ಕೊರೋನ ವೇಳೆ ಮಾಸ್ಕ್ ಧರಿಸದೆ ಮಳಿಗೆ ಪ್ರವೇಶಿಸಿದ ಪ್ರಕರಣ: ಡಾ. ಕಕ್ಕಿಲ್ಲಾಯ ವಿರುದ್ಧದ ಆರೋಪ ಪಟ್ಟಿ ಉಚ್ಚ ನ್ಯಾಯಾಲಯದಿಂದ ರದ್ದು

(ಡಾ. ಶ್ರೀನಿವಾಸ ಕಕ್ಕಿಲ್ಲಾಯ)
ಮಂಗಳೂರು, ಜೂ.20: ಕೊರೋನ ಸಾಂಕ್ರಾಮಿಕದ ಸಂದರ್ಭ ಮಳಿಗೆಯೊಂದಕ್ಕೆ ಮಾಸ್ಕ್ ಧರಿಸದೆ ಪ್ರವೇಶಿಸಿದ ಆರೋಪದಲ್ಲಿ ನಗರದ ಖ್ಯಾತ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ ವಿರುದ್ಧ ದಾಖಲಿಸಲಾಗಿದ್ದ ಆರೋಪ ಪಟ್ಟಿಗಳನ್ನು ರದ್ದುಪಡಿಸಿ ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶಿಸಿದೆ.
2021ರ ಮೇ 18ರಂದು ನಗರದ ಮಳಿಗೆಯೊಂದಕ್ಕೆ ಡಾ. ಶ್ರೀನಿವಾಸ ಕಕ್ಕಿಲ್ಲಾಯರು ಭೇಟಿ ನೀಡಿದ್ದ ವೇಳೆ ಮಾಸ್ಕ್ ಧರಿಸಿಲ್ಲ ಎಂದು ಆರೋಪಿಸಿ ಅವರ ವಿರುದ್ಧ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ವಿಚಾರಣೆಯು ಮಂಗಳೂರಿನ ಆರನೆ ಜೆಎಂಎಫ್ಸಿ ನ್ಯಾಯಾಲಯದಲ್ಲಿ ನಡೆದು ನಂತರ 2021ರ ಜೂನ್ 18ರಂದು ಈ ಪ್ರಕರಣು ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು. 2026ರ ಜೂನ್ 12ರಂದು ಉಚ್ಚ ನ್ಯಾಯಾಲಯ ಆರೋಪ ಪಟ್ಟಿಗಳನ್ನು ರದ್ದು ಪಡಿಸಿ ಆದೇಶಿಸಿದೆ.
ತನ್ನ ಮೇಲೆ ಹೊರಿಸಲಾಗಿದ್ದ ಮೊಕದ್ದಮೆಯನ್ನು ರದ್ದು ಪಡಿಸುವಂತೆ ಕೋರಿ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ 2021ರ ಆಗಸ್ಟ್ 3 ಸಲ್ಲಿಸಿದ್ದ ರಿಟ್ ಅರ್ಜಿಯ ಮೇಲೆ ಮಾನ್ಯ ನ್ಯಾಯಮೂರ್ತಿ ನಟರಾಜನ್ ಅವರ ನ್ಯಾಯಪೀಠವು 2021ರ ಆ. 31ರಂದು ಮಧ್ಯಂತರ ತಡೆಯಾಜ್ಞೆಯನ್ನು ನೀಡಿತ್ತು. ನಂತರ ನ್ಯಾಯಮೂರ್ತಿಗಳಾದ ನಾಗಪ್ರಸನ್ನ ಹಾಗೂ ಆರ್. ನಟರಾಜ್ ಅವರ ನ್ಯಾಯಪೀಠಕ್ಕೆ ಈ ತಡೆಯಾಜ್ಞೆಯನ್ನು ವಿಸ್ತರಿಸಲಾಗಿತ್ತು. ಇದೀಗ ನ್ಯಾಯಮೂರ್ತಿ ರವಿ ಹೊಸಮನಿ ಅವರ ನ್ಯಾಯಪೀಠವು ಈ ಮೊಕದ್ದಮೆಯನ್ನು ಸಂಪೂರ್ಣವಾಗಿ ರದ್ದು ಪಡಿಸುವಂತೆ ಅಂತಿಮ ಆದೇಶವನ್ನು ನೀಡಿದೆ.
