‘ಬಿಯಾಂಡ್ ಬೆಂಗಳೂರು’ ಮಿಷನ್: ಮಂಗಳೂರಿನ ವರ್ಟೆಕ್ಸ್ ಮ್ಯಾನೇಜ್ಡ್ ವರ್ಕ್‍ಸ್ಪೇಸ್‌ಗೆ ರೂ. 1.93 ಕೋಟಿ ಅನುದಾನ ಬಿಡುಗಡೆ

ಮಂಗಳೂರು: ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆಯು ‘ಬಿಯಾಂಡ್ ಬೆಂಗಳೂರು’ ಮಿಷನ್ ಅಡಿಯಲ್ಲಿ ಮಂಗಳೂರಿನ ವರ್ಟೆಕ್ಸ್ ಮ್ಯಾನೇಜ್ಡ್ ವರ್ಕ್‍ಸ್ಪೇಸ್‌ಗೆ ರೂ.1.93 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಬೆಂಗಳೂರಿನ ಹೊರಗೆ ಉನ್ನತ ತಂತ್ರಜ್ಞಾನ ಕೇಂದ್ರಗಳನ್ನು ಬೆಳೆಸುವ ರಾಜ್ಯ ಸರ್ಕಾರದ ಗುರಿಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಾರ್ಯದರ್ಶಿ ಡಾ. ಎನ್. ಮಂಜುಳಾ ಅವರು ವರ್ಟೆಕ್ಸ್ ಮ್ಯಾನೇಜ್ಡ್ ವರ್ಕ್‍ಸ್ಪೇಸ್‌ನ ವ್ಯವಸ್ಥಾಪಕ ಪಾಲುದಾರ ಗುರುದತ್ತ ಶೆಣೈ ಅವರಿಗೆ ಚೆಕ್ ಹಸ್ತಾಂತರಿಸಿದರು.
ಮಂಗಳೂರಿನ ಐಟಿ ಹಾಗೂ ಜಿಸಿಸಿ (ಜಾಗತಿಕ ಸಾಮರ್ಥ್ಯ ಕೇಂದ್ರ) ಪರಿಸರ ವ್ಯವಸ್ಥೆಯಲ್ಲಿ ವರ್ಟೆಕ್ಸ್ ಪ್ರಮುಖ ಪಾತ್ರ ವಹಿಸುತ್ತಿದ್ದು, ಪ್ರಸ್ತುತ ಆರು ನಿರ್ವಹಿತ ಕಾರ್ಯಸ್ಥಳಗಳ ಮೂಲಕ 2,250ಕ್ಕೂ ಹೆಚ್ಚು ವೃತ್ತಿಪರರಿಗೆ ಬೆಂಬಲ ನೀಡುತ್ತಿದೆ. ಜಾಗತಿಕ ಉದ್ಯಮಗಳು ಹಾಗೂ ಜಿಸಿಸಿ ಸೇರಿದಂತೆ 40ಕ್ಕೂ ಹೆಚ್ಚು ಕಂಪನಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಮಂಗಳೂರು, ಬೆಂಗಳೂರು ಹೊರಗಿನ ಪ್ರಮುಖ ತಂತ್ರಜ್ಞಾನ ಕ್ಲಸ್ಟರ್‌ಗಳಲ್ಲೊಂದು ಎಂಬ ಸ್ಥಾನವನ್ನು ಪಡೆದಿದೆ.
‘ಬಿಯಾಂಡ್ ಬೆಂಗಳೂರು’ ಮಿಷನ್ ಅಡಿಯಲ್ಲಿ, ಬೆಂಗಳೂರಿನ ಹೊರಗಿನ ವರ್ಕ್‍ಸ್ಪೇಸ್ ಆಪರೇಟರ್‌ಗೆ ನೀಡಲಾದ ಮೊದಲ ಹಾಗೂ ಅತಿದೊಡ್ಡ ಅನುದಾನಗಳಲ್ಲಿ ಇದೊಂದು ಎಂಬುದು ಗಮನಾರ್ಹ.
ಈ ಸಂದರ್ಭದಲ್ಲಿ ಮಾತನಾಡಿದ ಗುರುದತ್ತ ಶೆಣೈ ಅವರು, “ಕರ್ನಾಟಕ ಸರ್ಕಾರ ಮತ್ತು ಕೆಡಿಇಎಂ ನಮ್ಮ ಮೇಲಿಟ್ಟ ವಿಶ್ವಾಸಕ್ಕೆ ನಾವು ಕೃತಜ್ಞರು. ಈ ಅನುದಾನದಿಂದ ಬೆಂಗಳೂರು ಹೊರಗಿನ ಐಟಿ ಮೂಲಸೌಕರ್ಯ ಬಲಪಡಿಸುವುದು, ಉದ್ಯಮ ವಿಸ್ತರಣೆ ಹಾಗೂ ಗುಣಮಟ್ಟದ ಉದ್ಯೋಗ ಸೃಷ್ಟಿಗೆ ಉತ್ತೇಜನ ದೊರೆಯಲಿದೆ. ಮಂಗಳೂರಿನ ಕಾರ್ಯಾಚರಣೆಯನ್ನು 6,000 ಕಾರ್ಯಸ್ಥಳಗಳಿಗೆ ವಿಸ್ತರಿಸುವ ಯೋಜನೆ ನಮ್ಮದು,” ಎಂದರು.
ಸ್ಟಾರ್ಟ್‌ಅಪ್‌ಗಳು, ಸಣ್ಣ–ಮಧ್ಯಮ ಉದ್ದಿಮೆಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳಿಗೆ ಸಿದ್ಧ ಮಾದರಿಯ ವರ್ಕ್‍ಸ್ಪೇಸ್ ಒದಗಿಸುವ ಮೂಲಕ, ವರ್ಟೆಕ್ಸ್ ಮಂಗಳೂರಿನಲ್ಲಿ ಉದ್ಯೋಗ ಸೃಷ್ಟಿ ಮತ್ತು ಸ್ಥಳೀಯ ಪ್ರತಿಭೆಗಳ ಉಳಿವಿಗೆ ಮಹತ್ವದ ಕೊಡುಗೆ ನೀಡುತ್ತಿದೆ.







