BELTHANGADY | ಮಹೇಶ್ ಶೆಟ್ಟಿ, ಗಿರೀಶ್ ಮಟ್ಟಣ್ಣವರ್, ಸಮೀರ್ ಎಂ.ಡಿ. ಸಹಿತ ಐವರ ವಿರುದ್ಧ ದೂರು ನೀಡಿದ ಚಿನ್ನಯ್ಯ

ಚಿನ್ನಯ್ಯ (File photo)
ಬೆಳ್ತಂಗಡಿ, ಡಿ.20: ಧರ್ಮಸ್ಥಳ ಪ್ರಕರಣದಲ್ಲಿ ಜೈಲು ಸೇರಿ ಹೊರಬಂದ ಚಿನ್ನಯ್ಯ ಇದೀಗ ಮಹೇಶ್ ಶೆಟ್ಟಿ ತಿಮರೋಡಿ, ಯೂಟ್ಯೂಬರ್ ಸಮೀರ್ ಎಂ.ಡಿ. ಸಹಿತ ಐವರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಸೌಜನ್ಯಾ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ., ಯೂಟ್ಯೂಬರ್ ಸಮೀರ್ ಎಂ.ಡಿ. ಹಾಗೂ ಸೌಜನ್ಯಾಳ ಮಾವ ವಿಠಲ ಗೌಡ ಅವರು ತನಗೆ ತನ್ನ ಕುಟುಂಬಕ್ಕೆ ತಮಗೆ ಜೀವಬೆದರಿಕೆ ಹಾಕಬಹುದು. ಆದ್ದರಿಂದ ತನಗೆ ರಕ್ಷಣೆ ನೀಡಬೇಕು ಎಂದು ಚಿನ್ನಯ್ಯ ಪೊಲೀಸ್ ದೂರಿನಲ್ಲಿ ಆಗ್ರಹಿಸಿದ್ದಾನೆ.
ಧರ್ಮಸ್ಥಳ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದ ಚಿನ್ನಯ್ಯ, ಡಿ.18 ರಂದು ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾಗಿದ್ದ. ಅಂದು ರಾತ್ರಿ ಎಂಟು ಗಂಟೆ ಸುಮಾರಿಗೆ ಚಿನ್ನಯ್ಯ ತನ್ನ ಪತ್ನಿ ಮಲ್ಲಿಕಾ ಮತ್ತು ಸಹೋದರಿ ರತ್ನಾ ಜೊತೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾನೆ.
ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್ ಟಿ, ಯೂಟ್ಯೂಬರ್ ಸಮೀರ್ ಎಂ.ಡಿ., ಸೌಜನ್ಯಾಳ ಮಾವ ವಿಠಲ ಗೌಡ, ಗಿರೀಶ್ ಮಟ್ಟಣ್ಣವರ್ ಹಾಗೂ ಸಂಗಡಿಗರು ತನಗೆ ಮತ್ತು ತನ್ನ ಪತ್ನಿ ಮಲ್ಲಿಕಾ ಯಾನೆ ನಾಗಮ್ಮ ಗೆ ಜೀವಬೆದರಿಕೆ ಹಾಕಬಹುದು. ಆದ್ದರಿಂದ ಸೂಕ್ತ ಕಾನೂನು ಕ್ರಮ ಕೈಗೊಂಡು ತಮಗೆ ಯಾವುದೇ ತೊಂದರೆಯಾಗದಂತೆ ರಕ್ಷಣೆ ಕಲ್ಪಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.
ಬೆಳ್ತಂಗಡಿ ಪೊಲೀಸರು ದೂರು ಸ್ವೀಕರಿಸಿದ್ದಾರೆ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ತಿಳಿಸಿದ್ದಾರೆ.







