ಬರಕಾ ಇಂಟರ್ ನ್ಯಾಶನಲ್ ಸ್ಕೂಲ್ ನಲ್ಲಿ 'ಬರಕಾ ಟಿಂಕರ್-ಫೆಸ್ಟ್ 2025'

ಮಂಗಳೂರು, ಫೆ.20: ಬರಕಾ ಇಂಟರ್ ನ್ಯಾಶನಲ್ ಸ್ಕೂಲ್ ತನ್ನ ಸಭಾಂಗಣದಲ್ಲಿ ಅತ್ಯಾಧುನಿಕ ರೊಬೊಟಿಕ್ಸ್ ಮತ್ತು ನಾವೀನ್ಯತೆಯ ಕಾರ್ಯಕ್ರಮವಾದ 'ಬರಕಾ ಟಿಂಕರ್-ಫೆಸ್ಟ್ 2025'ನ್ನು ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ನಾವೀನ್ಯತೆ ಮತ್ತು ಸಮಸ್ಯೆಯನ್ನು ಪರಿಹರಿಸುವ ಕೌಶಲ್ಯಗಳನ್ನು ಬೆಳೆಸುವ ಗುರಿಯನ್ನು ಹೊಂದಿರುವ ಬರಕಾ ಟಿಂಕರ್-ಫೆಸ್ಟ್ 2025'ನ್ನು ಮೀಫ್ ಅಧ್ಯಕ್ಷ ಮೂಸಬ್ಬ ಬ್ಯಾರಿ ಉದ್ಘಾಟಿಸಿದರು.
ಉತ್ಸವವು ಬರಕಾ ಇಂಟರ್ ನ್ಯಾಶನಲ್ ಸ್ಕೂಲ್ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ನವೀನ ರೊಬೊಟಿಕ್ಸ್ ಯೋಜನೆಗಳನ್ನು ಪ್ರದರ್ಶಿಸಿದರು. ಇದರಲ್ಲಿ ಸ್ವಯಂಚಾಲಿತ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳು, ಎಐ ಚಾಲಿತ ಸಹಾಯ ಬೂಟುಗಳು ಮತ್ತು ಸ್ಮಾರ್ಟ್ ಹೋಮ್ ಮೂಲ ಮಾದರಿಗಳು ಒಳಗೊಂಡಿವೆ. ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ತಮ್ಮ ವಿಮರ್ಶಾತ್ಮಕ ಚಿಂತನೆ, ಸಮೂಹ ಸ್ಫೂರ್ತಿ ಮತ್ತು ತಾಂತ್ರಿಕ ಕೌಶಲ್ಯಗಳನ್ನು ಪ್ರದರ್ಶಿಸಲು ಒಂದು ವೇದಿಕೆಯನ್ನು ಒದಗಿಸಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬರಕಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಅಶ್ರಫ್ ಮಾತನಾಡಿ, "ಟಿಂಕರ್ ಫೆಸ್ಟ್ ನಮ್ಮ ವಿದ್ಯಾರ್ಥಿಗಳಿಗೆ ಉತ್ತಮ ಅನುಭವವಾಗಿದ್ದು, ರೊಬೊಟಿಕ್ಸ್ ಮತ್ತು ನಾವೀನ್ಯತೆಯ ರೋಮಾಂಚಕ ಜಗತ್ತನ್ನು ಅನ್ವೇಷಿಸಲು ಅನುವು ಮಾಡಿಕೊಡುತ್ತದೆ" ಎಂದು ಹೇಳಿದರು.
"ನಮ್ಮ ವಿದ್ಯಾರ್ಥಿಗಳಿಗೆ ಭವಿಷ್ಯಕ್ಕಾಗಿ ಅಗತ್ಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅವಕಾಶಗಳನ್ನು ಒದಗಿಸಲು ನಾವು ಹೆಮ್ಮೆಪಡುತ್ತೇವೆ" ಎಂದವರು ಹೇಳಿದರು.
ಪರ್ವೇಝ್ ಅಲಿ, ಮುಹಮ್ಮದ್ ಇಸ್ಹಾಕ್ ಪುತ್ತೂರು, ರೊಬೊಟಿಕ್ಸ್ ದಕ್ಷಿಣ ಕನ್ನಡ ಮತ್ತು ಉಡುಪಿ ವಲಯದ ತಂಡದ ಮುಖ್ಯಸ್ಥ ಪ್ರಣಮ್ ಆಚಾರ್ಯ, ಟಿಂಕರ್ ರೊಬೊಟಿಕ್ಸ್ ನ ಸಹ ಸಂಸ್ಥಾಪಕ ಅಭಿಲಾಷ್ ಮೊದಲಾದವರು ಉಪಸ್ಥಿತರಿದ್ದರು.