ಬೆಳ್ತಂಗಡಿ : ಸಿಪಿಐಎಂ–ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ತಾಲೂಕು ಕಚೇರಿ ಎದುರು ಪ್ರತಿಭಟನೆ

ಬೆಳ್ತಂಗಡಿ: ಕಳಿಯ ಪರಿಸರದಲ್ಲಿ ನಡೆದ ಶ್ರೀಧರ ಮುಗೇರ ಹಾಗೂ ಸುಮಂತ್ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಸಿಪಿಐಎಂ ಪಕ್ಷ ಹಾಗು ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಐಎಂ ಪಕ್ಷದ ತಾಲೂಕು ಕಾರ್ಯದರ್ಶಿ ಬಿ. ಎಂ ಭಟ್ ಬೆಳ್ತಂಗಡಿ ತಾಲೂಕಿನಲ್ಲಿ ಜನರ ಜೀವಕ್ಕೆ ರಕ್ಷಣೆಯಿಲ್ಲವಾಗಿದೆ. ಕೊಲೆಗಾರರಿಗೆ ಭಯವಿಲ್ಲದಾಗಿದೆ. ಯಾವುದೇ ಕೊಲೆ ಪ್ರಕರಣಗಳು ನಡೆದರೂ ಆರೋಪಿಗಳು ಪತ್ತೆಯಾಗುತ್ತಿಲ್ಲ ಬೆಳ್ತಂಗಡಿ ತಾಲೂಕು ಕರ್ನಾಟಕ ಪೊಲೀಸ್ ಇಲಾಖೆಗೆ ಕಪ್ಪುಚುಕ್ಕೆಯಾಗಿ ಮಾರ್ಪಡುತ್ತಿದೆ. ಕಳಿಯ ಗ್ರಾಮದಲ್ಲಿ ಹಲವು ಅಸಹಜ ಸಾವುಗಳಾಗಿದೆ ಆದರೆ ಒಂದರಲ್ಲಿಯೂ ಆರೋಪಿಗಳು ಪತ್ತೆಯಾಗುತ್ತಿಲ್ಲ. ಶ್ರೀಧರ ಮುಗೇರನ ಮೃತದೇಹ ಕೆರೆಯಲ್ಲಿ ಪತ್ತೆಯಾಗಿ ಆರು ತಿಂಗಳು ಕಳೆದಿದೆ ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೂ ಮನವಿ ನೀಡಿದ್ದರೂ ಪ್ರಕರಣದ ಸಮರ್ಪಕವಾದ ತನಿಖೆ ನಡೆದಿಲ್ಲ. ಇದೀಗ ಶಾಲಾ ಬಾಲಕ ಸುಮಂತ್ ಕೊಲೆಯಾಗಿ ವಾರಗಳೇ ಕಳೆದರೂ ಕೊಲೆಗಾರರ ಬಗ್ಗೆ ಯಾವುದೇ ಸುಳಿವುಗಳು ಪತ್ತೆಯಾಗಿಲ್ಲ. ಎರಡೂ ಪ್ರಕರಣಗಳ ತನಿಖೆ ಸಮರ್ಪಕವಾಗಿ ನಡೆದಿಲ್ಲ ಎಂದು ಅವರು ಆರೋಪಿಸಿದರು.
ಧರ್ಮಸ್ಥಳ ಗ್ರಾಮದಲ್ಲಿ ನಡೆದ ಅಸಹಜ ಸಾವುಗಳಂತೆ ಈ ಪ್ರಕರಣಗಳೂ ಪತ್ತೆಯಾಗದ ಪ್ರಕರಣಗಳಾಗಿ ಮುಗಿದು ಹೋಗಲು ಅವಕಾಶ ನೀಡುವುದಿಲ್ಲ. ಈ ತಿಂಗಳ ಕೊನೆಯೊಳಗೆ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಕೊಂದವರು ಯಾರು ಎಂದು ಪತ್ತೆಯಾಗುವವರೆಗೆ ಮಾರ್ಚ್ ತಿಂಗಳಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ದಲಿತ ಹಕ್ಕುಗಳ ಸಮಿತಿಯ ಕಾರ್ಯದರ್ಶಿ ಈಶ್ವರಿ ಶಂಕರ್, ಬೆಳ್ತಂಗಡಿ ಪೊಲೀಸರು ಎರಡೂ ಪ್ರಕರಣಗಳ ತನಿಖೆಯನ್ನು ಸಮರ್ಪಕವಾಗಿ ನಡೆಸಿಲ್ಲ. ಶ್ರೀಧರ ಪ್ರಕರಣದಲ್ಲಿ ಆರೋಪಿಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಇಲ್ಲಿ ನಡೆದಿರುವ ಕೊಲೆಗಳಲ್ಲಿ ಒಂದಕ್ಕೊಂದು ಸಾಮ್ಯತೆಯಿದೆ ಎಲ್ಲ ಮೃತದೇಹಗಳೂ ಕೆರೆಯಲ್ಲಿ ಪತ್ತೆಯಾಗಿದೆ ಒಟ್ಟು ಘಟನೆಗಳ ಬಗ್ಗೆ ಸಮಗ್ರವಾದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರು ಬೆಳ್ತಂಗಡಿ ತಹಶಿಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಕೊಲೆಗಾರರನ್ನು ಪತ್ತೆಹಚ್ಚಲು ಕೂಡಲೇ ಕ್ರಮ ಕೂಗೊಳ್ಳಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.







