ವೆನ್ಲಾಕ್ ಆಸ್ಪತ್ರೆಯ 175 ವರ್ಷಗಳ ಸಂಭ್ರಮಾಚರಣೆ: ಹಳೆ ವಿದ್ಯಾರ್ಥಿ ಸಂಘಕ್ಕೆ ಚಾಲನೆ, ವಿವಿಧ ಕಾರ್ಯಕ್ರಮ
‘ಕರುಣೆಯ ತೊಟ್ಟಿಲು’ ಬೀರು ಆರಂಭ

ಮಂಗಳೂರು, ಮೇ 8: ದ.ಕ. ಜಿಲ್ಲಾಸ್ಪತ್ರೆಯಾಗಿ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳ ರೋಗಿಗಳಿಗೂ ಉತ್ತಮ ಚಿಕಿತ್ಸೆಯ ತಾಣವಾಗಿ ಗುರುತಿಸಿಕೊಂಡಿರುವ ವೆನ್ಲಾಕ್ ಆಸ್ಪತ್ರೆಯು 175 ವರ್ಷಗಳನ್ನು ಪೂರೈಸಿದೆ. ಆಸ್ಪತ್ರೆಯ ಸಂಭ್ರಮಾಚರಣೆಯ ಸಲುವಾಗಿ ಲೇಡಿಗೋಶನ್, ಕೆಎಂಸಿ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ವೆನ್ಲಾಕ್ ಆಸ್ಪತ್ರೆಯ ಹಳೆ ವಿದ್ಯಾರ್ಥಿ ಸಂಘಕ್ಕೆ ಚಾಲನೆ ನೀಡಲಾಗಿದ್ದು, ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕ್ಸಿಕ ಹಾಗೂ ಅಧೀಕ್ಷ ಹಾಗೂ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಡಾ.ಶಿವಪ್ರಕಾಶ್ ಡಿ.ಎಸ್., ಸೆ. 14ರಂದು ನಗರದ ಟಿಎಂಎ ಪೈ ಕೆನ್ವೆನ್ಶನ್ ಸೆಂಟರ್ಲ್ಲಿ ಸಂಭ್ರಮಾಚರಣೆಯನ್ನು ಆಯೋಜಿಸಲಾಗಿದೆ ಎಂದರು.
ಸಂಭ್ರಮಾಚರಣೆಯ ನಿಮಿತ್ತ ಮ್ಯಾಗಝೀನ್ ಬಿಡುಗಡೆ ಮಾಡಲಾಗುತ್ತಿದ್ದು, ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು. ಇದೇ ವೇಳೆ ಆಸ್ಪತ್ರೆ ಹೆಸರಿನಲ್ಲಿ ಕಾಯಿನ್ ಬಿಡುಗಡೆ ಹಾಗೂ ಪೋಸ್ಟ್ ಕಾರ್ಡ್ ಬಿಡುಗಡೆಯನ್ನೂ ಮಾಡಲಾಗುವುದು ಎಂದು ಅವರು ಹೇಳಿದರು.
