ಸಾವಿರ ಕೋಟಿಗೂ ಹೆಚ್ಚಿನ ಮೌಲ್ಯ ಪಡೆದ ಮಂಗಳೂರಿನ ಐಟಿ ಕಂಪೆನಿ !

ಮಂಗಳೂರು, ಆ 21 : ಡಿಜಿಟಲ್ ಪ್ರಾಡಕ್ಟ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಜಾಗತಿಕ ಮುಂಚೂಣಿಯಲ್ಲಿರುವ, ಬ್ಲ್ಯಾಕ್ ಸ್ಟೋನ್ ನ ಪೋರ್ಟ್ ಫೋಲಿಯೊ ಕಂಪೆನಿಯಾದ ಆರ್ ಸಿಸ್ಟಮ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್, ಗುರುವಾರ ಮಂಗಳೂರು ಮೂಲದ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪೆನಿ 'ನೊವಿಗೊ ಸೊಲ್ಯೂಷನ್ಸ್' ಅನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಣಾಯಕ ಒಪ್ಪಂದ ಮಾಡಿಕೊಂಡಿರುವುದಾಗಿ ಪ್ರಕಟಿಸಿದೆ. ಮೂಲಗಳ ಪ್ರಕಾರ ಈ ಸ್ವಾಧೀನದ ಮೌಲ್ಯ ಸಾವಿರ ಕೋಟಿಗೂ ಹೆಚ್ಚಿದ್ದು ಮಂಗಳೂರಿನ ಇತಿಹಾಸದಲ್ಲೇ ಅತಿದೊಡ್ಡ ಐಟಿ ಕಂಪೆನಿ ಸ್ವಾಧೀನವಾಗಿ ದಾಖಲಾಗಿದೆ.
ಈ ಮಹತ್ವದ ಸ್ವಾಧೀನದ ಮೂಲಕ 2060 ಕೋಟಿ ರೂಪಾಯಿ (240 ಮಿಲಿಯನ್ ಡಾಲರ್ ) ಆದಾಯದ ಜಾಗತಿಕ ಡಿಜಿಟಲ್ -ಎಂಜಿನಿಯರಿಂಗ್ ಸೇವೆಗಳ ಬೃಹತ್ ಸಂಸ್ಥೆ ರೂಪುಗೊಳ್ಳಲಿದೆ. ಇದು ಒಂದೇ, ನಿಯಂತ್ರಿತ ವೇದಿಕೆಯಡಿ ಎಐ ಏಜೆಂಟ್ ಗಳ ಎಂಜಿನಿಯರಿಂಗ್, ನಿಯೋಜನೆ ಮತ್ತು ನಿರ್ವಹಣೆಯನ್ನು ಒದಗಿಸುತ್ತದೆ. ನೊವಿಗೊ ಕಳೆದ ಮೂರು ವರ್ಷಗಳಲ್ಲಿ 44% ಆದಾಯದ ಸಂಯುಕ್ತ ವಾರ್ಷಿಕ ಬೆಳವಣಿಗೆ ದರ (CAGR) ದೊಂದಿಗೆ ಉತ್ತಮ ನಗದು ಹರಿವನ್ನು ದಾಖಲಿಸಿ, ಬಲವಾಗಿ ಬೆಳೆಯುತ್ತಿರುವ ಐಟಿ ಕಂಪೆನಿಯಾಗಿದೆ.
ಈ ಒಪ್ಪಂದದ ಮುಂಗಡ ನಗದು ಮೊತ್ತ 400 ಕೋಟಿ ರೂಪಾಯಿಯಾಗಿದ್ದು, ಭವಿಷ್ಯದ ಸಾಧನೆಗೆ ಸಂಬಂಧಿಸಿದ ಹೆಚ್ಚುವರಿ ಸ್ಟಾಕ್ ಪರಿಗಣನೆಯನ್ನು ಒಳಗೊಂಡಿದೆ. ಈ ಸ್ವಾಧೀನವು ಆರ್ ಸಿಸ್ಟಮ್ಸ್ ಗೆ ಮೊದಲ ವರ್ಷದಿಂದಲೇ ಪ್ರತಿ ಷೇರಿಗೆ ಗಳಿಕೆಯನ್ನು (EPS) ಹೆಚ್ಚಿಸಲಿದೆ.
ಈ ಸ್ವಾಧೀನದ ಮೂಲಕ ಆರ್ ಸಿಸ್ಟಮ್ಸ್ ಮಧ್ಯಪ್ರಾಚ್ಯದಲ್ಲಿ ತನ್ನ ಸೇವೆಯನ್ನು ವಿಸ್ತರಿಸಲಿದ್ದು, ಬೆಂಗಳೂರು ಮತ್ತು ಮಂಗಳೂರಿನಂತಹ ಟೈರ್-2 ನಗರಗಳಲ್ಲಿ ಡೆಲಿವರಿ ಸೆಂಟರ್ ಗಳನ್ನು ಪಡೆಯಲಿದೆ. ನೊವಿಗೊದ ಆಡಳಿತ ಮಂಡಳಿಯು ಸಂಯೋಜಿತ ಸಂಸ್ಥೆಯ ಭಾಗವಾಗಿ ಮುಂದುವರಿದು, ಬೆಳವಣಿಗೆಗೆ ಶ್ರಮಿಸಲಿದೆ.
