ಅಧಿಕ ಲಾಭಾಂಶದ ಆಮಿಷವೊಡ್ಡಿ ವಂಚನೆ ಆರೋಪ : ಪ್ರಕರಣ ದಾಖಲು

ಮಂಗಳೂರು, ಅ.13: ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಸಿಗಲಿದೆ ಎಂದು ಆಮಿಷವೊಡ್ಡಿ 7.19 ಲಕ್ಷ ರೂ. ವಂಚಿಸಿರುವ ಬಗ್ಗೆ ಹಿರಿಯ ನಾಗರಿಕರೊಬ್ಬರು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.
ಸುಮಾರು 72 ವರ್ಷ ಪ್ರಾಯದ ವೃದ್ಧ ವಂಚನೆಗೊಳಗಾದವರು.
ಅ.3ರಂದು ತಾನು ಫೇಸ್‌ಬುಕ್ ನೋಡುತ್ತಿದ್ದಾಗ ಹೂಡಿಕೆ ಬಗ್ಗೆ ಜಾಹೀರಾತು ಕಂಡು ಬಂದಿತ್ತು. ಅದರಂತೆ ಲಿಂಕ್ ಕ್ಲಿಕ್ ಮಾಡಿದಾಗ ಟೆಲಿಗ್ರಾಂ ಚಾನಲ್ ತೆರೆದುಕೊಂಡಿತ್ತು. ಬಳಿಕ ಗ್ರೂಪ್‌ವೊಂದಕ್ಕೆ ಸೇರಿದಾಗ ಸಾಗರ್ ಎಂಬಾತನ ಪರಿಚಯವಾಗಿತ್ತು. ಆತ ನೋಂದಣಿ ಮಾಡಿಸಿಕೊಳ್ಳಲು 19,300 ರೂ. ಹಾಕುವಂತೆ ತಿಳಿಸಿದ್ದ. ಅ.5ರಂದು ತಾನು 19,300 ರೂ. ಯುಪಿಐ ಮೂಲಕ ವರ್ಗಾಯಿಸಿದ್ದೆ. ಬಳಿಕ ಸೀನಿಯರ್ ಮ್ಯಾನೇಜರ್ ಸಾತ್ವಿಕ್ ಶೆಟ್ಟಿ ಎಂದು ಪರಿಚಯಿಸಿಕೊಂಡ ವ್ಯಕ್ತಿ ಬೆಳ್ಳಿ ಮತ್ತು ಚಿನ್ನದ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ 13 ಲಕ್ಷ ರೂ. ಲಾಭಾಂಶ ಮಾಡಿಕೊಡುವುದಾಗಿ ತಿಳಿಸಿದ. ಅದನ್ನು ನಂಬಿದ ತಾನು ಅ.8ರಂದು 7 ಲಕ್ಷ ರೂ. ಹಾಕಿದೆ. ಅ.9ರಂದು 1,420 ಮತ್ತು 11,539 ರೂ. ಖಾತೆಗೆ ಬಂದಿತ್ತು. ಅಮೆರಿಕದ 60 ಕಂಪೆನಿಯ ಗ್ರೂಪ್ ಇದೆ. ಅದರಲ್ಲಿ ಸೇರಿ ಹೂಡಿಕೆ ಮಾಡಿದರೆ 30 ಲಕ್ಷ ರೂ. ಲಾಭಾಂಶ ಬರುತ್ತದೆ ಎಂದು ಸಾತ್ವಿಕ್ ಶೆಟ್ಟಿ ತಿಳಿಸಿದ. ನಿಮ್ಮ ಪರವಾಗಿ ನಾನೇ 1 ಸಾವಿರ ಡಾಲರ್ ಹಾಕಿ ಅಕೌಂಟ್ ಓಪನ್ ಮಾಡಿಕೊಡುತ್ತೇನೆ. 10 ಲಕ್ಷ ರೂ. ಹೂಡಿಕೆ ಮಾಡಿ ಎಂದು ತಿಳಿಸಿದ. ಆವಾಗ ತನಗೆ ಸಂಶಯ ಬಂದಿದೆ ಎಂದು ಎಂದು ವಂಚನೆಗೊಳಗಾದ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





