ಬಂಟ್ವಾಳ | ಅಬ್ದುಲ್ ರಹ್ಮಾನ್ ಹತ್ಯೆ ಪ್ರಕರಣ: ಕಲ್ಲಡ್ಕ ಪ್ರಭಾಕರ್ ಭಟ್ಗೆ ಪೊಲೀಸ್ ನೋಟೀಸ್

ಕಲ್ಲಡ್ಕ ಪ್ರಭಾಕರ್ ಭಟ್ - ಅಬ್ದುಲ್ ರಹ್ಮಾನ್
ಬಂಟ್ವಾಳ : ಅಬ್ದುಲ್ ರಹ್ಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಇಲಾಖೆಯಿಂದ ನೋಟೀಸ್ ನೀಡಲಾಗಿದ್ದು ವಿಚಾರಣೆಗೆ ಹಾಜರಾಗು ವಂತೆ ಸೂಚನೆ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ.
ಪ್ರಕರಣದ ಹಿನ್ನೆಲೆ:-
2025ರ ಮೇ 25ರಂದು ಬಂಟ್ವಾಳ ತಾಲೂಕಿನ ಕುರಿಯಾಲ ಗ್ರಾಮದ ಇರಾಕೋಡಿ ಬಳಿ ಅಬ್ದುಲ್ ರಹ್ಮಾನ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪಿಕ್ಅಪ್ ನಿಂದ ಮರಳು ಇಳಿಸುತ್ತಿದ್ದ ವೇಳೆ ಈ ಮಾರಣಾಂತಿಕ ದಾಳಿ ನಡೆದಿತ್ತು.
ಈ ಘಟನೆಯಲ್ಲಿ ರಹ್ಮಾನ್ ಜೊತೆಗಿದ್ದ ಕಲಂದರ್ ಶಾಫಿ ಎಂಬವರ ಮೇಲೆಯೂ ಗಂಭೀರ ಹಲ್ಲೆ ನಡೆಸಲಾಗಿತ್ತು. ಸುಹಾಸ್ ಶೆಟ್ಟಿ ಹತ್ಯೆಯಾದ ಕೆಲವೇ ದಿನಗಳಲ್ಲಿ ಈ ಕೃತ್ಯ ನಡೆದಿದ್ದರಿಂದ, ಇದು ಪ್ರತಿಕಾರದ ಕೊಲೆ ಇರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು ಮತ್ತು ರಾಜ್ಯಾದ್ಯಂತ ದೊಡ್ಡ ಸಂಚಲನ ಮೂಡಿಸಿತ್ತು.
ಈ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು, ಹತ್ಯೆಯಾದ ಸಮಯದಲ್ಲಿ ಆರೋಪಿಗಳ ಜೊತೆ ಕಲ್ಲಡ್ಕ ಪ್ರಭಾಕರ್ ಭಟ್ ನಿರಂತರವಾಗಿ ಫೋನ್ ಸಂಪರ್ಕದಲ್ಲಿದ್ದರು ಎಂಬ ಅನುಮಾನದ ಮೇರೆಗೆ ಈ ನೋಟೀಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ:54/2025 ಪ್ರಕರಣದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆಯನ್ನು ದಾಖಲಿಸಲು ಬಾಕಿಯಿದ್ದು, ಹೇಳಿಕೆ ಪಡೆಯುವ ಸಲುವಾಗಿ ಸಾಕ್ಷಿದಾರ ನೋಟೀಸ್ ಜಾರಿ ಮಾಡಲಾಗಿರುತ್ತದೆ. ಅವರ ಹೇಳಿಕೆ ದಾಖಲಿಸಿಕೊಂಡ ಬಳಿಕ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗುವುದು ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ತಿಳಿಸಿದ್ದಾರೆ.






