ಬೆಳ್ತಂಗಡಿ| ಸಣ್ಣ ಪ್ರಾಯದಲ್ಲಿ ಮನೆಬಿಟ್ಟು ಹೋಗಿದ್ದ ವ್ಯಕ್ತಿ 26 ವರ್ಷದ ಬಳಿಕ ಆಗಮನ

ಬೆಳ್ತಂಗಡಿ; ಸಣ್ಣ ಪ್ರಾಯದಲ್ಲಿ ಮನೆಬಿಟ್ಟು ಹೋಗಿದ್ದ ವ್ಯಕ್ತಿ 26 ವರ್ಷದ ಬಳಿಕ ತಾಯಿ ಹಾಗೂ ಮನೆಯವರನ್ನು ಹುಡುಕಿಕೊಂಡು ಹುಟ್ಟೂರಿಗೆ ಮರಳಿ ಬಂದು, ಅಮ್ಮ ಮಗನ ಪುನರ್ ಸಮ್ಮಿಲನಕ್ಕೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಅಶೋಕನಗರ ಸಾಕ್ಷಿಯಾಗಿದೆ.
12 ವರ್ಷದ ಬಾಲಕ ಸತೀಶ್ ಎಂಬಾತ 26 ವರ್ಷಗಳ ಹಿಂದೆ ಅಂದರೆ 2000 ಇಸವಿಯ ಡಿಸೆಂಬರ್ ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ ಸಮಯದಲ್ಲಿ ಸರ್ಕಸ್ ಕಂಪನಿಯೊಂದಿಗೆ ಊರು ಬಿಟ್ಟು ಹೋದಾತ ಮರಳಿ 2026ರ ಜೂ.9ರಂದು ತನ್ನ ಹುಟ್ಟೂರಿಗೆ ಆಗಮಿಸಿದ್ದಾನೆ. ಧರ್ಮಸ್ಥಳ ಗ್ರಾಮದ ಅಶೋಕ ನಗರದ ಶಿವಪಾರ್ವತಿ ನಿಲಯದ ಕುಂಞ ಮತ್ತು ಅಕ್ಕು ದಂಪತಿಯ ಪ್ರಥಮ ಪುತ್ರ ಈ ಸತೀಶ್ 26 ವರ್ಷಗಳ ಬಳಿಕ ಮನೆಯವರನ್ನು ನೋಡಲು ಬಂದು ಹಿಂತಿರುಗಿದ್ದಾನೆ.
ಮಹಾರಾಷ್ಟ್ರದಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮುಗಿಸಿ, ವಾಸವಿದ್ದ ರೂಮ್‌ನ ಅಸುಪಾಸಿನಲ್ಲಿ ಸುತ್ತಾಡಿಕೊಂಡು ಬಂದತಾನಿಗೆ ತನ್ನ ಬಾಲ್ಯ ದಿನಗಳ ಮರುಕಳಿಸಿದವು. ತಾನು ಕಲಿತ ಎಸ್.ಡಿ.ಎಮ್ ಶಾಲೆ, ಆಟದ ಮೈದಾನ, ಬೆಳೆದ ಊರು ನೆನೆಪಿಗೆ ಬಂದು, ತನ್ನ ತಾಯಿಯನ್ನು ಹುಡುಕಿಕೊಂಡು ಧರ್ಮಸ್ಥಳ ಗ್ರಾಮ ಪಂಚಾಯತ್ ಕೆಳಭಾಗದಲ್ಲಿರುವ ಯತೀಶ್ ಎಂಬವರ ಅಂಗಡಿಗೆ ಬಂದ ಸತೀಶ್ ನಾನು ಬಾಲ್ಯದಲ್ಲಿ ಈ ಊರಿನಲ್ಲಿ ಬೆಳೆದಿದ್ದು, ನಾನು 26 ವರ್ಷದ ಹಿಂದೆ ಊರು ಬಿಟ್ಟು ಹೋಗಿದ್ದೆ, ತನ್ನ ತಂದೆ-ತಾಯಿ, ತಮ್ಮಂದಿರ ಹೆಸರು ಹೇಳುತ್ತಿದ್ದಂತೆ ಅಂಗಡಿಯ ಮಾಲಕ ಯತೀಶ್ ಎಂಬುವರು ಆತನ ಕುಟುಂಬದವರಿಗೆ ಕರೆ ಮಾಡಿ ವಿಷಯ ತಿಳಿಸಿ ತಾಯಿ ಮಗನನ್ನು ಒಟ್ಟು ಸೇರಿಸಿದ್ದಾರೆ.
ಸರ್ಕಸ್ ಕಂಪನಿಯ ಕೆಲಸಕ್ಕೆ ಹೋಗಿದ್ದ:-
ಧರ್ಮಸ್ಥಳ ಲಕ್ಷ ದೀಪೋತ್ಸವ ಸಮಯ ಸರ್ಕಸ್ ಕಂಪನಿಯೊಂದಿಗೆ ಅಶೋಕ ನಗರ 4 ಮಂದಿ ಕೆಲಸಕ್ಕೆಂದು ಹೋಗಿದ್ದರು. ಸುಬ್ರಹ್ಮಣ್ಯ, ಸುಳ್ಯ, ಭದ್ರಾವತಿ ತನಕ ಕೆಲಸ ಮಾಡಿ ನಾಲ್ಕು ಮಂದಿಯ ತಂಡ ಸರ್ಕಸ್ ಕಂಪನಿ ನಂತರ ಮುಂಬೈಗೆ ಹೋಗುವುದಾಗಿ ತಿಳಿಸಿದಕ್ಕೆ ಸತೀಶ್ ನಾನು ಬರುವುದಿಲ್ಲ ನೀವು ಹೋಗಿ ಎಂದಿದ್ದಾನೆ ಉಳಿದ ಮೂರು ಮಂದಿ 2 ವರ್ಷದ ಬಳಿಕ ಊರು ಸೇರಿದರು. ಮಹಾರಾಷ್ಟರ ತಲುಪಿದ ಬಾಲಕ ಅಲ್ಲಿ ಹೋಟೇಲ್ ಕೆಲಸ, ಮದುವೆ ಹಾಲ್, ಡೆಕೋರೇಶನ್, ಚಾಲಕ, ಹೀಗೆ ಹಲವು ಕೆಲಸ ಮಾಡಿ ಬದುಕು ಕಟ್ಟಿಕೊಂಡ ಸತೀಶ ಬಳಿಕ ಸಲೀಂ ಅಬ್ದುಲ್ ಅನ್ಸಾರಿಯಾಗಿ ಬದಲಾಗಿ ಹೊಸ ಜೀವನ ಕಟ್ಟಿಕೊಂಡಿದ್ದಾನೆ.
ಮಹಾರಾಷ್ಟ್ರದಿಂದ ಹುಟ್ಟೂರಿಗೆ:-
ಮಹಾರಾಷ್ಟ್ರ ರಾಜ್ಯದ ನಾಗ್ಪುರ ಜಿಲ್ಲೆಯ ಬಾಡಿಗೆ ಮನೆಯೊಂದರಲ್ಲಿ ಪತ್ನಿ ತಾಲೀಮಾ ಸಲೀಂ ಅಬ್ದುಲ್ ಅನ್ಸಾರಿ, ಪುತ್ರಿ ಖುಷಿ (14) ಹಾಗೂ ಪುತ್ರ ಅಝಂ(9) ನೊಂದಿಗೆ ಸುಖ ಸಂಸಾರ ನಡೆಸುತ್ತಿದ್ದಾರೆ.
2005 ರಿಂದ ದಹೆಂಗಾವ್‌ನಲ್ಲಿ ಡಾಬಾದ ವ್ಯವಸ್ಥಾಪಕರಾಗಿ ವೃತ್ತಿ ಜೀವನ ನಡೆಸುತ್ತಿದ್ದಾರೆ. ಸತೀಶ್ ಯಾನೆ ಸಲೀಂ ಅನ್ಸಾರಿ ದಹೆಂಗಾವ್‌ನಿಂದ ತನ್ನ ಸಹೊದ್ಯೋಗಿ ರಮೆಶ್‌ರೊಂದಿಗೆ ಹುಟ್ಟೂರಿಗೆ ಮರಳಿ ಬಂದಿದ್ದು ಕುಟುಂಬಸ್ಥರನ್ನು ಭೇಟಿಯಾಗಿದ್ದಾರೆ.
