ಪಿ.ಎ.ಕಾಲೇಜಿನಲ್ಲಿ ಫೇಸ್ ಎಐ ಉನ್ನತ ಅಧ್ಯಯನ ಕೇಂದ್ರದ ಶಿಲಾನ್ಯಾಸ ನೆರವೇರಿಸಿದ ಸಿಎಂ ಸಿದ್ದರಾಮಯ್ಯ

ಕೊಣಾಜೆ: ಮೂಢನಂಬಿಕೆ, ಅಂಧಶ್ರದ್ಧೆಯಿದ್ದರೆ ವಿದ್ಯಾವಂತನಾದರೂ ಪ್ರಯೋಜನವಿಲ್ಲ. ಮಾನವನಾಗಿ ಬದುಕುವ ವಿದ್ಯೆ ಸಿಗಬೇಕಿದೆ. ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ವೈಚಾರಿಕತೆ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸುವ ಶಿಕ್ಷಣ ಅಗತ್ಯವಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಅವರು ಕೊಣಾಜೆ ನಡುಪದವಿನ ಪಿ.ಎ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ಫೇಸ್ ಎಐ ಉನ್ನತ ಅಧ್ಯಯನ ಕೇಂದ್ರದ ಶಿಲಾನ್ಯಾಸ, ಫೇಸ್ ಟ್ರೈಡ್ ಪಾರ್ಕ್ ಮತ್ತು ಫೇಸ್ ಸ್ಪೋರ್ಟ್ಸ್ ಅರೇನಾ ಶಿಲಾನ್ಯಾಸ ಹಾಗೂ ಪೇಸ್ ಕೇರ್ಸ್ ಸಮುದಾಯ ಸೇವೆ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯೆ ಪಡೆದ ನಂತರ ಸಮಾಜಕ್ಕೆ ನೀಡುವ ಕೊಡುಗೆ ಬಗ್ಗೆ ವಿದ್ಯಾರ್ಥಿಗಳು ಗಮನಹರಿಸಬೇಕು. ಮೂಢನಂಬಿಕೆಗಳಿರುವ ಸಮಾಜದ ಜೊತೆ ರಾಜಿಯಾಗಲೀ, ಅಂಧಶ್ರದ್ಧೆಯ ಪಾಲನೆಯಾಗಲಿ ಮಾಡಬಾರದು ಎಂದರು.
ಸಮಾಜದಲ್ಲಿ ಅನೇಕ ಧರ್ಮ ಜಾತಿಗಳಿವೆ. ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸಬೇಕು ಎಂದು ಜನರಿಗೆ ಹೇಳುತ್ತೇವೆ. ವೈವಿಧ್ಯತೆಯಲ್ಲಿ ಏಕತೆ ಇಲ್ಲದೇ ಹೋದರೆ ಪ್ರಯೋಜನವಿಲ್ಲ. ವೈಚಾರಿಕತೆ, ವೈಜ್ಞಾನಿಕತೆ ಇರುವ ಹಾಗೂ ಜಾತಿ ವ್ಯವಸ್ಥೆಗೆ ಪರಿಹಾರ ರೂಪದಲ್ಲಿರುವ ವಿದ್ಯೆ ಬೇಕಿದೆ ಎಂದರು.
ಸಮಾಜದಲ್ಲಿ ಅಸಮಾನತೆ ಇರುವುದು ಬಹುಸಂಖ್ಯಾತ ಜನರು ಶಿಕ್ಷಣದಿಂದ ವಂಚಿತರಾದರು ಎಂಬ ಕಾರಣದಿಂದ ಅಸಮಾನತೆ ನಿರ್ಮಾಣವಾಗಿದೆ . ಇದನ್ನು ಹೋಗಲಾಡಿಸಲು ಪ್ರಯತ್ನ ಮಾಡಬೇಕು. ಸ್ವಾತಂತ್ರ್ಯ ಯಶಸ್ವಿಯಾಗಲು ಅಸಮಾನತೆ ಸಮಾಜದಿಂದ ತೊಳಗಬೇಕು ಎಂದರು.
