ಬ್ಯಾರೀಸ್ ನಾಲೆಜ್ ಕ್ಯಾಂಪಸ್ ನಲ್ಲಿ 'ಬ್ಯಾರೀಸ್ ಕ್ಯಾಂಪಸ್ ಕನೆಕ್ಟ್' ಕಾರ್ಯಕ್ರಮ

ಕೊಣಾಜೆ: ಬದುಕಿನ ಪಯಣದಲ್ಲಿ ವಿದ್ಯೆಯ ಜೊತೆಗೆ ವ್ಯಕ್ತಿತ್ವ, ಕೌಶಲ್ಯ, ಆಸಕ್ತಿಯು ಬಹುಮುಖ್ಯ ಪಾತ್ರ ವಹಿಸುತ್ತದೆ. ಉದ್ದೇಶಿತ ಗುರಿಯನ್ನು ಪರಿಶ್ರಮ, ಶಿಸ್ತುಬದ್ದ ಜೀವನ ಕ್ರಮದಿಂದ ಸಾಧಿಸಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿ ದೆಸೆಯಲ್ಲೇ ತಮ್ಮ ಭವಿಷ್ಯದ ಕನಸಿನೊಂದಿಗೆ ಬದುಕಿನ ಮೌಲ್ಯಗಳನ್ನು ಬೆಳೆಸಿಕೊಂಡು ಮುನ್ನಡೆಯಬೇಕು ಎಂದು ಸಿಗ್ಮಾ ಇಂಡಿಯಾದ ಸ್ಥಾಪಕ ಮತ್ತು ಸಿಇಒ ಅಮೀನ್ ಎ. ಮುದಸ್ಸರ್ ಅವರು ಹೇಳಿದರು.
ನಗರದ ಇನೋಳಿಯ ಬ್ಯಾರೀಸ್ ನಾಲೆಜ್ ಕ್ಯಾಂಪಸ್‌ನಲ್ಲಿ ಶನಿವಾರದಂದು ನಡೆದ ವಿದ್ಯಾರ್ಥಿಗಳು, ಪೋಷಕರಿಗಾಗಿ ಆಯೋಜಿಸಲಾದ 'ಬ್ಯಾರೀಸ್ ಕ್ಯಾಂಪಸ್ ಕನೆಕ್ಟ್' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೋಷಕರು ವಿದ್ಯಾರ್ಥಿಗಳೊಂದಿಗೆ ಕೇವಲ ರ‍್ಯಾಂಕ್, ಅಂಕಗಳ ಕುರಿತು ಮಾತ್ರ ಚರ್ಚಿಸದೆ ವಿದ್ಯಾರ್ಥಿಗಳ ಭವಿಷ್ಯ ಹಾಗೂ ಬದುಕಿನ ಆಯ್ಕೆಗಳ ಬಗ್ಗೆಯೂ ಯೋಚಿಸಬೇಕು. ಮಕ್ಕಳಲ್ಲಿ ಪರೀಕ್ಷೆಗೂ ಮುನ್ನ ಒತ್ತಡ ಇದ್ದರೆ ಪರೀಕ್ಷೆ ಬಳಿಕ ಸಂತಸಗೊಳ್ಳುತ್ತಾರೆ. ಆದ್ರೆ ಮಕ್ಕಳ ನಿರೀಕ್ಷೆ ಈಡೇರದಿದ್ದರೆ ಪೋಷಕರು ಯಾವತ್ತೂ ಅವರ ಮನಸ್ಸು ನೋಯಿಸಬಾರದು ಎಂದು ಅಮೀನ್ ಎ ಮುದಸ್ಸರ್ ಕರೆ ನೀಡಿದರು.
