ಅಡ್ಯಾರ್‌ನ ಸಹ್ಯಾದ್ರಿಯಲ್ಲಿ ರಣಜಿ ಪಂದ್ಯ ಆಯೋಜಿಲು ಪ್ರಯತ್ನ : ಜಾವಗಲ್ ಶ್ರೀನಾಥ್

ಮಂಗಳೂರು : ದೇಶಿಯ ಪ್ರಥಮ ದರ್ಜೆ ಕ್ರಿಕೆಟ್ ರಣಜಿ ಟ್ರೋಫಿ ಚಾಂಪಿಯನ್‌ಶಿಪ್‌ನ ಪಂದ್ಯವನ್ನು ಆಯೋಜಿಸಲು ಪೂರಕವಾದ ವ್ಯವಸ್ಥೆಯನ್ನು ಹೊಂದಿದ್ದು, ಮುಂದೆ ಈ ಕ್ರೀಡಾಂಗಣದಲ್ಲಿ ರಣಜಿ ಟ್ರೋಫಿ ಪಂದ್ಯವನ್ನು ಆಯೋಜಿ ಸಲು ಶ್ರಮಿಸಲಾಗುವುದು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಹೇಳಿದ್ದಾರೆ.
ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಶಾಖೆ ಮತ್ತು ವೈದ್ಯಕೀಯ ತಜ್ಞರ ಸಂಘ ಮಂಗಳೂರು ಶಾಖೆಯ ಜಂಟಿ ಆಶ್ರಯದಲ್ಲಿ ಶನಿವಾರ ಅಡ್ಯಾರಿನ ಸಹ್ಯಾದ್ರಿಇಂಜಿನಿಯರಿಂಗ್‌ಕಾಲೇಜು ಮೈದಾನದಲ್ಲಿ ನಡೆದ ಡಾ.ಎಂ.ವಿ. ಶೆಟ್ಟಿ ಮತ್ತು ಡಾ.ಚೌಡಯ್ಯ ಸ್ಮಾರಕ ವಾರ್ಷಿಕ ಐಎಂಎ-ಎಎಂಸಿ ಪ್ರೀಮಿಯರ್ ಲೀಗ್‌ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ನದಿ ತೀರದ ಸುಂದರ ಪರಿಸರದಲ್ಲಿರುವ ಸಹ್ಯಾದ್ರಿ ಕ್ರೀಡಾಂಗಣದಲ್ಲಿರುವ ವ್ಯವಸ್ಥೆಯನ್ನು ವೀಕ್ಷಿಸಿದ ಶ್ರೀನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು.
ವೈದ್ಯಕೀಯ ಸೇವಾ ವೃತ್ತಿಯು ಶ್ರೇಷ್ಠ ಮತ್ತುಗೌರವಾನ್ವಿತ ವೃತ್ತಿಯಾಗಿದ್ದು, ವೈದ್ಯರು ಸೇವಾಕಾರ್ಯದ ಒತ್ತಡವಿದ್ದರೂ ಸಮಯವನ್ನು ಹೊಂದಾಣಿಕೆ ಮಾಡಿಕೊಂಡು ಕ್ರೀಡಾ ಚಟುವಟಿಕೆಗಳಲ್ಲಿ ಉಲ್ಲಾಸದಿಂದ ಭಾಗವಹಿಸುವ ಕಾರ್ಯ ಶ್ಲಾಘನೀಯ ಎಂದರು.
ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ್ ಭಂಡಾರಿ ಅವರು ಸಹ್ಯಾದ್ರಿ ಮೈದಾನವನ್ನು ಅಂತರ್‌ರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣವನ್ನಾಗಿ ರೂಪಿಸಲಾಗುತ್ತಿದೆ ಎಂದರು.
ಡಾ. ಶಾಂತಾರಾಮ್ ಶೆಟ್ಟಿ ವರಿಗೆ ಬ್ಯಾಟಿಂಗ್‌ಗೆ ಬೌಲಿಂಗ್ ನಡೆಸುವ ಮೂಲಕ ಜಾವಗಲ್ ಶ್ರೀನಾಥ್ ಅವರು ಕ್ರಿಕೆಟ್ ಟೂರ್ನಿಯನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಶ್ರೀನಾಥ್ ಅವರನ್ನು ಸನ್ಮಾನಿಸಲಾಯಿತು.