ಸಮ ಸಮಾಜ ನಿರ್ಮಾಣ :
ಯಾವ ಧರ್ಮವೂ ಇನ್ನೊಬ್ಬರನ್ನು ದ್ವೇಷಿಸಿ ಎನ್ನುವುದಿಲ್ಲ. ಪರಸ್ಪರ ಪ್ರೀತಿಸಬೇಕೆಂಬ ಮನೋಭಾವ ವಿದ್ಯಾರ್ಥಿಗಳಲ್ಲಿ ಬೆಳೆದರೆ ನಮ್ಮ ಸಮಾಜದಲ್ಲಿ ಅಸಮಾನತೆ ತೊಲಗಿಸುವುದು ಸುಲಭ. ಎಲ್ಲರೂ ಮುಖ್ಯವಾಹಿನಿಗೆ ಬಂದಾಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಅಲ್ಪಸಂಖ್ಯಾತ ಕಲ್ಯಾಣ ಸಚಿವರಾದ ಝಮೀರ್ ಅಹ್ಮದ್ ಖಾನ್ , ಮುಖ್ಯ ಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಾಸೀರ್ ಅಹ್ಮದ್, ಶಾಸಕರಾದ ಅಶೋಕ್ ರೈ, ಯೆನೆಪೋಯ ವಿವಿಯ ಕುಲಾಧಿಪತಿ ಯೆನೆಪೋಯ ಡಾ.ಅಬ್ದುಲ್ಲಾ ಕುಂಞಿ, ಎಂಎಲ್ ಸಿ ಮಂಜುನಾಥ ಭಂಡಾರಿ, ಟ್ರಸ್ಟಿಗಳಾದ ಲತೀಫ್ ಇಬ್ರಾಹಿಂ, ಝುಬೈರ್ ಇಬ್ರಾಹಿಂ, ಸಿ.ಎಚ್ ಸೆಂಟರ್ ಚಟರಿಟೇಬಲ್ ಟ್ರಸ್ಟ್ ಕಾಸರಗೋಡು ಅಧ್ಯಕ್ಷ ಪಿ.ಎ.ಅಬೂಬಕ್ಕರ್ ಹಾಜಿ, ಪಿಎ ಸಮೂಹ ಸಂಸ್ಥೆಯ ಹಣಕಾಸು ನಿರ್ದೇಶಕ ಕೆ.ಅಹ್ಮದ್ ಕುಟ್ಟಿ, ಪೇಸ್ ಗ್ರುಇಪ್ ದುಬಾಯಿ ನಿರ್ದೇಶಕ ಆಸೀಫ್ ಅಹ್ಮದ್, ಆಡಳತ ಮಾಜಿ ನಿರ್ದೆಶಕ ಕೆ.ಎಂ.ಹನೀಫ್ , ಕರ್ನಾಟಕ ಅಲೈಡ್ ಹೆಲ್ತ್ ಕೇರ್ ಕೌನ್ಸಿಲ್ ನ ನಿರ್ದೇಶಕರಾದ ಯು.ಟಿ.ಇಫ್ತೀಕಾರ್ ಮೊದಲಾದವರು ಉಪಸ್ಥಿತರಿದ್ದರು.
ಪಿಎ ಎಜ್ಯುಕೇಶನ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಪಿ.ಎ.ಅಬ್ದುಲ್ಲಾ ಇಬ್ರಾಹಿಂ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಎ.ಪದವಿ ಕಾಲೇಜು ಪ್ರಾಂಶುಪಾಲರಾದ ಡಾ.ಸರ್ಫ್ರಾಝ್ ಹಾಸಿಂ ಅವರು ಸ್ವಾಗತಿಸಿದರು. ಉಪಪ್ರಾಂಶುಪಾಲೆ ಶರ್ಮಿಳಾ ಕುಮಾರಿ ವಂದಿಸಿದರು. ಅನು ಕಾರ್ಯಕ್ರಮ ನಿರೂಪಿಸಿದರು.
ಪೇಸ್ ಗ್ರೂಪ್ ನ ಸಂಸ್ಥಾಪಕರಾದ ಡಾ.ಪಿ.ಎ.ಇಬ್ರಾಹಿಂ ಅವರ ದೂರದೃಷ್ಟಿಯ ಫಲವಾಗಿ ಭಾರತ ಹಾಗೂ ವಿದೇಶಗಳಲ್ಲಿ ಅನೇಕ ಶೈಕ್ಷಣಿಕ ಸಂಸ್ಥೆಗಳು ಸ್ಥಾಪಿತವಾಗಿದ್ದು, ಸುಮಾರು 36,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ದೊಡ್ಡಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಪೇಸ್ ಸಂಸ್ಥೆ, ಉತ್ತಮ ಗುಣಮಟ್ಟದ ವಿದ್ಯಾಸಂಸ್ಥೆಯಾಗಿದೆ. ಉತ್ತಮ ಕಲಿಕಾ ವಾತಾವರಣವನ್ನು ನೀಡುವ ಶಿಕ್ಷಣಸಂಸ್ಥೆ ಯಾಗಿರುವುದು ಶ್ಲಾಘನೀಯ.
ಸಿದ್ದರಾಮಯ್ಯ, ಮುಖ್ಯಮಂತ್ರಿಗಳು