ಮೂರು ವರ್ಷದ ಹಿಂದೆ ತಂದೆ ಕುಂಞ ಅವರನ್ನು ಕಳೆದುಕೊಂಡಿರುವ ವಿಷಯ ಕೇಳಿ ದು:ಖತಪ್ತರಾದರು. ಬಾಲ್ಯದಲ್ಲಿ ಮಾತೃ ಭಾಷೆ ತುಳು ಅರಿತಿದ್ದ ಸತೀಶ್ ಇದೀಗ ಹಿಂದಿ ಭಾಷೆ ಮಾತ್ರ ಬಲ್ಲವರಾಗಿದ್ದಾರೆ. ತುಳು ಅವರಿಗೆ ಅರ್ಥವಾಗುತ್ತಿದ್ದು ಮಾತನಾಡಲು ಅಲ್ಪಸ್ವಲ್ಪ ಬರುತ್ತದೆ ಎನ್ನುತ್ತಾರೆ ಸತೀಶ್. ಮನೆಯವರು ಮತ್ತೆ ಸಿಕ್ಕ ಬಳಿಕ ತನ್ನ ಕುಟುಂಬವನ್ನು ಕರೆದುಕೊಂಡು ಬಂದು ಪರಿಚಯಿಸುವುದಾಗಿ ಮಾಧ್ಯಮದ ಪ್ರಶ್ನೆಗೆ ಸತೀಶ್ ಯಾನೆ ಸಲೀಂ ಅನ್ಸಾರಿ ಪ್ರತಿಕ್ರಿಯೆ ನೀಡಿದ್ದಾರೆ. ಜೂ.10 ರಂದು ತನ್ನ ಸ್ನೇಹಿತ ರಮೇಶ್ ಅವರೊಂದಿಗೆ ಸಲೀಂ ಅಬ್ದುಲ್ ಅನ್ಸಾರಿ ವಾಪಸು ಮಹಾರಾಷ್ಟ್ರಕ್ಕೆ ಪ್ರಯಣ ಬೆಳೆಸಿದ್ದಾರೆ. 26 ವರ್ಷದ ಬಳಿಕ ಹುಟ್ಟೂರಿಗೆ ಮರಳಿ ಬಂದ ಸತೀಶ್ ಅವರನ್ನು ನೋಡಲು ತನ್ನ ಕುಟುಂಬದವರು, ಗೆಳೆಯರು ಬಂದು ಅವರನ್ನು ತಬ್ಬಿಕೊಂಡುಆನಂದ ಭಾಷ್ಪ ಸುರಿಸಿದರು.
"ಮಗ ನಾನು ಬದುಕಿರುವಾಗಲೇ ಹಿಂತಿರುಗಿ ಬರುತ್ತಾನೆ ಎಂಬ ವಿಶ್ವಾಸವಿತ್ತು ಆತನಿಗಾಗಿ ಎಲ್ಲೆಡೆ ಹರಕೆಗಳನ್ನು ಹೇಳಿದ್ದೆ ಕೊನೆಗೂ ಆತ ಹಿಂತಿರುಗಿ ಬಂದಿರುವುದು ತುಂಬಾ ನೆಮ್ಮದಿ ನೀಡಿದೆ. ಆತ ಹೊಸ ಬದುಕನ್ನು ಕಟ್ಟಿಕೊಂಡಿರುವುದು ಮತ್ತಷ್ಟು ಸಂತಸವಾಯಿತು"
-ಅಕ್ಕು, ತಾಯಿ
ಅಣ್ಣ ಮರಳಿ ಬಂದಿರುವುದು ನಮಗೆ ಸಂತೋಷವಾಗುತ್ತಿದೆ. ಮಹಾರಾಷ್ಟ್ರದಲ್ಲಿ ತನ್ನ ಬದುಕು ಕಟ್ಟಿಕೊಂಡಿದ್ದಾನೆ. ಅವನ ಕುಟುಂಬವನ್ನು ಮನೆಗೆ ಕರೆದುಕೊಂಡು ಬರುವಂತೆ ತಿಳಿಸಿದ್ದೇವೆ. ನಾವು ಅವನ ಮನೆಗೆ ಹೋಗುತ್ತೇವೆ ಅವನು ಎಲ್ಲಿದ್ದರೂ ನಮಗೆ ಖುಷಿಯೇ, ಕಡಿದು ಹೋಗಿದ್ದ ಸಂಬಂಧ ಮತ್ತೆ ಒಂದಾಗಿದೆ ಎನ್ನುತ್ತಾರೆ ಸಹೋದರ ನಾಗೇಶ್.
ಹುಟ್ಟೂರು ತ್ಯಾಜಿಸಿದರೂ ನನ್ನ ಕುಟುಂಬದವರ ಚಹರೆ, ಒಡನಾಟ ನೆನೆಪಿತ್ತು. ದೇವರ ದರ್ಶನಕ್ಕೆಂದು ಬಂದಾಗ ನನಗೆ ಬಾಲ್ಯದ ದಿನಗಳು ನೆನಪಾಗಿ ಅಂಗಡಿಯೊಂದರಲ್ಲಿ ವಿಚಾರಿಸಿದಾಗ ತಾಯಿ ಮತ್ತು ಕುಟುಂಬದವರು ಮತ್ತೆ ಸಿಕ್ಕಿರುವುದು ಖುಷಿ ತಂದಿದೆ. ಆಗಾಗ ಬಂದು ಹೋಗಿ ತಾಯಿಯನ್ನು ಭೇಟಿ ಮಾಡುತ್ತೇನೆ. ನನ್ನ ಕುಟುಂಬದವರನ್ನೂ ಕರೆತರುತ್ತೇನೆ ಎಂದು ಸತೀಶ್ ಯಾನೆ ಸಲೀಂ ಅಬ್ದುಲ್ ಅನ್ಸಾರಿ ಮಾಹಿತಿ ನೀಡಿದ್ದಾರೆ.






