರಗಳು ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಈ ಹಿನ್ನಲೆಯಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗಲ್ಫ್ ಗೆ ತೆರಳುವ, ಆಗಮಿಸುವ ವಿಮಾನಯಾನ ಸಂಚಾರಗಳು ರದ್ದಾಗಿವೆ.
ಇರಾನ್ ಮೇಲೆ ದಾಳಿ ಪ್ರಾರಂಭವಾಗುವ ಮುಂಚೆಯೇ ಮಂಗಳೂರಿನಿಂದ ದೋಹಾಕ್ಕೆ ತೆರಳಲು ಟೇಕಾಫ್ ಆಗಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಮುಂಬೈ ವಿಮಾನ ನಿಲ್ದಾಣದಲ್ಲಿ ರಾತ್ರಿ 7 ಗಂಟೆಗೆ ಲ್ಯಾಂಡ್ ಆಗಲಿದೆ.
ಮಧ್ಯಾಹ್ನ 1.20ಕ್ಕೆ ಮಂಗಳೂರಿನಿಂದ ದುಬೈಗೆ ಹೊರಡಬೇಕಿದ್ದ IX 831 IXE-DXB ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವನ್ನು ರದ್ದುಗೊಳಿಸಲಾಗಿದೆ. ಮಧ್ಯಾಹ್ನ 3 ಗಂಟೆಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ರದ್ದುಗೊಳಿಸಿರುವುದನ್ನು ತಿಳಿಸಿತು. ವಿಮಾನದಲ್ಲಿ ತೆರಳಲು 174 ಪ್ರಯಾಣಿಕರು ಮತ್ತು 6 ಮಂದಿ ಸಿಬ್ಬಂದಿ ಸಿದ್ಧರಾಗಿದ್ದರು ಎಂದು ಮಂಗಳೂರು ವಿಮಾನ ನಿಲ್ದಾಣದ ಪ್ರಕಟನೆ ತಿಳಿಸಿದೆ.
►ಯಾವ್ಯಾವ ವಿಮಾನಗಳು ರದ್ದು ?
ಮಧ್ಯಾಹ್ನ 1.20ಕ್ಕೆ ಮಂಗಳೂರಿನಿಂದ ದುಬೈಗೆ ಹೊರಡಬೇಕಿದ್ದ IX 831 IXE-DXB ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ರದ್ದು.
ಬೆಳಿಗ್ಗೆ 11.17ಕ್ಕೆ ಮಂಗಳೂರಿನಿಂದ ದೋಹಾಕ್ಕೆ ಹೊರಟ IX 821 IXE-DOH ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವನ್ನು ಮುಂಬೈ ವಿಮಾನ ನಿಲ್ದಾಣಕ್ಕೆ ಮಾರ್ಗ ಬದಲಾಯಿಸಿ ಮುಂಬೈನಲ್ಲಿ ಇಳಿಸಲಾಗಿದೆ.
ರಾತ್ರಿ 7.15ಕ್ಕೆ ಮಂಗಳೂರಿನಿಂದ ದುಬೈಗೆ ತೆರಳಬೇಕಿದ್ದ 6E 1467 IXE-DXB ಇಂಡಿಗೋ ವಿಮಾನವನ್ನು ರದ್ದುಗೊಳಿಸಲಾಗಿದೆ.
ರಾತ್ರಿ 11.10ಕ್ಕೆ ಮಂಗಳೂರಿನಿಂದ ದಮಾಮ್ ಗೆ ತೆರಳಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ IX847 IXE-DMM ರದ್ದಾಗಿದೆ.
ರಾತ್ರಿ 8.15ಕ್ಕೆ ಮಂಗಳೂರಿನಿಂದ ದುಬೈಗೆ ತೆರಳಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ IX813 IXE-DXB ರದ್ದಾಗಿದೆ.
ರಾತ್ರಿ 10.05ಕ್ಕೆ ಮಂಗಳೂರಿನಿಂದ ಕುವೈತ್ ಗೆ ತೆರಳಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ IX851 IXE-KWI ರದ್ದು ಮಾಡಲಾಗಿದೆ.
ರಾತ್ರಿ 11.20ಕ್ಕೆ ಮಂಗಳೂರಿನಿಂದ ಅಬುದಾಬಿಗೆ ತೆರಳಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ IX815 IXE-AUH ರದ್ದಾಗಿದೆ.
ಮಧ್ಯಾಹ್ನ 2.15ಕ್ಕೆ ದೋಹಾದಿಂದ ಹೊರಟು ಮಂಗಳೂರಿಗೆ ರಾತ್ರಿ 8.45ಕ್ಕೆ ಬರಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ IX822 DOH-IXE ರದ್ದಾಗಿದೆ.
ಸಂಜೆ 5 ಗಂಟೆಗೆ ದುಬೈನಿಂದ ಹೊರಟು ಮಂಗಳೂರಿಗೆ ರಾತ್ರಿ 10.10ಕ್ಕೆ ತಲುಪಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ IX832 DXB-IXE ರದ್ದಾಗಿದೆ.






