ಉಡುಪಿಯಲ್ಲಿ ಮೋದಿ ಭೇಟಿ ವೇಳೆ ಪ್ರಮೋದ್ ಮಧ್ವರಾಜ್ ಕಡೆಗಣನೆಗೆ 'ಬಿರುವೆರ್ ಕುಡ್ಲ' ಆಕ್ರೋಶ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉಡುಪಿ ಭೇಟಿ ನೀಡಿ ಲಕ್ಷಕಂಠ ಭಗವದ್ಗೀತಾ ಶ್ಲೋಕ ಪಠಣ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನಂತರ ಕೃಷ್ಣಮಠಕ್ಕೆ ತೆರಳಿದ ಅವರು, ಕನಕನ ಕಿಂಡಿಗೆ ಸ್ವರ್ಣಲೇಪನವನ್ನು ಅನಾವರಣ ಮಾಡಿದರು.
ಉಡುಪಿಯ ಕೃಷ್ಣಮಠದಲ್ಲಿನ ಕನಕನ ಕಿಂಡಿಗೆ ಸ್ವರ್ಣಲೇಪನ ಕಾರ್ಯಕ್ಕಾಗಿ ಪ್ರಮುಖ ಕೊಡುಗೆ ನೀಡಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡದೇ ಇರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ರವಿವಾರ 'ಬಿರುವೆರ್ ಕುಡ್ಲʼ ಎಂಬ ಫೇಸ್ ಬುಕ್ ಪೇಜ್ ನಲ್ಲಿ ನಾನೊಬ್ಬ ಬಿಜೆಪಿ ಕಾರ್ಯಕರ್ತ, ಸ್ಥಳೀಯ ನಾಯಕರನ್ನು ಪ್ರಶ್ನಿಸುವ ಹಕ್ಕು ನನಗಿದೆ ಎಂದು ಪೋಸ್ಟರ್ ಹಂಚಿಕೊಳ್ಳಲಾಗಿದೆ. ಅಂದು “ನಾರಾಯಣ ಗುರು" ವೃತ್ತದೆಡೆ ಪ್ರಧಾನಿಗಳಾದ ಮೋದಿಯವರು ಆಗಮಿಸಿದಾಗ “ವೃತ್ತ ನಿರ್ಮಾಣಕ್ಕೆ ಶ್ರಮಿಸಿದ "ಉದಯ ಪೂಜಾರಿ”ಯವರನ್ನು ಕಡೆಗಣಿಸಿದಿರಿ. ಇಂದು “ಕನಕನ ಕಿಂಡಿ” ಉದ್ಘಾಟನೆಗೆ ಮೋದಿಯವರು ಆಗಮಿಸಿದಾಗ “ಸ್ವರ್ಣ ಲೇಪಿತ ಕನಕನ ಕಿಂಡಿ”ಯನ್ನೇ ಅರ್ಪಿಸಿದ “ಪ್ರಮೋದ್ ಮಧ್ವರಾಜ್' ರನ್ನು ಕಡೆಗಣಿಸಿದಿರಿ.
“ದುಡಿಮೆಗೆ ಬಿಲ್ಲವರು, ಮೊಗವೀರರು ಬೇಕು, ಗುರುತಿಸುವಿಕೆಗೆ ನಾವು ಬೇಡ?!?" ಚೆನ್ನಾಗಿದೆ ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.
ಈ ಪೋಸ್ಟ್ ಅನ್ನು ಎರಡೂವರೆ ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಸುಮಾರು ೨೫೦ ಮಂದಿ ಕಮೆಂಟ್ ಮಾಡಿದ್ದಾರೆ. ೧೮೭ ಮಂದಿ ಶೇರ್ ಮಾಡಿದ್ದಾರೆ.
ಬಿರುವೆರ್ ಕುಡ್ಲ ಎಂಬುದು ಉದಯ್ ಪೂಜಾರಿ ಅವರ ನೇತೃತ್ವದ ಮಂಗಳೂರಿನ ಒಂದು ಪ್ರಮುಖ ಸಂಘಟನೆ. ತುಳು ಸಂಸ್ಕೃತಿ ಹಾಗು ಪರಂಪರೆ ಉಳಿಸಿ ಬೆಳೆಸುವುದಕ್ಕಾಗಿ ಕೆಲಸ ಮಾಡುತ್ತೇವೆ ಎಂದು ಘೋಷಿಸಿಕೊಂಡಿರುವ ಈ ಸಂಘಟನೆಯ ನಾಯಕರು, ಕಾರ್ಯಕರ್ತರು ಬಿಜೆಪಿ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದಾರೆ.
ಈ ಪೋಸ್ಟ್ ಗೆ ಪ್ರತಿಕ್ರಿಯಿಸಿದ Modified India ಎಂಬ ಬಳಕೆದಾರರು, ಯಶಪಾಲ್ ಯಾರು, ಶ್ರೀನಿವಾಸ ಪೂಜಾರಿ ಯಾರು , ಸುನಿಲ್ ಕುಮಾರ್ ಯಾರು , ನೀವು ಯಾವ ಟೈಪ್ ಹುಚ್ಚರು ಮಾರ್ರೆ, ಎಲ್ಲದಕ್ಕೂ ಜಾತಿ ಜಾತಿ ಅಂತ ಸಾಯ್ತೀರಿ ಎಂದು ಕಮೆಂಟ್ ಮಾಡಿದ್ದಾರೆ.