‘ಕರುಣೆಯ ತೊಟ್ಟಿಲು’ ಬೀರು ಆರಂಭ
ಆಸ್ಪತ್ರೆಗೆ ಬರುವ ನಿರ್ಗತಿಕರು, ವಿಕಲಚೇತನರು ಅಥವಾ ಬಡ ರೋಗಿಗಳಿಗೆ ಪೂರಕವಾಗಿ ಬಟ್ಟೆಗಳನ್ನು ಒದಗಿಸಲು ‘ಕರುಣೆಯ ತೊಟ್ಟಿಲು’ ಎಂಬ ಹೆಸರಿನಲ್ಲಿ ಬೀರು(ಕಬೋರ್ಡ್)ಗಳನ್ನು ತೆರೆಯಲಾಗುತ್ತದೆ. ಅಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲಾದ ಉತ್ತಮ ಸ್ಥಿತಿಯಲ್ಲಿರುವ ಬಟ್ಟೆಗಳನ್ನು ಇಟ್ಟು, ಅಗತ್ಯವಿದ್ದವರಿಗೆ ಒದಗಿಸುವ ಕಾರ್ಯ ನಡೆಯಲಿದೆ. 175 ವರ್ಷಗಳ ಸಂಭ್ರಮಾಚರಣೆಗೆ ಚಾಲನೆ ಈ ಕಾರ್ಯದ ಮೂಲಕ ನಡೆಯಲಿದೆ. ವೆನ್ಲಾಕ್ ಆಸ್ಪತ್ರೆಯ ತುರ್ತು ನಿಗಾ ಘಟಕ, ಮಕ್ಕಳ ಆಸ್ಪತ್ರೆ ಹಾಗೂ ಒಪಿಡಿ ವಿಭಾಗದಲ್ಲಿ ಈ ಕರುಣೆಯ ತೊಟ್ಟಿಲು ಬೀರುಗಳನ್ನು ಇರಿಸಲಾಗುವುದು ಎಂದು ಡಾ. ಶಿವಪ್ರಕಾಶ್ ಡಿ.ಎಸ್. ತಿಳಿಸಿದರು.
ವೆನ್ಲಾಕ್ನ ಸಂಭ್ರಮಕ್ಕೆ ಜಿಲ್ಲೆಯ ಮೊದಲ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಾದ ಲೇಡಿಗೋಶನ್ ಆಸ್ಪತ್ರೆ ಪೂರಕವಾಗಿದ್ದು, 300 ಹಾಸಿಗೆಗಳಿಂದ ಕೂಡಿದೆ. ವೆನ್ಲಾಕ್ ಮತ್ತು ಲೇಡಿಗೋಶನ್ ಆಸ್ಪತ್ರೆಗಳಿಗೆ ಭೇಟಿ ನೀಡುವವರಲ್ಲಿ ಜಿಲ್ಲೆಯ ಶೇ. 58 ರಷ್ಟು ರೋಗಿಗಳಾಗಿದ್ದರೆ, ಹೊರ ರಾಜ್ಯಗಳ ಶೇ. 22ರಷ್ಟು ರೋಗಿಗಳು ಸೇರಿದ್ದಾರೆ. ಶೇ. 20ರಷ್ಟು ಹೊರ ಜಿಲ್ಲೆಯವರಾಗಿದ್ದಾರೆ. ವೆನ್ಲಾಕ್ ಹಾಗೂ ಲೇಡಿಗೋಶನ್ ಆಸ್ಪತ್ರೆಗಳ ಸರಕಾರಿ ವೈದ್ಯರ ಜತೆಗೆ ಕೆಎಂಸಿಯ ವೈದ್ಯರು ಹಾಗೂ ವೈದ್ಯಕೀಯ ಸಹಕಾರವೂ ಅತೀ ಪ್ರಮುಖವಾಗಿದೆ. ಲೇಡಿಗೋಶನ್ ಆಸ್ಪತ್ರೆಯಲ್ಲಿ 2018-19ರ ಅವಧಿಯಲ್ಲಿ 22 ತಾಯಿ ಮರಣ ಸಂಭವಿಸಿತ್ತು. ಈ ದುರಂತದ ಹಿನ್ನೆಲೆಯಲ್ಲಿ ಕೈಗೊಂಡ ಹಲವು ಕಾರ್ಯಯೋಜನೆಗಳಿಂದಾಗಿ ಇದೀಗ ತಾಯಿ ಮರಣ ದರ ಶೂನ್ಯವಾಗಿದೆ. ಹೆರಿಗೆಯ ಸಂದರ್ಭದ ಶಿಶು ಮರಣದಲ್ಲೂ ಶೇ. 10ರಿಂದ ಶೇ. 5ಕ್ಕೆ ಇಳಿಕೆಯಾಗಿದ್ದು, ಅದನ್ನು ಶೂನ್ಯಕ್ಕಿಳಿಸುವ ಪ್ರಯತ್ನ ಸಾಗಿದೆ ಎಂದು ಲೇಡಿಗೋಶನ್ ಆಸ್ಪತ್ರೆಯ ಅಧೀಕ್ಷಕ ಡಾ. ದುರ್ಗಾ ಪ್ರಸಾದ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಎಂಸಿ ಡೀನ್ ಹಾಗೂ ಸಂಘದ ಗೌರವಾಧ್ಯಕ್ಷ ಡಾ. ಉಣ್ಣಿಕೃಷ್ಣನ್, ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಕೆ.ಆರ್. ಕಾಮತ್, ಕೋಶಾಧಿಕಾರಿ ಡಾ. ಎಂ. ಅಣ್ಣಯ್ಯ ಕುಲಾಲ್, ವೆನ್ಲಾಕ್ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ. ಸುಧಾಕರ್ ಟಿ., ಡಾ. ಸುರೇಶ್ ಶೆಟ್ಟಿ, ಡಾ. ಜೂಲಿಯಾನ ಎ.ಎಫ್. ಸಲ್ಡಾನಾ ಉಪಸ್ಥಿತರಿದ್ದರು.
