ಬ್ಯಾರೀಸ್ ಗ್ರೂಪ್ ನ ಪದವಿ ಪ್ರದಾನ ಸಮಾರಂಭ; ‘ಆಲ್ಫಾ’ ಕಟ್ಟಡ ಉದ್ಘಾಟನೆ

ಮಂಗಳೂರು: ಬ್ಯಾರೀಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ನ 2026ನೇ ಸಾಲಿನ ಪದವಿ ಪ್ರದಾನ ಸಮಾರಂಭವು ಶನಿವಾರ ಇನ್ನೋಳಿಯ ಲ್ಯಾಂಡ್ಸ್ ಎಂಡ್ ನಲ್ಲಿರುವ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್ ನಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಬ್ಯಾರೀಸ್ ಎನ್ವಿರೋ-ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ನ (BEADS) ನೂತನ ಕಟ್ಟಡ ‘ಆಲ್ಫಾ’ವನ್ನು ಉದ್ಘಾಟಿಸಲಾಯಿತು.
ಮಂಗಳೂರು ವಿಶ್ವವಿದ್ಯಾಲಯದ ಸಮೀಪದ ಕ್ಯಾಂಪಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ BEADSನ ಏಳನೇ, ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಎಮರ್ಜಿಂಗ್ ಸೈನ್ಸಸ್ನ (BIES) ಎರಡನೇ ಹಾಗೂ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (BIT) 14ನೇ ಪದವಿ ಪ್ರದಾನ ಸಮಾರಂಭ ನಡೆಯಿತು. ಪದವೀಧರರು, ಅಧ್ಯಾಪಕರು, ಪೋಷಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಪ್ರಮುಖರು ಪಾಲ್ಗೊಂಡಿದ್ದರು.
ಚೆನ್ನೈನ ಬಿ.ಎಸ್. ಅಬ್ದುರ್ ರೆಹಮಾನ್ ಕ್ರೆಸೆಂಟ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯ RICS ನಿರ್ದೇಶಕ ಪ್ರೊ. ಡಾ. ಜಾಫರ್ ಎ.ಎ. ಖಾನ್ ಅವರು ‘ಆಲ್ಫಾ’ ಕಟ್ಟಡವನ್ನು ಉದ್ಘಾಟಿಸಿದರು. ವಾಸ್ತುಶಿಲ್ಪ ಶಿಕ್ಷಣಕ್ಕೆ ಅಗತ್ಯವಾದ ಮೂಲಸೌಕರ್ಯವನ್ನು ಬಲಪಡಿಸುವ ಹಾಗೂ ನಿರ್ಮಿತ ಪರಿಸರ ಕ್ಷೇತ್ರದ ಭವಿಷ್ಯದ ವೃತ್ತಿಪರರನ್ನು ರೂಪಿಸುವ ನಿಟ್ಟಿನಲ್ಲಿ ಈ ಕಟ್ಟಡ ಮಹತ್ವದ ಮೈಲಿಗಲ್ಲಾಗಿದೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (IISc) ಅಂತರಶಿಸ್ತೀಯ ಇಂಧನ ಸಂಶೋಧನಾ ಕೇಂದ್ರದ (ICER) ಪ್ರಾಧ್ಯಾಪಕ ಹಾಗೂ ಅಧ್ಯಕ್ಷ ಡಾ. ಪ್ರಮೋದ್ ಕುಮಾರ್ ಮುಖ್ಯ ಅತಿಥಿಯಾಗಿದ್ದರು. ಸುರತ್ಕಲ್ ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕದ (NITK) ನಿರ್ದೇಶಕ ಪ್ರೊ. ಬಿ. ರವಿ ಪದವಿ ಪ್ರದಾನ ಭಾಷಣ ಮಾಡಿದರು. ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್ನ ಅಧ್ಯಕ್ಷ ಸೈಯದ್ ಮೊಹಮ್ಮದ್ ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು.
AI ಯುಗದಲ್ಲಿ ಮಾನವೀಯ ಮೌಲ್ಯ ಉಳಿಸಿಕೊಳ್ಳಿ :
ಪದವೀಧರರನ್ನು ಉದ್ದೇಶಿಸಿ ಮಾತನಾಡಿದ ಡಾ. ಪ್ರಮೋದ್ ಕುಮಾರ್, ಕೈಗಾರಿಕಾ ಕ್ರಾಂತಿ ಹಾಗೂ ಕೃತಕ ಬುದ್ಧಿಮತ್ತೆಯ (AI) ಪರಿವರ್ತನಾಶೀಲ ಸಾಮರ್ಥ್ಯವನ್ನು ವಿವರಿಸಿದರು. AI ಆಧಾರಿತ ಕೈಗಾರಿಕಾ ಕ್ರಾಂತಿಯು ಹಿಂದಿನ ಕೈಗಾರಿಕಾ ಪರಿವರ್ತನೆಗಳಿಗಿಂತಲೂ ವ್ಯಾಪಕ ಪರಿಣಾಮ ಬೀರಲಿದೆ. ಹೀಗಾಗಿ, ಮಾನವ ಸಮಾಜವು AIಗೆ ಹೊಂದಿಕೊಳ್ಳುವ ಹಾಗೂ ಅದರೊಂದಿಗೆ ಮುನ್ನಡೆಯುವ ವಿಧಾನವನ್ನು ಅರ್ಥಮಾಡಿಕೊಳ್ಳುವುದು ಅಗತ್ಯ ಎಂದು ಹೇಳಿದರು.
