ಪರಿಸರ ಸ್ನೇಹಿಯಾಗಿ ಹಬ್ಬಗಳನ್ನು ಆಚರಿಸಿ : ನರೇಂದ್ರ ಸ್ವಾಮಿ

ಮಂಗಳೂರು : ಮಣ್ಣಿನ ಗಣಪತಿ, ಹಸಿರು ಪಟಾಕಿಗಳೊಂದಿಗೆ ಪರಿಸರ ಸ್ನೇಹಿಯಾಗಿ ಹಬ್ಬಗಳನ್ನು ಆಚರಿಸಿ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಾಗೃತಿ ಮೂಡಿಸುತ್ತಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ.ನರೇಂದ್ರ ಸ್ವಾಮಿ ತಿಳಿಸಿದ್ದಾರೆ.
ಅವರು ಸೋಮವಾರ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ಅಂಗವಾಗಿ ಅಡ್ಯಾರ್ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ವಠಾರದಲ್ಲಿ ಆಯೋಜಿಸಿದ್ದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡುತ್ತಾ, ಎರಡೂ ಜಿಲ್ಲೆಗಳಲ್ಲಿ ಪ್ರತಿ ವರ್ಷವೂ ವಿಭಿನ್ನ ರೀತಿಯ ಥೀಮ್ ಗಳನ್ನು ಇಟ್ಟುಕೊಂಡು ವಿಶ್ವಪರಿಸರ ದಿನಾಚರಣೆ ಮಾಡಲಾಗುತ್ತದೆ. ಗಣೇಶ ಚತುರ್ಥಿ ಮತ್ತು ದೀಪಾವಳಿ ವೇಳೆ ಪರಿಸರ ಮಾಲಿನ್ಯ ಹೆಚ್ಚಾಗುವುದರಿಂದ ಎರಡೂ ಜಿಲ್ಲೆಯಲ್ಲಿ ರಾಸಾಯನಿಯುಕ್ತ ಬಣ್ಣದ ಗಣೇಶನ ಮೂರ್ತಿ ಬದಲಿಗೆ ಮಣ್ಣಿನ ಗಣೇಶನನ್ನು ಪೂಜಿಸುವಂತೆ, ಅದೇ ರೀತಿ ಹಸಿರು ಪಟಾಕಿ ಬಳಸಿ ದೀಪಾವಳಿ ಆಚರಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಮಂಡಳಿಯ ಈ ಕೆಲಸಕ್ಕೆ ಜನರ ಸ್ಪಂದನೆ ಕೂಡ ಚೆನ್ನಾಗಿದ್ದು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಶೇ.90ಕ್ಕಿಂತ ಹೆಚ್ಚು ಜನ ಮಣ್ಣಿನ ಗಣೇಶ ಮೂರ್ತಿಗಳನ್ನು ಬಳಸುತ್ತಿದ್ದಾರೆ ಎನ್ನುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗೆ ಶಾಶ್ವತ ಪರಿಹಾರ ಕೊಂಡುಕೊಳ್ಳಲು ಸುಮಾರು 1.70 ಲಕ್ಷ ಕಿಲೋ ಗ್ರಾಂ ಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆ ನಿರ್ಮಾಣಕ್ಕೆ ಬಳಸಲಾಗಿದೆ. ಬಂಟ್ವಾಳ ಮತ್ತು ಕೆದಂಬಾಡಿ ಘಟಕಗಳಲ್ಲಿ ಬರುವ ಪ್ರತಿದಿನ 18-20 ಟನ್ ಒಣ ತ್ಯಾಜ್ಯವನ್ನು ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳುತ್ತಿರುವುದು ರಾಜ್ಯದಲ್ಲೇ ಪ್ರಥಮ. ಸುವರ್ಣ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕೊಲ್ಲೂರಿನ ಶ್ರೀ ಮೂಕಾಂಬಿಕಾ ಕ್ಷೇತ್ರದ ಸ್ನಾನ ಘಟ್ಟದ ಸ್ವಚ್ಛತಾ ಕಾರ್ಯಕ್ರಮ ಕೈಗೊಂಡು ಸ್ನಾನ ಘಟ್ಟದಲ್ಲಿ ಸುಮಾರು 0.5 ಟನ್‌ರಷ್ಟು ತ್ಯಾಜ್ಯಗಳನ್ನು ಹೊರತೆಗಿದಿದೆ. ಇದೇ ವರ್ಷ ಉಡುಪಿ ಜಿಲ್ಲೆಯ ಮಲ್ಪೆ, ಕಾಪು, ಡೆಲ್ಟಾ-ಕೋಡಿ ಬೆಂಗ್ರೆ ಬೀಚ್‌ಗಳ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸದರಿ ಬೀಚ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಲ್ಪೆ ಬೀಚ್ ನಲ್ಲಿ 2.5 ಟನ್ ತ್ಯಾಜ್ಯ, ಕಾಪು ಬೀಚ್ ನಲ್ಲಿ 1.8 ಟನ್ ತ್ಯಾಜ್ಯ, ಡೆಲ್ಟಾ ಬೀಚ್ ನಲ್ಲಿ 1.2 ಟನ್ ತ್ಯಾಜ್ಯಗಳನ್ನು ಸಂಗ್ರಹಿಸಲಾಗಿದೆ ಎಂದು ಮಂಡಳಿಯ ಕೆಲಸದ ಬಗ್ಗೆ ಅಧ್ಯಕ್ಷರಾದ ಪಿಎಂ ನರೇಂದ್ರಸ್ವಾಮಿ ಅವರು ವಿವರಿಸಿದರು.
