ಬೆಳ್ತಂಗಡಿ : ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸ್ ದಾಳಿ ; ಮೂವರ ಬಂಧನ

ಬೆಳ್ತಂಗಡಿ : ಅಕ್ರಮವಾಗಿ ನಿರ್ಮಾಣ ಮಾಡಿದ ಕ್ಯಾಂಟೀನ್ ಒಳಗಡೆ ನಡೆಯುತ್ತಿದ್ದ ಅಕ್ರಮ ವೇಶ್ಯಾವಾಟಿಕೆ ದಂಧೆ ಮೇಲೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ.
ಕ್ಯಾಂಟಿನ್ ಮಾಲೀಕ ಸುಂದರ್ ಶೆಟ್ಟಿ(55), ಬೆಳ್ತಂಗಡಿ ತಾಲೂಕಿನ ನಾವೂರು ನಿವಾಸಿ ಉಸ್ಮಾನ್(38), ಬೆಳ್ತಂಗಡಿ ತಾಲೂಕಿನ ಕಲ್ಲೇರಿ ನಿವಾಸಿ ಹೈದರ್(45) ಬಂಧಿತರು.
ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ ಕೆ.ಇ.ಬಿ ಕಚೇರಿ ಪಕ್ಕದ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ನಿವಾಸಿ ಸುಂದರ್ ಶೆಟ್ಟಿ ಎಂಬವರು ಪವನ್ ಕ್ಯಾಂಟೀನ್ ಎಂಬ ಹೆಸರಿನಲ್ಲಿ ಕಳೆದ 20 ವರ್ಷಗಳಿಂದ ಕ್ಯಾಂಟೀನ್ ನಡೆಸುತ್ತಿದ್ದರು. ಈ ಕ್ಯಾಂಟೀನ್ ರವಿವಾರ ಮಾತ್ರ ರಜೆ ಇದ್ದು, ಈ ಸಮಯದಲ್ಲಿ ಕ್ಯಾಂಟೀನ್ ಮಾಲೀಕ ಸುಂದರ್ ಶೆಟ್ಟಿ ಕ್ಯಾಂಟಿನ್ ಒಳಗಡೆ ಬೆಡ್ ರೂಂ, ಶೌಚಾಲಯ ವ್ಯವಸ್ಥೆ ಮಾಡಿಕೊಂಡು ಮಹಿಳೆಯನ್ನು ಕರೆದುಕೊಂಡು ಬಂದು ಹಣ ಮಾಡುವ ಉದ್ದೇಶದಿಂದ ಗಿರಾಕಿಗಳನ್ನು ಕರೆಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಮೇ.10 ರಂದು ಸಂಜೆ 5 ಗಂಟೆಗೆ ಪವನ್ ಕ್ಯಾಂಟೀನ್ ಮೇಲೆ ದಾಳಿ ಮಾಡಿದಾಗ ವೇಶ್ಯಾವಟಿಕೆ ಪ್ರಕರಣ ಬೆಳಕಿಗೆ ಬಂದಿದೆ. 29 ವರ್ಷದ ಓರ್ವ ಸಂತ್ರಸ್ತ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ. ದಾಳಿ ವೇಳೆ ಮೊಬೈಲ್ ಫೋನ್, 5 ಸಾವಿರ ಹಣ, ನಿರೋಧ್‌ಗಳು ಪತ್ತೆಯಾಗಿವೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್ ನೇತೃತ್ವದ ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟರ್ ಸಿಕಂದರ್ ಪಾಷ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು.






