ಬ್ಯಾರೀಸ್ ತಾಂತ್ರಿಕ ಶಿಕ್ಷಣ ಸಂಸ್ಥೆಯಿಂದ 'ಮೀಫ್'ಗೆ ಉಚಿತ ಸೀಟುಗಳ ಕೊಡುಗೆ

ಮಂಗಳೂರು: ಬ್ಯಾರೀಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ ಅವರು B.E., B.Arch, B.C.A., B.Com, BBA, ಡಿಪ್ಲೊಮಾ ಮತ್ತು PUC ಸೇರಿದಂತೆ ವಿವಿಧ ಶೈಕ್ಷಣಿಕ ವಿಭಾಗಗಳಲ್ಲಿ 63 ಉಚಿತ ಸೀಟ್ಗಳನ್ನು 'ಮೀಫ್' ಸಂಸ್ಥೆಗೆ ನೀಡಿದ್ದಾರೆ.
ಈ ಶ್ಲಾಘನೀಯ ಪ್ರಯತ್ನವು ಗುಣಮಟ್ಟದ ಮತ್ತು ಸುಲಭವಾಗಿ ಲಭ್ಯವಾಗುವ ಶಿಕ್ಷಣವನ್ನು ಉತ್ತೇಜಿಸುವುದು, ಅರ್ಹ ವಿದ್ಯಾರ್ಥಿಗಳನ್ನು ಸಬಲಗೊಳಿಸುವುದು ಹಾಗೂ ಸಮುದಾಯದ ಶೈಕ್ಷಣಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುವುದನ್ನು ಪ್ರತಿಬಿಂಬಿಸುತ್ತದೆ ಎಂದು ಮೀಫ್ ಕೇಂದ್ರ ಸಮಿತಿಯ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಮಹತ್ವದ ಕೊಡುಗೆಗಾಗಿ ಸಂಸ್ಥೆಯ ಅಧ್ಯಕ್ಷ ಹಾಗೂ ಸಲಹೆಗಾರ ಸಯ್ಯದ್ ಮುಹಮ್ಮದ್ ಬ್ಯಾರಿಯವರಿಗೆ ಮೀಫ್ ಸಂಸ್ಥೆಯ ವತಿಯಿಂದ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇವೆ. ಶಿಕ್ಷಣ ಕ್ಷೇತ್ರದಲ್ಲಿ ಅವರ ನಿರಂತರ ಸೇವೆ ಮತ್ತು ಸಮಾಜದ ಮೇಲಿನ ಕಾಳಜಿ ನಿಜಕ್ಕೂ ಪ್ರೇರಣಾದಾಯಕ ಎಂದು ಮೂಸಬ್ಬ ಪಿ. ಬ್ಯಾರಿ ಹೇಳಿದ್ದಾರೆ.
ಸಮುದಾಯದ ಪ್ರತಿಭಾನ್ವಿತ, ಆರ್ಥಿಕವಾಗಿ ಹಿಂದುಳಿದ/ಅನಾಥ ವಿದ್ಯಾರ್ಥಿಗಳಿಗೆ ಎಸೆಸೆಲ್ಸಿ/ಪಿಯುಸಿ ನಂತರದ ಶಿಕ್ಷಣವನ್ನು ಮುಂದುವರಿಸಲು ಇಂತಹ ವಿದ್ಯಾ ಸಂಸ್ಥೆಗಳು ಸಹಾಯ ಹಸ್ತ ನೀಡುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಅವಕಾಶ ದೊರೆತಂತಾಗಿದೆ. ಬ್ಯಾರೀಸ್ ಶಿಕ್ಷಣ ಸಂಸ್ಥೆಯ ಈ ಸೀಟುಗಳು ಸೇರಿ ಮುಂಬರುವ ಶೈಕ್ಷಣಿಕ ವರ್ಷಕ್ಕೆ ಮೀಫ್ ಸಂಸ್ಥೆಗೆ ಒಂಭತ್ತು ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳು 533 ಸೀಟುಗಳನ್ನು ಉಚಿತವಾಗಿ ನೀಡಿವೆ. ಅಲೈಡ್ ಸೈನ್ಸ್ ವಿಭಾಗದಲ್ಲಿ ಪ್ಯಾರಾ ಮೆಡಿಕಲ್ ಕಾಲೇಜುಗಳಲ್ಲಿ ಮೀಫ್ ಸಂಸ್ಥೆಗೆ ಸುಮಾರು 100 ಉಚಿತ ಸೀಟುಗಳು ಲಭಿಸುವ ಸಾಧ್ಯತೆಯಿದೆ ಎಂದವರು ತಿಳಿಸಿದ್ದಾರೆ.
ಮೀಫ್ ಸಂಸ್ಥೆಗೆ ಒಳಪಟ್ಟ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳ ಮೀಫ್ ಮತ್ತು ಸರಕಾರಿ ಶಾಲೆಯ ಆಸಕ್ತ ಅರ್ಹ ವಿದ್ಯಾರ್ಥಿಗಳು ಈ ಉಚಿತ ಸೀಟುಗಳ ಪ್ರಯೋಜನವನ್ನು ಪಡೆಯಲು ಮೀಫ್ ಸಂಸ್ಥೆಯ ದೂರವಾಣಿ ಸಂಖ್ಯೆ 8792115666/8431990966 ಅನ್ನು ಸಂಪರ್ಕಿಸಬಹುದು (ಸಮಯ ಅಪರಾಹ್ನ 2:30ರಿಂದ 5:30) ಎಂದು ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.