ಅತ್ಯುತ್ತಮ ಲೋಗೋಗೆ ಬಹುಮಾನ
175 ವರ್ಷಗಳ ನೆನಪಿಗಾಗಿ ಲೇಡಿಗೋಶನ್, ವೆನ್ಲಾಕ್ ಹಾಗೂ ಕೆಎಂಸಿಯನ್ನು ಒಲಗೊಂಡು ಅತ್ಯುತ್ತಮ ಲೋಗೋವನ್ನು ಬಿಡುಗಡೆ ಮಾಡಲಾಗುವುದು. ಈ ನಿಟ್ಟಿನಲ್ಲಿ15 ದಿನಗಳೊಳಗೆ ಅತ್ಯುತ್ತಮ ಲೋಗೋವನ್ನು ಸಾರ್ವಜನಿಕರಿಂದ ಆಹ್ವಾನಿಸಲಾಗುತ್ತಿದೆ. ಆಯ್ಕೆಯಾದ ಅತ್ಯುತ್ತಮ ಲೋಗೋ ತಯಾರಿಸಿದವರಿಗೆ ಬಹುಮಾನವನ್ನು ಸೆ. 14ರ ಕಾರ್ಯಕ್ರಮದಲ್ಲಿ ನೀಡಲಾಗುವುದು. ಆಸಕ್ತರು ಆಸ್ಪತ್ರೆಯ ಇಮೇಲ್ wlkdk175@gmail.comಗೆ ಕಳುಹಿಸಲು ಕೋರಲಾಗಿದೆ.
ಸೂಪರ್ ಹೀರೋ ಆಗಿ ವೆನ್ಲಾಕ್ ಮೇಲ್ದರ್ಜೆಗೆ
ಇತರ ಜಿಲ್ಲಾ ಆಸ್ಪತ್ರೆಗಳಿಗೆ ಹೋಲಿಕೆ ಮಾಡಿದರೆ ಹೀರೋ ಆಗಿ ಗುರುತಿಸಿಕೊಂಡಿರುವ ವೆನ್ಲಾಕ್ ಅನ್ನು ಮುಂದಿನ ದಿನಗಳಲ್ಲಿ ಸೂಪರ್ ಹೀರೋ ಆಗಿ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ವೆನ್ಲಾಕ್ ನಲ್ಲಿ ಈಗಾಗಲೇ ಆರಂಭಗೊಂಡಿರುವ ಸರ್ಜಿಕಲ್ ವಿಭಾಗ, ಮೆಡಿಕಲ್ ಹಾಗೂ ಆರ್ಎಪಿಸಿಸಿ ವಿಭಾಗ ಹೊಸತಾಗಿದೆ. ಅಡ್ಮಿನ್ ಮತ್ತು ಒಪಿಡಿ ವಿಭಾಗ ಹಳೆಯ ಕಟ್ಟಡದಲ್ಲಿದ್ದು, ಅದನ್ನು ದುರಸ್ತಿ ಮಾಡುವ ಕಾರ್ಯ ನಡೆಯುತ್ತಿದೆ. ಅಡ್ಮಿನ್ ಬ್ಲಾಕ್ ಅನ್ನು ಹೆರಿಟೇಜ್ ಬ್ಲಾಕ್ ಆಗಿ ಪರಿವರ್ತಿಸುವ ಹಾಗೂ ಒಪಿಡಿ ಬ್ಲಾಕ್ ಅನ್ನು 70 ಕೋಟಿ ರೂ.