ಭಟ್ಕಳ: ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧದ "ಬತ್ತಿ ಗುಲ್ ಚಳವಳಿ" ಗೆ ಉತ್ತಮ ಪ್ರತಿಕ್ರಿಯೆ
► ಮುಸ್ಲಿಂ ಪ್ರದೇಶಗಳಲ್ಲಿ ಕತ್ತಲು, ಮಾರುಕಟ್ಟೆಯಲ್ಲೂ ಉರಿಯದ ದೀಪಗಳು

ಭಟ್ಕಳ: ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನಿಂದ 2025ರ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಕರೆ ನೀಡಲಾಗಿದ್ದ "ಬತ್ತಿ ಗುಲ್ ಚಳವಳಿ"ಗೆ ಭಟ್ಕಳದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬುಧವಾರ ರಾತ್ರಿ 9 ಗಂಟೆಗೆ ಮುಸ್ಲಿಂ ಪ್ರದೇಶಗಳಲ್ಲಿ ಮನೆಗಳು, ಅಂಗಡಿಗಳು ಹಾಗೂ ಮಾರುಕಟ್ಟೆಗಳ ದೀಪಗಳು ಆರಿಸಲ್ಪಟ್ಟವು. ಇದರಿಂದಾಗಿ ಸಾಂಕೇತಿಕವಾಗಿ ಕತ್ತಲು ಆವರಿಸಿತು. 15 ನಿಮಿಷಗಳ ಕಾಲ ನಡೆದ ಈ ಮೌನ ಚಳವಳಿಯ ಸಂದರ್ಭದಲ್ಲಿ ಮಾರುಕಟ್ಟೆಯ ವ್ಯಾಪಾರವೂ ಸ್ಥಗಿತಗೊಂಡಿತು.
ರಾಷ್ಟ್ರವ್ಯಾಪಿ ಚಳವಳಿಯನ್ನು ಪರಿಣಾಮಕಾರಿಯಾಗಿಸಲು ಭಟ್ಕಳದ ಸಾಮಾಜಿಕ ಸಂಸ್ಥೆಯಾದ ಮಜ್ಲಿಸ್ ಇಸ್ಲಾಹ್ ವ ತಂಝೀಮ್ ಸಂಪೂರ್ಣ ಪ್ರಯತ್ನ ನಡೆಸಿತು. ನಗರದ 100ಕ್ಕೂ ಹೆಚ್ಚು ಮಸೀದಿಗಳ ಮೂಲಕ ಬೋರ್ಡ್‌ನ ಸಂದೇಶವನ್ನು ಜನರಿಗೆ ತಲುಪಿಸಿತು. 15 ನಿಮಿಷಗಳ ಕಾಲ ದೀಪಗಳನ್ನು ಆರಿಸಿಡುವಂತೆ ಸಂಸ್ಥೆಯು ಔಪಚಾರಿಕ ಮನವಿ ಮಾಡಿತ್ತು. ಇದರ ಮೂಲಕ ಕೇಂದ್ರ ಸರ್ಕಾರದ ವಿವಾದಾತ್ಮಕ ಕಾಯ್ದೆಯ ವಿರುದ್ಧ ಪ್ರತಿಭಟನೆಯನ್ನು ನಡೆಸಲಾಯಿತು.
ನಗರದ ಸುಲ್ತಾನ್ ಸ್ಟ್ರೀಟ್, ಜಾಮಿಯಾ ಸ್ಟ್ರೀಟ್, ಖಲೀಫಾ ಸ್ಟ್ರೀಟ್, ಕಾಝಿಯಾ ಸ್ಟ್ರೀಟ್, ಗೌಸಿಯಾ ಸ್ಟ್ರೀಟ್, ಫಾರೂಕಿ ಸ್ಟ್ರೀಟ್, ಕಿದ್ವಾಯ್ ರಸ್ತೆ, ಡೊಂಗರ್ ಪಳ್ಳಿ, ನವಾಯತ್ ಕಾಲೋನಿ, ಮದೀನಾ ಕಾಲೋನಿ, ಮಖ್ದೂಮ್ ಕಾಲೋನಿ, ಆಜಾದ್ ನಗರ, ಕಾರಗದ್ದೆ, ಬಂದರ್ ರಸ್ತೆ, ಜಾಮಿಯಾಬಾದ್ ರಸ್ತೆ, ಜಾಲಿ ರಸ್ತೆ ಸೇರಿದಂತೆ ಹಲವಾರು ಮುಸ್ಲಿಂ ಪ್ರದೇಶಗಳಲ್ಲಿ ಏಕಕಾಲದಲ್ಲಿ ದೀಪಗಳನ್ನು ಆರಿಸಲಾಯಿತು. ರಾತ್ರಿ 9:15ಕ್ಕೆ ದೀಪಗಳನ್ನು ಮತ್ತೆ ಹೊತ್ತಿಸಲಾಯಿತು. ಈ ಸಂದರ್ಭದಲ್ಲಿ ಹಲವು ಮನೆಗಳಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು.
ಪ್ರತಿಭಟನಾಕಾರರು ಪ್ರಸ್ತುತ ವಕ್ಫ್ ಕಾಯ್ದೆಯನ್ನು ಶರೀಅತ್, ಸಂವಿಧಾನ ಹಾಗೂ ಧಾರ್ಮಿಕ ಸ್ವಾತಂತ್ರ್ಯಕ್ಕೆ ವಿರುದ್ಧವೆಂದು ಖಂಡಿಸಿದರು ಮತ್ತು ಶಾಂತಿಯುತವಾಗಿ ಕಾಯ್ದೆಯನ್ನು ತಕ್ಷಣವೇ ರದ್ದುಗೊಳಿಸುವಂತೆ ಒತ್ತಾಯಿಸಿದರು.
ಮಜ್ಲಿಸ್ ಇಸ್ಲಾಹ್ ವ ತಂಝೀಮ್‌ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ.ನದ್ವಿ ಹಾಗೂ ಭಟ್ಕಳ ಮುಸ್ಲಿಂ ಯೂತ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಮುಬಶ್ಶಿರ್ ಹುಸೇನ್ ಹಲ್ಲಾರೆ ಅವರು ಜನರ ಸಹಕಾರಕ್ಕೆ ಧನ್ಯವಾದ ಸೂಚಿಸಿ, ಮುಂದಿನ ದಿನಗಳಲ್ಲಿ ಬೋರ್ಡ್‌ನ ಶಾಂತಿಯುತ ಚಳವಳಿಗಳಿಗೂ ಸಂಪೂರ್ಣ ಬೆಂಬಲ ನೀಡುವಂತೆ ಜನರಿಗೆ ಕರೆ ನೀಡಿದರು.







