ಮಂಗಳೂರಿನ ಯುವ ಕಂಟೆಂಟ್ ಕ್ರಿಯೇಟರ್‌ಗಳೊಂದಿಗೆ ಸಿಎಂ ಡಿ.ಕೆ. ಶಿವಕುಮಾರ್ ಸಂವಾದ

ಮಂಗಳೂರು 8: ರಾಜ್ಯ ಸಚಿವ ಸಂಪುಟ ಸಭೆಗೆ ಮಂಗಳೂರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಥಳೀಯ ಯುವ ಕಂಟೆಂಟ್ ಕ್ರಿಯೇಟರ್‌ಗಳನ್ನು ಭೇಟಿ ಮಾಡಿ ಸಂವಾದ ನಡೆಸಿದರು.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ನಮ್ಮ ಕುಡ್ಲದ ಸ್ಫೂರ್ತಿಯನ್ನು ಕಟ್ಟಿಕೊಡುವ ಬೆಳಗ್ಗೆ ಯುವ ಧ್ವನಿಗಳೊಂದಿಗೆ ಸ್ಥಳೀಯ ಸೊಗಡನ್ನು ಅನುಭವಿಸಲು ಸಾಧ್ಯವಾಯಿತು” ಎಂದು ಬರೆದಿದ್ದಾರೆ.
ಬೆಳಗಿನ ಉಪಾಹಾರದ ವೇಳೆ ನಡೆದ ಈ ಸಂವಾದದಲ್ಲಿ ಮಂಗಳೂರಿನ ಸಾಂಪ್ರದಾಯಿಕ ಖಾದ್ಯಗಳಾದ ಮಂಗಳೂರು ಬನ್ಸ್, ಗೋಲಿ ಬಜೆ ಮತ್ತು ಶಾವಿಗೆಗಳನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, ಯುವ ಕಂಟೆಂಟ್ ಕ್ರಿಯೇಟರ್‌ಗಳೊಂದಿಗೆ ಮಂಗಳೂರು ನಗರದ ಕುರಿತು ಅವರ ದೃಷ್ಟಿಕೋನ, ಅವಕಾಶಗಳು ಹಾಗೂ ಭವಿಷ್ಯದ ಕನಸುಗಳ ಬಗ್ಗೆ ಮಾತುಕತೆ ನಡೆಸಿದ್ದಾಗಿ ತಿಳಿಸಿದ್ದಾರೆ.
“ಅವರು ಪ್ರೀತಿಸುವ ನಗರ, ಅವರು ಕಾಣುತ್ತಿರುವ ಅವಕಾಶಗಳು ಮತ್ತು ಅವರು ಕನಸು ಕಾಣುತ್ತಿರುವ ಭವಿಷ್ಯದ ಬಗ್ಗೆ ಅವರ ಮಾತುಗಳನ್ನು ಆಲಿಸುವ ಅವಕಾಶ ದೊರೆಯಿತು. ಹೊಸ ಸಂಭಾಷಣೆಗಳು ಮತ್ತು ಪರಿಚಿತ ರುಚಿಗಳೊಂದಿಗೆ ದಿನವನ್ನು ಅದ್ಭುತವಾಗಿ ಆರಂಭಿಸಿದ್ದೇನೆ” ಎಂದು ಮುಖ್ಯಮಂತ್ರಿ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.






