ಬಜ್ಪೆ | ರೌಡಿಶೀಟರ್ ಪ್ರಶಾಂತ್ ಕಳವಾರು ಸಹಿತ ಮೂವರ ವಿರುದ್ಧ 'ಕೋಕಾ ಕಾಯ್ದೆ' ದಾಖಲು, ಬಂಧನ

ಪ್ರಶಾಂತ್ ಕಳವಾರು, ಅಶ್ವಿತ್ ಮತ್ತು ಗಣೇಶ್
ಬಜ್ಪೆ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆದರಿಕೆ ಹಾಕಿ ಬಲವಂತದಿಂದ ಪಟಾಕಿ ಲೂಟಿ ಮಾಡಿದ ಮೂವರು ಆರೋಪಿಗಳ ವಿರುದ್ಧ ಬಜ್ಪೆ ಪೊಲೀಸರು ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.
ಬಂಧಿತರನ್ನು ರೌಡಿ ಶೀಟರ್ ಪ್ರಶಾಂತ್ ಕಳವಾರು ಯಾನೆ ಪಚ್ಚು, ಗಣೇಶ್ ಮತ್ತು ಅಶ್ವಿತ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಂಘಪರಿವಾರದ ಕಾರ್ಯಕರ್ತನೂ ಆಗಿರುವ ಪ್ರಶಾಂತ್ ಕಳವಾರು ವಿರುದ್ಧ ಕೊಲೆ ಮತ್ತು ನಾಲ್ಕು ಕೊಲೆಯತ್ನ ಪ್ರಕರಣಗಳು ಸೇರಿದಂತೆ ತನಿಖೆ ಮತ್ತು ವಿಚಾರಣೆಯ ವಿವಿಧ ಹಂತದ 14 ಪ್ರಕರಣಗಳಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗಣೇಶ್ ವಿರುದ್ಧ 4 ಪ್ರಕರಣಗಳಿವೆ, ಇದರಲ್ಲಿ ಎರಡು ಕೊಲೆಯತ್ನ ಪ್ರಕರಣಗಳು ತನಿಖೆ ಮತ್ತು ವಿಚಾರಣೆಯ ವಿವಿಧ ಹಂತದಲ್ಲಿವೆ.
ಅಶ್ವಿತ್ ವಿರುದ್ಧ ಒಂದು ಪ್ರಕರಣವಿದ್ದು, ಅದನ್ನು ಖುಲಾಸೆಗೊಳಿಸಲಾಗಿದೆ. ಆದರೆ ಪಟಾಕಿ ದರೋಡೆ ನಡೆಸಿದ ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳೊಂದಿಗೆ ಭಾಗಿಯಾಗಿ ಅವರ ಗ್ಯಾಂಗ್ ಸದಸ್ಯನಾಗಿರುವ ಕಾರಣ ಅಶ್ವಿತ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.





