ಬೆಳ್ತಂಗಡಿ : ಬಾಲಕನ ನಿಗೂಢ ಸಾವು; ಕೊಲೆ ಪ್ರಕರಣ ದಾಖಲಿಸಿದ ಪೊಲೀಸರು

ಬೆಳ್ತಂಗಡಿ: ಓಡಿಲ್ನಾಳ ಗ್ರಾಮದ ಸಂಬೋಳ್ಯದಲ್ಲಿ ದೇವಸ್ಥಾನಕ್ಕೆ ಹೋದ ಬಾಲಕನ ಮೃತದೇಹ ಕೆರೆಯಲ್ಲಿ ಪತ್ತೆಯಾದ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಪ್ರಕರಣದ ತನಿಖೆಗಾಗಿ ಬೆಳ್ತಂಗಡಿ ಡಿವೈಎಸ್ಪಿ ಅವರ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಎಲ್ಲ ದಿಕ್ಕುಗಳಿಂದ ತಪಾಸಣೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸುಮಂತ್ (15) ಅವರ ಶವ ಪರೀಕ್ಷೆಯ ನಂತರ ಲಭ್ಯವಾದ ಪ್ರಾಥಮಿಕ ವರದಿ ಪ್ರಕಾರ, ಈತ ಕೆರೆಯಲ್ಲಿ ಮುಳುಗುವ ವೇಳೆ ಜೀವಂತವಾಗಿದ್ದನು. ತಕ್ಷಣದ ಸಾವಿನ ಕಾರಣವು ಮುಳುಗು ಸಾವು ಎಂದು ವರದಿ ವಿವರಿಸಿದೆ.
ಮೃತ ಬಾಲಕನ ತಲೆಯ ಮೇಲೆ ಕಂಡುಬಂದ ಗಾಯಗಳು ಮಧ್ಯಮ ಬಲದಿಂದ ಉಂಟಾದವುಗಳಾಗಿದ್ದು, ಯಾವುದೇ ಚೂಪಾದ ಆಯುಧಗಳಿಂದ ಆಗಿರುವುದಲ್ಲ ಎಂದು ತಿಳಿದು ಬಂದಿದೆ. ಆದರೆ ತಲೆಯ ಮೇಲಿನ ಗಾಯಗಳ ಕುರಿತು ಸಮರ್ಪಕ ವಿವರಣೆ ಲಭ್ಯವಾಗದ ಹಿನ್ನೆಲೆಯಲ್ಲಿ, ಸಮಗ್ರ ಮತ್ತು ಸೂಕ್ಷ್ಮ ತನಿಖೆ ನಡೆಸಲು ಅಸಹಜ ಸಾವು ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿ ತನಿಖೆ ಮುಂದುವರಿಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟಪಡಿಸಿದ್ದಾರೆ.