ಭೂಮಿ ಉಳಿಯಬೇಕಾದರೆ ಓಝೋನ್ ಪದರ ಉಳಿಯಬೇಕು. ಹಾಗೆಯೇ ವಾಯು ಮತ್ತು ಜಲ ಉಳಿಯಬೇಕು. ತಜ್ಞರು ಜಗತ್ತಿನಾದ್ಯಂತ ಜಲಕ್ಷಾಮ ಉಂಟಾಗಬಹುದು. ಮೂರನೇ ಯುದ್ಧ ನೀರಿಗಾಗಿ ನಡೆಯಬಹುದು ಎಂದು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಲ ಮಾಲಿನ್ಯದ ಬಗ್ಗೆ ಅತ್ಯಂತ ಜಾಗೃತರಾಗ ಬೇಕಾಗಿದೆ ಎಂದು ತಿಳಿಸಿದರು.
ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರು, 1974ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಡಿ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಹುಟ್ಟುಹಾಕಿ ಪರಿಸರ ಸಂರಕ್ಷಣೆಗೆ ಹಾಗು ಮಾಲಿನ್ಯ ನಿಯಂತ್ರಣಕ್ಕೆ ದೇಶದಲ್ಲೇ ಮೊತ್ತ ಮೊದಲ ಬಾರಿಗೆ ಅಡಿಗಲ್ಲು ಹಾಕಿದರು. ನಾವೆಲ್ಲರೂ ಅವರನ್ನು ಸ್ಮರಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಎಲ್ಲಾ ಕಾಯಿದೆಗಳ ಮಹತ್ವವನ್ನು ಶ್ರೀಸಾಮಾನ್ಯ ಜನರು ಅರಿತುಕೊಳ್ಳಬೇಕು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ರಾಜ್ಯಾದ್ಯಂತ ಸುವರ್ಣ ಮಹೋತ್ಸವವನ್ನು ಹಮ್ಮಿಕೊಂಡಿದೆ. ಮಂಡಳಿ ವತಿಯಿಂದ ಜಲ ಮಾಲಿನ್ಯ ನಿಯಂತ್ರಣ ಮಾಡಲು ಸಮುದ್ರ ಮಾತ್ರವಲ್ಲದೆ ರಾಷ್ಟ್ರೀಯ ಗಂಗಾ ಶುದ್ಧೀಕರಣ ಮಿಷನ್ ಅಡಿಯಲ್ಲಿ ನೇತ್ರಾವತಿ ಹಾಗೂ ಕುಮಾರಧಾರ ನದಿ ನೀರಿನ ಮಾದರಿಗಳನ್ನು ಪ್ರತಿ ತಿಂಗಳು ಪರೀಕ್ಷಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಬುದ್ದಿವಂತರ ಜಿಲ್ಲೆ ಎಂದು ಕರೆಸಿಕೊಳ್ಳುವ ದಕ್ಷಿಣ ಕನ್ನಡ ಮತ್ತು ಉಡುಪಿಯ ವಿವಿಧ ಶಿಕ್ಷಣ ಸಂಸ್ಥೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಇ ತ್ಯಾಜ್ಯ ಮತ್ತು ಮೈಕ್ರೋ ಪ್ಲಾಸ್ಟಿಕ್ ಬಗ್ಗೆ ಗಂಭೀರವಾದ ಚಿಂತನೆ ನಡೆಸಬೇಕು. ಜೊತೆಗೆ ಇ ತ್ಯಾಜ್ಯ ಮತ್ತು ಮೈಕ್ರೋ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಕರಾವಳಿ ಜಿಲ್ಲೆಯಲ್ಲಿ ಕೈಗಾರೀಕರಣ, ಬಂದರು, ನೌಕಾಯಾನ, ಕೃಷಿ ಮತ್ತು ನಗರೀಕರಣದಿಂದಾಗಿ ಹಲವು ರೀತಿಯ ಪರಿಸರ ಸಂಬಂಧಿತ ಸವಾಲುಗಳು ಉದ್ಭವಿಸಿವೆ. ಎಲ್ಲವನ್ನೂ ಹಂತಹಂತವಾಗಿ ನಿಭಾಯಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಇಲ್ಲಿನ ಪ್ರಾದೇಶಿಕ ಕಚೇರಿಗಳು ಕೆಲಸ ಮಾಡುತ್ತಿವೆ. ಈ ಜಿಲ್ಲೆಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಏಕ ಬಳಕೆ ಪ್ಲಾಸ್ಟಿಕ್ ಅನ್ನು ಬಳಸುತ್ತಾರೆ. ಅಂಥ ಪ್ಲಾಸ್ಟಿಕ್ ಸಮುದ್ರ ಸೇರುವುದನ್ನು ತಡೆಯಲು ಇಲ್ಲಿ ಆಗಾಗ ಹಲವು ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಬೀಚ್ ಕ್ಲಿನಿಂಗ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಶಾಸಕ ಡಾ.ವೈ.ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಡಾ.ಮಂಜುನಾಥ ಭಂಡಾರಿ, ಐವನ್ ಡಿಸೋಜ, ಮಾಜಿ ಸಚಿವ ಬಿ.ರಮಾನಾಥ ರೈ., ನಿಗಮ ಮಂಡಳಿಗಳ ಅಧ್ಯಕ್ಷರಾದ ಹರೀಶ್ ಕುಮಾರ್, ಮಮತಾ ಗಟ್ಟಿ, ಸದಾಶಿವ ಉಳ್ಳಾಲ್, ಶಾಲೆಟ್ ಪಿಂಟೊ, ಎಂ.ಎ.ಗಫೂರ್, ಟಿ.ಎಂ.ಶಹೀದ್, ಅಶೋಕ್ ಕುಮಾರ್ ಕೊಡವೂರು, ನೀಲಾವರ ಸುರೇಂದ್ರ ಅಡಿಗ, ಮಂಡಳಿಯ ಸದಸ್ಯ ಮರಿಸ್ವಾಮಿ, ಸದಸ್ಯ ಕಾರ್ಯದರ್ಶಿ ಲಿಂಗರಾಜು, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ದ.ಕ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನರ್ವಡೆ ವಿನಾಯಕ ಕರ್ಬಾರಿ ಮೊದಲಾದವರು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಡಾ.ಮಹೇಶ್ವರಿ ಸಂವಿಧಾನದ ಪೀಠಿಕೆ ವಾಚಿಸಿದರು. ದ.ಕ ಜಿಲ್ಲಾ ಮಾಲಿನ್ಯ ನಿಯಂತ್ರಣ ಆಧಿಕಾರಿ ಡಾ.ಲಕ್ಷ್ಮೀ ಕಾಂತ ಎಚ್ ವಂದಿಸಿದರು.
ಪರಿಸರ ಸಂರಕ್ಷಕರಿಗೆ ಸನ್ಮಾನ :
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ಅಂಗವಾಗಿ ಮಂಗಳೂರಿನಲ್ಲಿ ಆಯೋಜಿಸಿದ್ದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕಾರ್ಯಕ್ರಮದಲ್ಲಿ ಮಂಡಳಿಯ ಅಧ್ಯಕ್ಷ ಪಿಎಂ ನರೇಂದ್ರ ಸ್ವಾಮಿ ಅವರು, ಪರಿಸರ ಸಂರಕ್ಷಣೆಗಾಗಿ ಕಾರ್ಯ ನಿರ್ವಹಿಸಿದ ಜಯಪ್ರಕಾಶ್ ಎಕ್ಕೂರು, ಜಿತಿನ್ ಮಿಲನ್ ರೋಶ್, ಪಂಚವರ್ಣ ಯುವಕ ಮಂಡಳಿ, ಡಾ.ಎಚ್.ಎನ್.ಉದಯ ಶಂಕರ, ರತ್ನಾಕರ ಸಾಮಂತ್ ಅವರನ್ನು ಸನ್ಮಾನಿಸಿದರು. ಡಿಎಫ್ಒ ಮರಿಯಪ್ಪ ಆ್ಯಂಟೊನಿ ಸ್ವಾಗತಿಸಿದರು.