ಎಸೆಸೆಲ್ಸಿ ಮತ್ತು ಪಿಯುಸಿ ಶಿಕ್ಷಣ ಮುಂದಿನ ಉನ್ನತ ಶಿಕ್ಷಣಕ್ಕ ಅಡಿಪಾಯವಾಗಿದೆ. ಪದವಿಪೂರ್ವ ಶಿಕ್ಷಣದಲ್ಲಿ ಪಡೆಯುವ ಅಂಕ ಅತಿ ಮುಖ್ಯ. ದೇಶದಲ್ಲಿ ಸುಮಾರು 22 ಪ್ರವೇಶಾತಿ ಪರೀಕ್ಷೆ ಇದ್ದು ಅಂಕ ಚೆನ್ನಾಗಿ ಪಡೆದರೆ ಮಾತ್ರ ವಿವಿಧ ಆಯ್ಕೆಗಳಿಗೂ ಅವಕಾಶಗಳಿವೆ ಎಂದರು.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಜಿನೇಂದ್ರ ಕೋಟ್ಯಾನ್ ಸ್ಕಾಲರ್ಷಿಪ್ ಬಗ್ಗೆ ಮಾಹಿತಿ ನೀಡಿದರು.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮಾಹಿತಿ ವಿಭಾಗದ ಮುಹಮ್ಮದ್ ನಝೀರ್, ಬೀಡ್ಸ್ ಪ್ರಾಂಶುಪಾಲ ಅರ್. ಖಲೀಲ್ ರಝಾಕ್, ಪಾಲಿಟೆಕ್ನಿಕ್ ಕಾಲೇಜಿನ ನಿರ್ದೇಶಕ ಪ್ರೊ.ಪೃಥ್ವಿರಾಜ್, ಇಂಟಿಗ್ರೇಟೆಡ್ ಪಿಯು ಕಾಲೇಜು ಪ್ರಾಂಶುಪಾಲ ಅಬ್ದುಲ್ ಲತೀಫ್ ಮೊದಲಾದವರು ಉಪಸ್ಥಿತರಿದ್ದರು.
ಬಿಐಟಿ ಪ್ರಾಂಶುಪಾಲ ಡಾ.ಮಂಜೂರ್ ಬಾಷಾ ಸ್ವಾಗತಿಸಿದರು. ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಎಮರ್ಜಿಂಗ್ ಸಯನ್ಸಸ್ ಪ್ರಾಂಶುಪಾಲ ಡಾ.ಆಝೀಝ್ ಮುಸ್ತಫಾ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು.
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಅಬ್ದುಲ್ಲಾ ಗುಬ್ಬಿ ವಂದಿಸಿದರು. ಉಪನ್ಯಾಸಕರಾದ ಮಿಯಾಝ್, ಹನೀನಾ ಶೇಖ್ ಹಾಗೂ ಅಫ್ರೀನಾ ಕಾರ್ಯಕ್ರಮ ನಿರೂಪಿಸಿದರು.
ಪತ್ರಿಕೆ ಓದುವ ಅಭ್ಯಾಸ ರೂಢಿಸಿಕೊಳ್ಳಿ :
ಪೋಷಕರು ಮಕ್ಕಳಿಗೆ ಮನೆಯಲ್ಲಿ ನಿತ್ಯವೂ ಪತ್ರಿಕೆ ಓದಿಸುವ ಅಭ್ಯಾಸ ಬೆಳೆಸದಿದ್ದರೆ ಮಕ್ಕಳ ಜ್ಞಾನ ವೃದ್ಧಿಸದು. ಮಕ್ಕಳಿಗೆ ಯಾವುದೇ ಭಾಷೆಯದ್ದಾಗಲೀ ಪತ್ರಿಕೆಯನ್ನು ಓದಿಸುವ ಅಭ್ಯಾಸ ರೂಢಿ ಮಾಡಿಸಬೇಕು.
- ಅಮೀನ್ ಎ. ಮುದಸ್ಸರ್
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನದ ಅರಿವು, ಸರಕಾರಿ ವಿದ್ಯಾರ್ಥಿ ವೇತನ ಮತ್ತು ಹಾಸೆಲ್ಟ್ ಸೌಲಭ್ಯಗಳ ಮಾಹಿತಿ, ಎಸೆಸೆಲ್ಸಿ- ಪಿಯುಸಿ ಹಾಗೂ ಡಿಪ್ಲೊಮಾದ ಟಾಪರ್‌ಗಳಿಗೆ ಗೌರವ, ವಿವಿಧ ವಿದ್ಯಾರ್ಥಿಗಳ ಸೃಜನಶೀಲ ಪ್ರಾಜೆಕ್ಟ್‌ಗಳ ಪ್ರದರ್ಶನ, ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರೋತ್ಸಾಹದ ಜತೆಗೆ ಕಾರ್ಯಕ್ರಮದಲ್ಲಿ ಆಹಾರ ಮೇಳವನ್ನೂ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿವಿಧ ಕಡೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರು ಉತ್ಸಾಹದಿಂದ ಪಾಲ್ಗೊಂಡರು.