ಆರ್ ಸಿಸ್ಟಮ್ಸ್ ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ನಿತೇಶ್ ಬನ್ಸಲ್ ಮಾತನಾಡಿ, "ಇದು ಆರ್ ಸಿಸ್ಟಮ್ಸ್, ನಮ್ಮ ಗ್ರಾಹಕರು ಮತ್ತು ನಮ್ಮ ಹೂಡಿಕೆದಾರರಿಗೆ ಒಂದು ನಿರ್ಣಾಯಕ ಕ್ಷಣ" ಎಂದು ಹೇಳಿದ್ದಾರೆ. ಉದ್ಯಮಗಳು ಪ್ರಾಯೋಗಿಕ ಹಂತದಿಂದ ಉತ್ಪಾದನಾ-ದರ್ಜೆಯ ಎಐ ಏಜೆಂಟ್ ಗಳತ್ತ ಸಾಗುತ್ತಿರುವಾಗ,
ನೊವಿಗೊ ಸೊಲ್ಯೂಷನ್ಸ್ ನ ಸ್ವಾಧೀನವು ಏಜೆಂಟಿಕ್ ಎಐ ಕ್ರಾಂತಿಯಲ್ಲಿ ನಮ್ಮ ನಾಯಕತ್ವದ ಪಯಣಕ್ಕೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ನೊವಿಗೊದ ಆಟೊಮೇಷನ್ ಪರಿಣತಿಯನ್ನು ನಮ್ಮ ಆಪ್ಟಿಮಾ ಎಐ ಪೋರ್ಟ್‌ಫೋಲಿಯೊದೊಂದಿಗೆ ಸಂಯೋಜಿಸುವ ಮೂಲಕ, ನಾವು ಈಗ ಗ್ರಾಹಕರಿಗೆ ಒಂದೇ ಸೂರಿನಡಿ ಎಐ ಮಾಡೆಲ್ ಎಂಜಿನಿಯರಿಂಗ್‌ನಿಂದ ಹಿಡಿದು ಸ್ವಾಯತ್ತ ಕಾರ್ಯಗತಗೊಳಿಸುವವರೆಗೆ ಸೇವೆ ನೀಡಬಹುದು. ಇದು ಕೇವಲ ಗಾತ್ರವನ್ನು ಹೆಚ್ಚಿಸುವುದಲ್ಲ; ಬದಲಿಗೆ ನಮ್ಮ ಗ್ರಾಹಕರಿಗೆ ಉತ್ತಮ ಫಲಿತಾಂಶಗಳನ್ನು ನೀಡುವ ಸಾಮರ್ಥ್ಯಗಳನ್ನು ಸೇರಿಸುವುದಾಗಿದೆ. ನಾವು ನೊವಿಗೊದ ಪ್ರತಿಭಾವಂತ ತಂಡವನ್ನು ಆರ್ ಸಿಸ್ಟಮ್ಸ್ ಕುಟುಂಬಕ್ಕೆ ಸ್ವಾಗತಿಸಲು ಉತ್ಸುಕರಾಗಿದ್ದೇವೆ", ಎಂದು ನಿತೇಶ್ ಬನ್ಸಲ್ ಹೇಳಿದ್ದಾರೆ.