ಪ್ರೊ. ಬಿ. ರವಿ ಅವರು ಕೃತಕ ಬುದ್ಧಿಮತ್ತೆ, ಇಂಜಿನಿಯರಿಂಗ್ ಮತ್ತು ಮಾಧ್ಯಮ ಕ್ಷೇತ್ರಗಳನ್ನು ಸಮಾಜ ಎದುರಿಸುತ್ತಿರುವ ಮೂರು ಪ್ರಮುಖ ಸವಾಲುಗಳೆಂದು ಗುರುತಿಸಿದರು. AIಗೆ ಹೊಂದಿಕೊಳ್ಳುವಾಗ ಸಹಾನುಭೂತಿ ಸೇರಿದಂತೆ ಮಾನವೀಯ ಮೌಲ್ಯಗಳನ್ನು ಉಳಿಸಿಕೊಳ್ಳಬೇಕು. ಉತ್ತಮ ಇಂಜಿನಿಯರ್ ಗಳಾಗಲು ಕುತೂಹಲವನ್ನು ಕಾಪಾಡಿಕೊಳ್ಳಬೇಕು. ಧ್ರುವೀಕರಣ ಹೆಚ್ಚುತ್ತಿರುವ ಮಾಧ್ಯಮ ಪರಿಸರದಲ್ಲಿ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇತರರ ಅಭಿಪ್ರಾಯಗಳನ್ನೇ ಆಧರಿಸಿ ತೀರ್ಮಾನಕ್ಕೆ ಬರುವ ಬದಲು, ವಿಷಯಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಿ ಸ್ವಂತ ಮೌಲ್ಯಮಾಪನ ಮಾಡಿಕೊಳ್ಳಬೇಕು ಎಂದು ಹೇಳಿದರು. ಬ್ಯಾರೀಸ್ ಗ್ರೂಪ್ನ ಬೆಳವಣಿಗೆಗೆ ಸೈಯದ್ ಮೊಹಮ್ಮದ್ ಬ್ಯಾರಿ ನೀಡಿದ ಮಹತ್ವದ ಕೊಡುಗೆಯನ್ನು ಶ್ಲಾಘಿಸಿದರು.
ವಾಸ್ತುಶಿಲ್ಪ, ಎಂಜಿನಿಯರಿಂಗ್ ಸಹಯೋಗ ಅಗತ್ಯ :
‘ಆಲ್ಫಾ’ ಕಟ್ಟಡ ಉದ್ಘಾಟಿಸಿದ ಪ್ರೊ. ಡಾ. ಜಾಫರ್ ಎ.ಎ. ಖಾನ್, ಬ್ಯಾರೀಸ್ ಗ್ರೂಪ್ ನ ಬೆಳವಣಿಗೆಯನ್ನು ಶ್ಲಾಘಿಸಿ, ಅದರ ಭವಿಷ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಸಂಸ್ಥೆಯು ಮತ್ತಷ್ಟು ವಿಸ್ತರಣೆಯಾಗುವ ಸಾಮರ್ಥ್ಯ ಹೊಂದಿದ್ದು, ಮುಂಬರುವ ವರ್ಷಗಳಲ್ಲಿ ವಿಶ್ವವಿದ್ಯಾಲಯವಾಗಿ ಬೆಳೆಯುವ ನಿರೀಕ್ಷೆಯಿದೆ ಎಂದರು.
ನಿರ್ಮಿತ ಪರಿಸರ ಕ್ಷೇತ್ರದಲ್ಲಿ ಅಂತರಶಿಸ್ತೀಯ ಸಹಯೋಗದ ಮಹತ್ವವನ್ನು ಒತ್ತಿಹೇಳಿದ ಅವರು, ನವೀನ ಮತ್ತು ಸುಸ್ಥಿರ ಪರಿಹಾರಗಳನ್ನು ರೂಪಿಸಲು ವಾಸ್ತುಶಿಲ್ಪಿಗಳು ಹಾಗೂ ಇಂಜಿನಿಯರ್ ಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವ ಬದಲು ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ನೈತಿಕತೆ, ಸಾಮಾಜಿಕ ಹೊಣೆಗಾರಿಕೆಗೆ ಆದ್ಯತೆ :
ಅಧ್ಯಕ್ಷೀಯ ಭಾಷಣ ಮಾಡಿದ ಸೈಯದ್ ಮೊಹಮ್ಮದ್ ಬ್ಯಾರಿ, ನಂಬಿಕೆ, ಸಮಗ್ರತೆ, ಜವಾಬ್ದಾರಿ ಮತ್ತು ವೃತ್ತಿಪರ ಶ್ರೇಷ್ಠತೆಯ ಮಹತ್ವವನ್ನು ವಿವರಿಸಿದರು. ಸ್ವಾರ್ಥದ ಉದ್ದೇಶದಿಂದ ಮಾತ್ರವಲ್ಲದೆ, ಪ್ರಾಮಾಣಿಕವಾಗಿ ಅರ್ಥಪೂರ್ಣ ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಹುಡುಕುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಪದವೀಧರರಿಗೆ ಕರೆ ನೀಡಿದರು.