ಗಳಲ್ಲಿ ಹಂತ ಹಂತವಾಗಿ ಮೇಲ್ದರ್ಜೆಗೇರಿಸುವ ಕಾರ್ಯ ನಡೆಯಲಿದೆ. ಕ್ರಿಟಿಕಲ್ ಕೇರ್ ಬ್ಲಾಕ್ ಕೂಡಾ ಆಗಲಿದ್ದು, ಒಪಿಡಿ ಬ್ಲಾಕ್ ಹೊಸತಾಗಿ ನಿರ್ಮಾಣವಾದರೆ ದೇಶದ ನಂ.1 ಸೆಟಪ್ ಆಗಿ ಆಸ್ಪತ್ರೆ ಗುರುತಿಸಲ್ಪಡಲಿದೆ. ಹಾಗಾಗಿ ಅಡ್ಮಿನ್ ಬ್ಲಾಕ್ ಸಂಪೂರ್ಣವಾಗಿ ನವೀಕರಣಗೊಳಿಸಲಾಗುವುದು. 100 ಅಧಿಕ ವರ್ಷ ಹಳೆಯ ಪೀಠೋಪಕರಣಗಳಿಗೆ ಹೊಸ ರೂಪು ನೀಡಲಾಗುವುದು. ವೈದ್ಯಕೀಯ ಉಪಕರಗಳನ್ನು ಅತ್ಯಾಧುನಿಕ ಉಪಕರಣಗಳಿಗೆ ಬದಲಿಸುವ ಉದ್ದೇಶವನ್ನೂ ಹೊಂದಲಾಗಿದೆ.
-ಡಾ. ಶಿವಪ್ರಕಾಶ್ ಡಿ.ಎಸ್., ಅಧೀಕ್ಷಕರು, ವೆನ್ಲಾಕ್ ಆಸ್ಪತ್ರೆ.
‘ತನ್ನ 175 ವರ್ಷಗಳ ಗತ ಇತಿಹಾಸದಲ್ಲಿ ಶಿಸ್ತಿನಿಂದ ನಡೆದ ಬಂದ ಆಸ್ಪತ್ರೆ ವೆನ್ಲಾಕ್ ಆಗಿದ್ದು, ರಾಜ್ಯದ 10 ಜಿಲ್ಲೆಗಳು ಮಾತ್ರವಲ್ಲದೆ, ಹೊರ ರಾಜ್ಯಗಳ ರೋಗಿಗಳು ಇಲ್ಲಿ ಚಿಕಿತ್ಸೆಗಾಗಿ ಆಗಮಿಸುತ್ತಿರುವುದು ಇಲ್ಲಿನ ಚಿಕಿತ್ಸೆಯ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಕ್ಯಾಲಿಕಟ್ನಿಂದ ಮಂಗಳೂರುವರೆಗೆ ಐದು ಮೆಡಿಕಲ್ ಕಾಲೇಜುಗಳಿವೆ. ಆದರೂ ಇಲ್ಲಿಗೆ ಇಂದಿಗೂ ರೈಲು ಹತ್ತಿ ರೋಗಿಗಳು ಬರುತ್ತಾರೆ. ಇದು ವೆನ್ಲಾಕ್, ಲೇಡಿಗೋಶನ್ ಆಸ್ಪತ್ರೆಯ ಹಿರಿಮೆ.’
-ಡಾ. ಶಾಂತಾರಾಮ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು.