ನೊವಿಗೊ ಸೊಲ್ಯೂಷನ್ಸ್ ನ ಸಿಇಒ ಪ್ರವೀಣ್ ಕಲ್ಬಾವಿ ಮತ್ತು ಸಿಟಿಒ, ಮೊಹಮ್ಮದ್ ಹನೀಫ್ ಅವರು ಪ್ರತಿಕ್ರಿಯಿಸಿ "ನಾವು ಕಡಿಮೆ-ಕೋಡ್ ಪ್ಲಾಟ್‌ಫಾರ್ಮ್‌ಗಳು ಮತ್ತು ಇಂಟೆಲಿಜೆಂಟ್ ಆಟೊಮೇಷನ್ ಮೂಲಕ ವ್ಯವಹಾರಗಳನ್ನು ವೇಗವಾಗಿ ಮತ್ತು ಚುರುಕಾಗಿಸುವಲ್ಲಿ ವಿಶ್ವದರ್ಜೆಯ ಪರಿಣತಿಯನ್ನು ನಿರ್ಮಿಸಿದ್ದೇವೆ. ಆರ್ ಸಿಸ್ಟಮ್ಸ್ ನೊಂದಿಗೆ ಸೇರುವುದರಿಂದ ಏಜೆಂಟಿಕ್ ಎಐ ಮತ್ತು ಆಟೊಮೇಷನ್ ಸಾಧನಗಳನ್ನು ದೊಡ್ಡ ಪ್ರಮಾಣದಲ್ಲಿ ನಿಯೋಜಿಸುವ ನಮ್ಮ ಗುರಿಗೆ ವೇಗ ಸಿಕ್ಕಿದೆ. ಈಗ, ಆರ್ ಸಿಸ್ಟಮ್ಸ್ ನ ಆಪ್ಟಿಮಾ ಎಐ ಸೂಟ್‌ನಿಂದ ಬಲವರ್ಧಿತವಾಗಿ, ನಮ್ಮ ಯುಐ ಪಾತ್ ಮತ್ತು ಮೈಕ್ರೋಸಾಫ್ಟ್ ಏಜೆಂಟಿಕ್ ಕಾರ್ಯಪಡೆಯನ್ನು ನಮ್ಮ ಗ್ರಾಹಕರ ಅತ್ಯಂತ ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸಲು ಬಳಸಬಹುದು. ಭಾರತದ 'ಸಿಲಿಕಾನ್ ಬೀಚ್' ಆಗಿ ಹೊರಹೊಮ್ಮುತ್ತಿರುವ ಮಂಗಳೂರು ಸೇರಿದಂತೆ ನಮ್ಮ ಎಲ್ಲಾ ಸ್ಥಳಗಳಲ್ಲಿನ ಉತ್ತಮ ಗುಣಮಟ್ಟದ ಪ್ರತಿಭೆಗಳು ಆರ್ ಸಿಸ್ಟಮ್ಸ್ ನ ಜಾಗತಿಕ ಎಂಜಿನಿಯರಿಂಗ್ ಸಾಮರ್ಥ್ಯಗಳಿಗೆ ಪೂರಕವಾಗಿವೆ. ಆರ್ ಸಿಸ್ಟಮ್ಸ್ ನೊಂದಿಗೆ ನಾವು ವ್ಯವಹಾರವನ್ನು ಮತ್ತಷ್ಟು ಬೆಳೆಸಲು ಎದುರು ನೋಡುತ್ತಿದ್ದೇವೆ" ಎಂದು ಹೇಳಿದ್ದಾರೆ.
ಮೊಹಮ್ಮದ್ ಜರೂದ್ ಅವರು ನೋವಿಗೊ ಕಂಪೆನಿಯ ಸಿಒಒ ಹಾಗು ಶಿಹಾಬ್ ಖಲಂದರ್ ಅವರು ಸಿಸಿಒ ಆಗಿದ್ದಾರೆ.
ಪ್ರತಿಷ್ಠಿತ ಬಾರ್ಕ್ಲೇಸ್ ಸಂಸ್ಥೆಯು ಈ ಪ್ರಕ್ರಿಯೆಯಲ್ಲಿ ನೊವಿಗೊದ ವಿಶೇಷ ಹಣಕಾಸು ಸಲಹೆಗಾರರಾಗಿ ಕಾರ್ಯನಿರ್ವಹಿಸಿದೆ. ಈ ಸ್ವಾಧೀನ ಪ್ರಕ್ರಿಯೆಯು ಮುಂಬರುವ ವಾರಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಆರ್ ಸಿಸ್ಟಮ್ಸ್ ಒಂದು ಜಾಗತಿಕ ಪ್ರಾಡಕ್ಟ್ ಎಂಜಿನಿಯರಿಂಗ್ ಮತ್ತು ಡಿಜಿಟಲ್ ಪರಿಹಾರಗಳ ಪೂರೈಕೆದಾರ ಸಂಸ್ಥೆಯಾಗಿದೆ. ಸಂಕೀರ್ಣ ಎಂಜಿನಿಯರಿಂಗ್, ಡೇಟಾ ಮತ್ತು ಎಐ, ಕ್ಲೌಡ್-ನೇಟಿವ್ ಸಾಮರ್ಥ್ಯಗಳನ್ನು ಆಳವಾದ ಡೊಮೇನ್ ತಿಳುವಳಿಕೆಯೊಂದಿಗೆ ಸಂಯೋಜಿಸಿ, ಟೆಕ್, ಸಾಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ವಿವಿಧ ಉದ್ಯಮಗಳಿಗಾಗಿ ನವೀನ ಉತ್ಪನ್ನಗಳನ್ನು ವಿನ್ಯಾಸಗೊಳಿಸುವುದು ಮತ್ತು ನಿರ್ಮಿಸುತ್ತೇವೆ.
ನೊವಿಗೊ ಮಂಗಳೂರು ಮೂಲದ ಒಂದು ಡಿಜಿಟಲ್ -ನೇಟಿವ್ ಕಂಪೆನಿಯಾಗಿದ್ದು, ಪ್ರಾಡಕ್ಟ್ ಎಂಜಿನಿಯರಿಂಗ್, ಮತ್ತು ಇಂಟೆಲಿಜೆಂಟ್ ಆಟೊಮೇಷನ್ ಸೇವೆಗಳಂತಹ ಐಟಿ ಕ್ಷೇತ್ರದಲ್ಲಿ ಪರಿಣತಿ ಹೊಂದಿದೆ.