ಪ್ರಾರ್ಥನೆಯು ಶಕ್ತಿಯ ಮೂಲವಾಗಿದ್ದು, ದೇವರನ್ನು ಜೀವನದ ಸ್ನೇಹಿತ ಮತ್ತು ಪಾಲುದಾರನನ್ನಾಗಿ ಕಾಣಬೇಕು. ಜೀವನದ ಸಾಧ್ಯತೆಗಳಿಗೆ ಮುಕ್ತವಾಗಿರಬೇಕು ಹಾಗೂ ಅದು ಒದಗಿಸುವ ಅವಕಾಶಗಳನ್ನು ಗುರುತಿಸಬೇಕು ಎಂದು ಹೇಳಿದರು.
ಮಾತು ಮತ್ತು ಕೃತಿಗಳ ನಡುವೆ ಹೊಂದಾಣಿಕೆ ಇರಬೇಕು. ಸತ್ಯತೆ ಮತ್ತು ವಿಶ್ವಾಸಾರ್ಹತೆಯನ್ನು ಜೀವನದ ಮೌಲ್ಯಗಳನ್ನಾಗಿ ಅಳವಡಿಸಿಕೊಂಡು, ವೃತ್ತಿಪರ ಸಾಧನೆಗಳ ಜತೆಗೆ ಸಮಾಜಕ್ಕೆ ನೀಡುವ ಕೊಡುಗೆಗಳ ಮೂಲಕ ಅರ್ಥಪೂರ್ಣ ಪರಂಪರೆಯನ್ನು ನಿರ್ಮಿಸಬೇಕು ಎಂದು ಸಲಹೆ ನೀಡಿದರು.
ವೈಯಕ್ತಿಕ ಸಾಮಾಜಿಕ ಹೊಣೆಗಾರಿಕೆಯ (ISR) ಪರಿಕಲ್ಪನೆಯನ್ನು ಪ್ರತಿಪಾದಿಸಿದ ಅವರು, ಸಮಾಜಕ್ಕೆ ಕೊಡುಗೆ ನೀಡುವ ಜವಾಬ್ದಾರಿಯನ್ನು ಸಂಪೂರ್ಣವಾಗಿ ಸಂಸ್ಥೆಗಳ ಮೇಲೆ ಬಿಡದೆ ಪ್ರತಿಯೊಬ್ಬರೂ ತಮ್ಮ ಪಾಲಿನ ಹೊಣೆಗಾರಿಕೆಯನ್ನು ನಿರ್ವಹಿಸಬೇಕು ಎಂದರು.
ಗಳಿಸುವುದಕ್ಕೂ ಮೊದಲು ದಾನಕ್ಕೆ ಆದ್ಯತೆ ನೀಡಬೇಕು ಎಂಬ ತತ್ವವನ್ನು ಉಲ್ಲೇಖಿಸಿದ ಅವರು, ಪದವೀಧರರು ಉದ್ಯೋಗ ಹುಡುಕುವವರಾಗುವುದರ ಜತೆಗೆ ಉದ್ಯೋಗ ಸೃಷ್ಟಿಸುವವರಾಗಿಯೂ ಬೆಳೆಯಬೇಕು ಎಂದು ಕರೆ ನೀಡಿದರು. 21ನೇ ಶತಮಾನವು ಭಾರತ ಮತ್ತು ಯುವ ವೃತ್ತಿಪರರಿಗೆ ಅಪಾರ ಅವಕಾಶಗಳನ್ನು ಒದಗಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್ನ ನಿರ್ದೇಶಕ ಡಾ. ಎಸ್.ಐ. ಮಂಜುರ್ ಬಾಷಾ ಸ್ವಾಗತಿಸಿದರು. BITಯ ಪ್ರಾಂಶುಪಾಲ ಡಾ. ಸಿ. ಕಮಲಕಣ್ಣನ್ ವಂದಿಸಿದರು. ಡಾ. ಪೂಜಾ ಮತ್ತು ಜಾಯ್ಸನ್ ಮಿರಾಂಡ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪುರದ ಕೋಡಿಯಲ್ಲಿರುವ ಬ್ಯಾರೀಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ನ ಅಧ್ಯಕ್ಷ ಅಬ್ದುಲ್ ರೆಹಮಾನ್ ಬೇರಿ ಹಾಗೂ ಟ್ರಸ್ಟಿ ಡಾ. ಆಸಿಫ್ ಬೇರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.






