ದುಷ್ಕರ್ಮಿಗಳಿಂದ ಹತ್ಯೆಯಾದ ಅಬ್ದುಲ್ ರಹ್ಮಾನ್ ನಿವಾಸಕ್ಕೆ ದಲಿತ ಸಂಘರ್ಷ ಸಮಿತಿ ನಿಯೋಗ ಭೇಟಿ

ಮಂಗಳೂರು: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಈರಾಕೋಡಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಬಂಟ್ವಾಳ ಕೊಳತ್ತಮಜಲು ನಿವಾಸಿ ಅಬ್ದುಲ್ ರಹ್ಮಾನ್ ಅವರ ನಿವಾಸಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ಸ್ವಾಭಿಮಾನಿ ಪ್ರೊ.ಬಿ.ಕೃಷ್ಣಪ್ಪ ಬಣ, ದ.ಕ.ಜಿಲ್ಲಾ ಸಮಿತಿಯ ನಿಯೋಗವು ಇಂದು ಭೇಟಿ ನೀಡಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿತು.
ಈ ವೇಳೆ ಹತ್ಯೆ ನಡೆದ ಬಗ್ಗೆ ಹಾಗೂ ನಂತರದ ಪರಿಸ್ಥಿತಿಗಳ ಬಗ್ಗೆ ಮನೆಯವರೊಂದಿಗೆ ಸಮಾಲೋಚನೆ ನಡೆಸಿ, ತಮ್ಮ ನೋವಿನಲ್ಲಿ ಭಾಗಿಯಾಗುವುದರ ಜೊತೆಗೆ ಅಮಾಯಕ ಅಬ್ದುಲ್ ರಹ್ಮಾನ್ ಕೊಲೆ ಆರೋಪದಲ್ಲಿ ನೇರವಾಗಿ ಭಾಗಿಯಾದ ಹಾಗೂ ಸೂತ್ರಧಾರರನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಅಬ್ದುಲ್ ರಹ್ಮಾನ್ ಮನೆಯವರಿಗೆ ಗರಿಷ್ಠ ಪ್ರಮಾಣದಲ್ಲಿ ಆರ್ಥಿಕ ಪರಿಹಾರ ನೀಡುವಂತೆ ಸರಕಾರ ಹಾಗೂ ಪೊಲೀಸು ಇಲಾಖೆಗೆ ಒತ್ತಾಯಿಸುವುದಾಗಿ ತಿಳಿಸಲಾಯಿತು.
ಅಲ್ಲದೆ ಮುಂದಿನ ಎಲ್ಲಾ ಕಾನೂನು ಹೋರಾಟಗಳಲ್ಲೂ ಸಂಘಟನೆಯು ತಮ್ಮ ಜೊತೆ ನಿಲ್ಲುವ ಭರವಸೆಯನ್ನು ನೀಡಿ, ಮನೆಯವರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಲಾಯಿತು.
ನಿಯೋಗದಲ್ಲಿ ಜಿಲ್ಲಾ ಸಂಚಾಲಕರಾದ ಸದಾಶಿವ ಪಡುಬಿದ್ರಿ, ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ಜಿಲ್ಲಾ ದಲಿತ ಕಲಾ ಮಂಡಳಿ ಸಂಚಾಲಕರಾದ ಕಮಲಾಕ್ಷ ಬಜಾಲ್, ಜಿಲ್ಲಾ ಸಂಘಟನಾ ಸಂಚಾಲಕರಾದ ರಘು ಕೆ.ಎಕ್ಕಾರು, ಕೃಷ್ಣಾನಂದ ಡಿ., ಸಂಕಪ್ಪ ಕಾಂಚನ್, ಮಂಗಳೂರು ತಾಲೂಕು ಸಂಘಟನಾ ಸಂಚಾಲಕರಾದ ರುಕ್ಕಯ್ಯ ಕರಂಬಾರು, ಕೃಷ್ಣ ಕೆ. ಎಕ್ಕಾರು, ಎಕ್ಕಾರು ಗ್ರಾಮ ಸಂಚಾಲಕರಾದ ಗಣೇಶ್ ಕೆಂಚಗುಡ್ಡೆ, ಮಹಿಳಾ ಸಂಚಾಲಕಿ ಸೌಮ್ಯ ಸುರೇಶ್, ಸಂಘಟನಾ ಸಂಚಾಲಕರಾದ ವಾಸು ತೆಂಕ ಎಕ್ಕಾರು, ಸುರೇಶ್ ಸೌಮ್ಯ, ಮಂಜುನಾಥ ಉಪಸ್ಥಿತರಿದ್ದರು.