Uday Raikar ಎಂಬವರು, ಸಾಕು ನಿನ್ನ, ಕಾಂಗ್ರೆಸ್ ಥರ ಲೆಕ್ಚರ್. ಹುಳಿಯನ್ನು ಹಿಂಡ ಬೇಡ. ಸ್ವಾರ್ಥಕ್ಕೆ ಜಾತಿ ಮಾತಾಡಬೇಡ. ನಾವೆಲ್ಲರೂ ಹಿಂದು ಅಂಥ ಅರ್ಥ ಮಾಡಿಕೋ ಎಂದು ಹೇಳಿದ್ದಾರೆ.
Harish Acharya ಬಿಜೆಪಿಯವರು ಇದನ್ನು ಗಂಭೀರವಾಗಿ ಪರಿಗಣಿಸಿ ಪದೇ ಪದೇ ಇದೇ ತಪ್ಪು ಮಾಡಿ ಮೋದಿಯ ಹೆಸರಿಗೆ ಕಪ್ಪು ಚುಕ್ಕೆ ತರುತ್ತಾ ಇದ್ದೀರಿ ಎಂದು ತಿಳಿಸಿದ್ದಾರೆ.
Sachin Acharya ಎಂಬವರು, ಇದೊಂದ್ ಬಾಕಿ ಇತ್ತು. ಪ್ರಮೋದ್ ಸರ್ ಇಲ್ಲಾ ಉದಯ ಪೂಜಾರ್ ಅಳ್ತಾ ಇದ್ರಾ. ನಮ್ಮ ಬಿಜೆಪಿಯಲ್ಲಿ ಹಿಂದುತ್ವವಾದಿ ಗಳು ಎಲ್ಲೂ ಪ್ರಚಾರ ಬಯಸಲ್ಲ. ಕೊಡೊ ಗೌರವಕ್ಕೆ ಅಷ್ಟೇ ಮರ್ಯಾದೆ ಕೊಡುತ್ತಾರೆ. ಕೇಳಿ ಮಾಡಿಸಿಕೊಳ್ಳುವುದಿಲ್ಲ. ಹೋದ ಸಲ ಒಂದಿಷ್ಟು ಜನಕ್ಕೆ ಅವಕಾಶ ಸಿಕ್ಕಿತ್ತು. ಈ ವರ್ಷ ಒಂದಿಷ್ಟು ಜನಕ್ಕೆ ಅವಕಾಶ ಸಿಕ್ಕಿದೆ ಅಷ್ಟೇ. ಏನು ತೊಂದರೆ ಆಗದೆ ಕಾರ್ಯಕ್ರಮ ಚೆನ್ನಾಗಿ ಆಯಿತಲ್ವಾ. ಖುಷಿ ಪಡೋಣ ಎಂದು ಕಮೆಂಟ್ ಮಾಡಿದ್ದಾರೆ.
ಬಿಜೆಪಿಯಲ್ಲಿ ಕರಾವಳಿಯ ಬಿಲ್ಲವರು, ಮೊಗವೀರರು ಕಾರ್ಯಕರ್ತರಾಗಿ , ಕಟ್ಟಾ ಬೆಂಬಲಿಗರಾಗಿ ದುಡಿಯುತ್ತಿದ್ದರೂ ನಿರ್ಣಾಯಕ ಸಂದರ್ಭಗಳಲ್ಲಿ, ನಾಯಕತ್ವ ನೀಡುವ ವಿಷಯದಲ್ಲಿ ಅವರನ್ನು ಕಡೆಗಣಿಸಲಾಗುತ್ತದೆ ಎಂದು ದೂರುತ್ತಲೇ ಬರಲಾಗಿದೆ. ಆದರೆ ಈಗ ಈ ಚರ್ಚೆ ಹೊಸ ರೂಪ ಪಡೆದುಕೊಂಡಿದೆ.
ಬಿಜೆಪಿಯ ಕಟ್ಟಾ ಬೆಂಬಲಿಗರೇ ಈಗ ಈ ಪ್ರಶ್ನೆ ಎತ್ತಿದ್ದಾರೆ. ನಾವು ಬಿಜೆಪಿಯ ಕಾರ್ಯಕರ್ತರು, ಇದು ಸರಿಯಲ್ಲ, ನಮ್ಮನ್ನು ಬಳಸಿಕೊಂಡು ಬಿಟ್ಟು ಬಿಡಲಾಗುತ್ತಿದೆ, ಇದನ್ನು ಪ್ರಶ್ನಿಸುವ ಹಕ್ಕು ನಮಗಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲೇ ಪೋಸ್ಟ್ ಹಾಕುತ್ತಿದ್ದಾರೆ.







