ತೊಕ್ಕೊಟ್ಟು | ಅರಣ್ಯಾಧಿಕಾರಿ ಮನೆಗೆ ಕನ್ನ: ಬೈಕ್ ಸಹಿತ ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವು

ಉಳ್ಳಾಲ: ಅರಣ್ಯಾಧಿಕಾರಿಯೋರ್ವರು ನೆಲೆಸಿದ್ದ ಬಾಡಿಗೆ ಮನೆಗೆ ಕನ್ನ ಹಾಕಿದ ಕಳ್ಳರು, ಅಂಗಳದಲ್ಲಿ ನಿಲ್ಲಿಸಿದ್ದ ಬೈಕ್ ಸಹಿತ ಹತ್ತೂವರೆ ಲಕ್ಷ ರೂಪಾಯಿ ನಗದು, 181 ಗ್ರಾಂ ಚಿನ್ನ ಮತ್ತು ಬೆಳ್ಳಿಯನ್ನು ದೋಚಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕಾಪಿಕಾಡುವಿನ ಅಂಬಿಕಾ ರೋಡ್ ಎಂಬಲ್ಲಿ ನಡೆದಿರುವುದು ವರದಿಯಾಗಿದೆ.
ಕೋಟೆಕಾರು ಉಪವಲಯ ಅರಣ್ಯಾಧಿಕಾರಿ ಮೆಹಬೂಬ್ ಸಾಬ್ ಗುಡಿಹೊಲ ವಾಸವಿದ್ದ ಅಂಬಿಕಾ ರೋಡ್ ನಲ್ಲಿರುವ ಬಾಡಿಗೆ ಮನೆಯಲ್ಲಿ ಈ ಕಳ್ಳತನ ನಡೆದಿದೆ.
ಮೆಹಬೂಬ್ ಸಾಬ್ ತನ್ನ ಪತ್ನಿ ಮತ್ತು ಪುಟ್ಟ ಮಗುವಿನೊಂದಿಗೆ ಅಂಬಿಕಾ ರೋಡ್ ನ ಬಾಡಿಗೆ ಮನೆಯಲ್ಲಿ ಕಳೆದ ಆರು ತಿಂಗಳುಗಳಿಂದ ವಾಸವಿದ್ದರು. ಕಳೆದ ಶುಕ್ರವಾರ ಮಧ್ಯಾಹ್ನ ಮೆಹಬೂಬ್ ಕುಟುಂಬದೊಂದಿಗೆ ತನ್ನ ಊರಾದ ಕೊಪ್ಪಳಕ್ಕೆ ತೆರಳಿದ್ದರು. ಇಂದು ಬೆಳಗ್ಗೆ ಊರಿಂದ ಮರಳಿದಾಗ ಈ ಕಳವು ಕೃತ್ಯ ಬೆಳಕಿಗೆ ಬಂದಿದೆ.
ಮನೆಯೊಳಗೆ ನುಗ್ಗಿದ ಕಳ್ಳರು ಹಾಲ್ ಮತ್ತು ಎರಡು ಕೋಣೆಯೊಳಗಿನ ಕಪಾಟುಗಳನ್ನು ಜಾಲಾಡಿದ್ದು ,ಲಾಕರ್ ಗಳಲ್ಲಿದ್ದ 181 ಗ್ರಾಂ ಚಿನ್ನ, ಮಗುವಿನ ಬೆಳ್ಳಿಯ ಆಭರಣಗಳು ಹಾಗೂ ಮೆಹಬೂಬ್ ಬ್ಯಾಂಕಿಂದ ಸಾಲ ಪಡೆದಿದ್ದ ಹತ್ತೂವರೆ ಲಕ್ಷ ರೂ. ನಗದನ್ನ ದೋಚಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು,ಶ್ವಾನದಳ,ಬೆರಳಚ್ಚು ತಜ್ನರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.