ಜ.1ರಂದು ನಿಧನರಾದ ನಿಟ್ಟೆ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ವಿನಯ್ ಹೆಗ್ಡೆಯವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ನಿಟ್ಟೆ ವಿಶ್ವವಿದ್ಯಾನಿಲಯದ ಪ್ರೊ ಚಾನ್ಸೆಲರ್ ಡಾ. ಶಾಂತಾರಾಂ ಶೆಟ್ಟಿ, ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ.ವೀರಭದ್ರಯ್ಯ, ಗೌರವ ಅತಿಥಿಗಳಾಗಿ ಪ್ರಾಸ್ತಾವಿಕವಾಗಿ ಮಾತನಾಡಿ ತಂಡಗಳಿಗೆ ಶುಭ ಕೋರಿದರು.
ವೇದಿಕೆಯಲ್ಲಿ ಜಿಲ್ಲಾ ವೈದ್ಯಾಧಿಕಾರಿ ಡಾ. ಶಿವಪ್ರಕಾಶ್, ವೈದ್ಯಕೀಯ ತಜ್ಞರ ಸಂಘದ ಅಧ್ಯಕ್ಷ ಡಾ.ಆನಂದ ಬಂಗೇರ, ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ. ಪ್ರಕಾಶ್ ಹರಿಶ್ಚಂದ್ರ,ಕೋಶಾಧಿಕಾರಿ ಡಾ. ಜ್ಯೂಲಿಯನ್ ಸಲ್ಡಾನ್ಹಾ ಮತ್ತು 6 ಸ್ಪರ್ಧಾ ಕ್ರಿಕೆಟ್ ತಂಡಗಳ ಮಾಲಕರು ಉಪಸ್ಥಿತರಿದ್ದರು.
ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಸದಾನಂದ ಪೂಜಾರಿ ಸ್ವಾಗತಿಸಿದರು.ವೈದ್ಯಕೀಯ ತಜ್ಞರ ಸಂಘದ ಕಾರ್ಯದರ್ಶಿ ಡಾ.ಉಲ್ಲಾಸ್ ಶೆಟ್ಟಿ ವಂದಿಸಿದರು. ಡಾ.ಮಧುರಾ ಭಟ್ ಕಾರ್ಯಕ್ರಮ ನಿರೂಪಿಸಿದರು.
*ಸಚ್ಚಿ ಸ್ಟ್ರೈಕರ್ಸ್ ಚಾಂಪಿಯನ್: ಕ್ರಿಕೆಟ್‌ನ ಫೈನಲ್‌ನಲ್ಲಿ ಡಾ. ಸಚ್ಚಿದಾನಂದ ರೈ ಮಾಲಕತ್ವದ ಸಚ್ಚಿ ಸ್ಟ್ರೈಕರ್ಸ್ ತಂಡವು ಚಾಂಪಿಯನ್ ಆಗಿ ಆಕರ್ಷಕ ಪ್ರಶಸ್ತಿ ಮತ್ತು ನಗದು ಬಹುಮಾನ 1,00,000 ರೂ. ಪಡೆಯಿತು. ದ್ವಿತೀಯ ಸ್ಥಾನವನ್ನು ಡಾ. ವಿಕ್ರಮ್ ಶೆಟ್ಟಿ ಮಾಲಕತ್ವದ ವಿಕ್ಕಿ ವೀಕಿಂಗ್ಸ್ ತಂಡ ಪಡೆದು ಪ್ರಶಸ್ತಿ ಮತ್ತು ರೂ. 50,000 ರೂ. ಪಡೆಯಿತು.
ಡಾ. ವಿನೋದ್ ನಾಯಕ್ - ಪಂದ್ಯ ಪುರುಷೋತ್ತಮ, ಸರಣಿ ಶ್ರೇಷ್ಠ, ಡಾ.ನವನೀತ್ - ಅತ್ಯುತ್ತಮ ಸವ್ಯಸಾಚಿ, ಡಾ. ಅಭಯ್-ಶ್ರೇಷ್ಠ ಕ್ಷೇತ್ರ ರಕ್ಷಕ, ಡಾ. ಮಂಜುನಾಥ್ - ಶ್ರೇಷ್ಠ ಬೌಲರ್, ಡಾ. ಪವನ್ ವಿನಯ್ - ಶ್ರೇಷ್ಠ ದಾಂಡಿಗ ವೈಯಕ್ತಿಕ ಪ್ರಶಸ್ತಿ ಪಡೆದರು.
ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಸದಾನಂದ ಪೂಜಾರಿ ಮತ್ತು ವೈದ್ಯಕೀಯ ತಜ್ಞರ ಸಂಘದ ಅಧ್ಯಕ್ಷ ಡಾ. ಆನಂದ ಬಂಗೇರ ಬಹುಮಾನಗಳನ್ನು ವಿತರಿಸಿದರು.







