ಮಂಗಳೂರು ನೂತನ ಕೇಂದ್ರ ಕಾರಾಗೃಹದ ಮುಖ್ಯ ಗೋಡೆ ನಿರ್ಮಾಣಕ್ಕೆ 10 ಕೋಟಿ ರೂ. ಅನುಮೋದನೆ: ಸಚಿವ ಪ್ರಿಯಾಂಕ್ ಖರ್ಗೆ
2026–27ನೇ ಸಾಲಿನ ಅನುದಾನದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಸಚಿವ ಸಂಪುಟ ಒಪ್ಪಿಗೆ

ಮಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಇಂದು ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಗಳೂರು ನೂತನ ಕೇಂದ್ರ ಕಾರಾಗೃಹದ ಮುಖ್ಯ ಗೋಡೆ (Boundary Wall) ನಿರ್ಮಾಣ ಕಾಮಗಾರಿಗೆ 10 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಗೃಹ, ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮಂಗಳೂರು ನೂತನ ಕೇಂದ್ರ ಕಾರಾಗೃಹದ ಕಾಮಗಾರಿಯನ್ನು ಪೂರ್ಣಗೊಳಿಸಿ ಕಾರ್ಯಾರಂಭ ಮಾಡಲು ಅಗತ್ಯವಿರುವ ಮುಖ್ಯ ಗೋಡೆ ನಿರ್ಮಾಣ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ 2026–27ನೇ ಸಾಲಿಗೆ 10 ಕೋಟಿ ರೂ. ಅಂದಾಜು ವೆಚ್ಚವನ್ನು ನಿಗದಿಪಡಿಸಿ ಸಚಿವ ಸಂಪುಟದ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಪ್ರಸ್ತುತ ಮಂಗಳೂರು ಜಿಲ್ಲಾ ಕಾರಾಗೃಹವು ನಗರದ ಮಧ್ಯಭಾಗದಲ್ಲಿದ್ದು, ಕೈದಿಗಳ ದಟ್ಟಣೆಯಿಂದ ಕೂಡಿದೆ. ನೂತನ ಕೇಂದ್ರ ಕಾರಾಗೃಹದ ಕಾಮಗಾರಿಯನ್ನು ಪೂರ್ಣಗೊಳಿಸಿ ಕಾರ್ಯಾರಂಭ ಮಾಡುವ ಉದ್ದೇಶದಿಂದ ಅದರ ಮುಖ್ಯ ಗೋಡೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
75 ಕೋಟಿ ರೂ. ಅನುದಾನದಲ್ಲಿ 10 ಕೋಟಿ ಮಂಗಳೂರು ಜೈಲಿಗೆ:-
2026–27ನೇ ಸಾಲಿನಲ್ಲಿ ರಾಜ್ಯದ ಕಾರಾಗೃಹಗಳ ನಿರ್ಮಾಣ ಮುಂದುವರಿದ ಯೋಜನೆಗಳಿಗೆ 75 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಇದರಲ್ಲಿ ಮಂಗಳೂರು ಕೇಂದ್ರ ಕಾರಾಗೃಹದ ಮುಂದುವರಿದ ಕಾಮಗಾರಿಗೆ 10 ಕೋಟಿ ನಿಗದಿಪಡಿಸಲಾಗಿದೆ.
ಹಣಕಾಸು ಇಲಾಖೆಯ ಅಭಿಪ್ರಾಯದಂತೆ, 2026–27ನೇ ಸಾಲಿನಲ್ಲಿ ಈಗಾಗಲೇ ನಿಗದಿಪಡಿಸಿರುವ ಅನುದಾನ ವನ್ನು ಬಳಸಿಕೊಂಡು ಮಂಗಳೂರು ನೂತನ ಕೇಂದ್ರ ಕಾರಾಗೃಹದ ಮುಖ್ಯ ಗೋಡೆ ನಿರ್ಮಾಣ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಮಂಡಿಸಲಾಗಿದೆ. ಉಳಿದ ಕಾಮಗಾರಿಗಳನ್ನು ಮುಂದಿನ ವರ್ಷಗಳಲ್ಲಿ ಲಭ್ಯವಾಗುವ ಬಜೆಟ್ ಅನುದಾನದ ಆಧಾರದ ಮೇಲೆ ಹಂತ ಹಂತವಾಗಿ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ.
“ಮಂಗಳೂರು ನೂತನ ಕೇಂದ್ರ ಕಾರಾಗೃಹದ ಕಾಮಗಾರಿಯನ್ನು ಪೂರ್ಣಗೊಳಿಸಿ ಕಾರ್ಯಾರಂಭ ಮಾಡಲು ಅಗತ್ಯವಿರುವ ಮೂಲಸೌಕರ್ಯಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು. 2026–27ನೇ ಸಾಲಿನ ಅನುದಾನದಲ್ಲಿ ಮುಖ್ಯ ಗೋಡೆ ನಿರ್ಮಾಣ ಕಾಮಗಾರಿಗೆ 10 ಕೋಟಿ ರೂ. ಆಡಳಿತಾತ್ಮಕ ಅನುಮೋದನೆ ನೀಡಿರುವುದು ಈ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮವಾಗಿದೆ” ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.