ಹೆಚ್ಚೆಂದರೆ 200 ರೂಪಾಯಿ ದಂಡವನ್ನಷ್ಟೇ ವಿಧಿಸಬಹುದಾದ ಈ ಪ್ರಕರಣವನ್ನು ನ್ಯಾಯಾಂಗದ ವಿಚಾರಣೆ ಗೊಳಪಡಿಸಲು ಅಥವಾ ಶಿಕ್ಷಿಸಲು ಕಾನೂನಿನಲ್ಲಿ ಅವಕಾಶಗಳೇ ಇಲ್ಲ. ಮಾತ್ರವಲ್ಲ, ಸಾಂಕ್ರಾಮಿಕ ರೋಗಗಳ ಕಾಯಿದೆಯ ಅಡಿಯಲ್ಲಿ ಕೊರೋನಾ ಸಾಂಕ್ರಾಮಿಕದ ಪ್ರಕಟಣೆಯನ್ನು ಮಾಡಿಯೇ ಇಲ್ಲ, ಹಾಗಾಗಿ ಈ ಮೊಕದ್ದಮೆ ಯನ್ನು ಸಂಪೂರ್ಣವಾಗಿ ರದ್ದು ಪಡಿಸಬೇಕು ಎನ್ನುವ ಅರ್ಜಿದಾರರ ವಾದವನ್ನು ಮಾನ್ಯ ಉಚ್ಛ ನ್ಯಾಯಾಲಯವು ಪುರಸ್ಕರಿಸಿದೆ. ಪ್ರತಿವಾದಿಗಳಾಗಿದ್ದ ಮೂಲ ದೂರುದಾರರಾಗಲೀ, ಸರಕಾರವಾಗಲೀ ಯಾವುದೇ ಪ್ರತಿವಾದ ಗಳನ್ನು ಸಲ್ಲಿಸಲಿಲ್ಲ.
ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರ ಪರವಾಗಿ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ ಸಚಿನ್ ಬಿ.ಎಸ್. ಮತ್ತು ಅನಿಕೇತ್ ಕೆ.ವಿ. ಅವರು ವಾದಿಸಿದ್ದರು, ಮಂಗಳೂರಿನ ನ್ಯಾಯವಾದಿಗಳಾದ ಚಿದಾನಂದ ಕೆದಿಲಾಯ ಹಾಗೂ ಶಿವಪ್ರಸಾದ್ ಎ ಅವರು ಸಹಕರಿಸಿದ್ದಾರೆ.
ಈ ಪ್ರಕರಣವನ್ನು ದೇಶ-ವಿದೇಶಗಳ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿಸಿ, ನಿರಾಧಾರವಾಗಿದ್ದ, ಉತ್ಪ್ರೇಕ್ಷಿತ ಹೇಳಿಕೆಗಳನ್ನೂ, ವೈಯಕ್ತಿಕ ನಿಂದನೆಗಳನ್ನೂ ಮಾಡಿ ಡಾ. ಶ್ರೀನಿವಾಸ ಕಕ್ಕಿಲ್ಲಾಯರ ತೇಜೋವಧೆಗೂ ಈ ಸಂದರ್ಭ ಪ್ರಯತ್ನಿಸಲಾಗಿತ್ತು. ಅದಕ್ಕಾಗಿ ಸೂಪರ್ ಮಾರ್ಕೆಟ್ನ ಮಾಲಕರ ವಿರುದ್ಧ, ಮಂಗಳೂರಿನ ಐಎಂಎ ಮತ್ತು ಎಎಂಸಿ ಎಂಬ ವೈದ್ಯಕೀಯ ಸಂಘಟನೆಗಳ ಪದಾಧಿಕಾರಿಗಳ ವಿರುದ್ಧ, ಇನ್ನಿತರ ವ್ಯಕ್ತಿಗಳ ವಿರುದ್ಧ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಮಂಗಳೂರಿನ ಜೆಎಂಎಫ್ಸಿ ನ್ಯಾಯಾಲಯಗಳಲ್ಲಿ ಆಗಲೇ ಕ್ರಿಮಿನಲ್ ಮಾನಹಾನಿ ಪ್ರಕರಣಗಳನ್ನು ದಾಖಲಿಸಿದ್ದು, ಈ ಪ್ರಕರಣದ ನ್ಯಾಯಾಂಗ ಪ್ರಕ್ರಿಯೆಯು ಮುಂದುವರಿದಿದೆ.






