ವಿದ್ಯಾರ್ಥಿಗಳ ಗುರಿ ಆಡಳಿತಾತ್ಮಕ ನಾಗರಿಕ ಸೇವೆಯ ಕಡೆಗೂ ಇರಲಿ: ಕೆ.ಎಸ್.ಮುಹಮ್ಮದ್ ಮಸೂದ್
ಮಂಗಳೂರು: ನಮ್ಮ ನಾಡ ಒಕ್ಕೂಟದಿಂದ ಕೆರಿಯರ್ ಗೈಡೆನ್ಸ್ ಮತ್ತು ಅಕಾಡಮಿಕ್ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ ಸಮಾರಂಭ

ಮಂಗಳೂರು, ಜು.16: ಮುಸ್ಲಿಮ್ ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಐಎಎಸ್, ಐಪಿಎಸ್, ಐಎಫ್ಎಸ್ ನಂತಹ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ದೇಶದ ಆಡಳಿತಾತ್ಮಕ ನಾಗರಿಕ ಸೇವೆಯ ಹುದ್ದೆಗಳಲ್ಲಿ ಅವಕಾಶ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ದ.ಕ. ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಕರೆ ನೀಡಿದ್ದಾರೆ.
ನಮ್ಮ ನಾಡ ಒಕ್ಕೂಟ(ರಿ), ಬೀದರ್ನ ಶಾಹಿನ್ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಜಪ್ಪಿನಮೊಗರು ಪ್ರೆಸ್ಟೀಜ್ ಇಂಟರ್ನ್ಯಾಶನಲ್ ಸ್ಕೂಲ್ ಆಡಿಟೋರಿಯಂನಲ್ಲಿ ರವಿವಾರ ನಡೆದ ಕೆರಿಯರ್ ಗೈಡೆನ್ಸ್ ಮತ್ತು ಅಕಾಡಮಿಕ್ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸುಲಭವಾಗಿ ಸಿಗುವುದಿಲ್ಲ. ಕಠಿಣ ಪ್ರಯತ್ನ ಅಗತ್ಯ. ಇದಕ್ಕೆ ಪದ್ಮಶ್ರೀ ಹರೇಕಳ ಹಾಜಬ್ಬ ಉದಾಹರಣೆ. ಕಿತ್ತಲೆ ಹಣ್ಣು ಮಾರುವುದರೊಂದಿಗೆ ತನ್ನ ಊರಿನಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಉತ್ತಮ ಶಾಲೆ ಇರಬೇಕೆಂದು ಅವರು ಬಯಯಿಸಿದರು. ಆ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ ಅವರು ಯಶಸ್ವಿಯಾದರು ಎಂದರು.
ಯುವ ಜನಾಂಗ ತಾವು ಬೆಳೆಯುವುದರೊಂದಿಗೆ ತಮ್ಮನ್ನು ಬೆಳೆಸಿದ ಸಮುದಾಯದವನ್ನು ಯಾವತ್ತೂ ಮರೆಯಬಾರದು. ಯುವ ಜನಾಂಗ ಡ್ರಗ್ಸ್ ನಂತಹ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಹೆತ್ತವರು ತಮ್ಮ ಮಕ್ಕಳು ದಾರಿ ತಪ್ಪದಂತೆ ಎಚ್ಚರ ವಹಿಸಬೇಕು ಎಂದು ಕಿವಿಮಾತು ನುಡಿದರು.
ಇದೇವೇಳೆ ಅಲ್ಹಾಜ್ ಕೆಎಸ್.ಮುಹಮ್ಮದ್ ಮಸೂದ್ ಮತ್ತು ಪದ್ಮಶ್ರೀ ಹರೇಕಳ ಹಾಜಬ್ಬರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಹರೇಕಳ ಹಾಜಬ್ಬ, ನಾನು ಬಡತನದಲ್ಲಿಯೇ ಬೆಳೆದವನು. ಪದ್ಮಶ್ರೀ ಬಳಿಕ ನನಗೆ ಹಲವವರಿಂದ ಸನ್ಮಾನ ದೊರೆತಿದೆ. ಆದರೆ ತನ್ನ ಬದುಕು ಬದಲಾಗಿಲ್ಲ. ಬಡತನ ದೂರವಾಗಿಲ್ಲ ಎಂದು ಹೇಳಿದರು.
ಕಳೆದ ಶೈಕ್ಷಣಿಕ ಸಾಲಿನ ಪಿಯುಸಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ ಆರು ಮಂದಿ ಮತ್ತು ಎಸೆಸೆಲ್ಸಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ ಐವರು ವಿದ್ಯಾರ್ಥಿಗಳನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಅಭಿನಂದಿಸುವ ಮೂಲಕ ಕಾರ್ಯಕ್ರಮಕ್ಕೆ ಅತಿಥಿಗಳು ಚಾಲನೆ ನೀಡಿದರು
ನಮ್ಮ ನಾಡ ಒಕ್ಕೂಟದ ದ.ಕ. ಜಿಲ್ಲಾಧ್ಯಕ್ಷ ಡಾ.ಮುಹಮ್ಮದ್ ಆರಿಫ್ ಮಸೂದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹುಸೈನ್ ಕಾರ್ಕಳ ಒಕ್ಕೂಟದ ಕಾರ್ಯಚಟುವಟಿಕೆಗಳ ವರದಿ ವಾಚಿಸಿದರು.
ಕಾರ್ಯಕ್ರಮದಲ್ಲಿ ಪಿಯುಸಿ ಮತ್ತು ಎಸೆಸೆಲ್ಸಿಯಲ್ಲಿ ಉತ್ತಮ ಸಾಧನೆ ಮಾಡಿರುವ ಒಟ್ಟು 252 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಮತ್ತು ಕೆರಿಯರ್ ಕೌನ್ಸಿಲರ್ ಉಮರ್ ಯು.ಎಚ್. ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ನಮ್ಮ ನಾಡ ಕೇಂದ್ರ ಸಮಿತಿಯ ಖಜಾಂಚಿ ಅಬ್ದುಲ್ ಹಮೀದ್, ಸಂಘಟನಾ ಕಾರ್ಯದರ್ಶಿ ಇಸಾಕ್, ಉಡುಪಿ ಜಿಲ್ಲಾಧ್ಯಕ್ಷ ಮುಸ್ತಾಕ ಅಹ್ಮದ್, ಉ.ಕ. ಜಿಲ್ಲಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಪುತ್ತೂರು ಕಮ್ಯುನಿಟಿ ಸೆಂಟರ್ನ ಅಮ್ಜದ್ ಖಾನ್, ಬಂಟ್ವಾಳ ಘಟಕದ ಅಧ್ಯಕ್ಷ ಪಿ.ಎ.ರಹೀಂ, ಮಂಗಳೂರು ಘಟಕದ ಅಧ್ಯಕ್ಷ ರಾಝಿಕ್, ಟ್ರಸ್ಟಿ ಖಲೀಲ್ ಅಹ್ಮದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಮ್ಮ ನಾಡ ಒಕ್ಕೂಟದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹುಸೈನ್ ಹೈಕಾಡಿ ಸ್ವಾಗತಿಸಿದರು. ಮಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಬಾಷಾ ಸಾಂಬಾರತೋಟ ವಂದಿಸಿದರು.