ಹೆದ್ದಾರಿ ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ದ.ಕ. ಜಿಲ್ಲಾಧಿಕಾರಿ ಸೂಚನೆ

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಂಡುಬರುವ ವಿವಿಧ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸಲು ಕ್ರಮಕೈಗೊಳ್ಳಲು ರಾ.ಹೆ. ಪ್ರಾಧಿಕಾರಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೂಚಿಸಿದ್ದಾರೆ.
ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳನ್ನು ತಡೆಗಟ್ಟಲು ರಸ್ತೆ ಅಗಲೀಕರಣ, ಬೈಪಾಸ್, ಫ್ಲೈ ಓವರ್ ಸೇರಿದಂತೆ 24 ವಿಧಧ ಕಾಮಗಾರಿಗಳನ್ನು ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಗುರುತಿಸಲಾಗಿತ್ತು. ಆದರೆ ಕೆಲವು ಪ್ರಮುಖ ಸ್ಥಳಗಳಲ್ಲಿ ಸಂಚಾರ ಕಾರಣ ಮುಂದೊಡ್ಡಿ ಕಾಮಗಾರಿಗಳನ್ನು ಇನ್ನೂ ಕೈಗೊತ್ತಿಕೊಳ್ಳದಿರುವುದು ಕಂಡು ಬಂದಿದೆ. ಇದರಿಂದ ಸಂಚಾರ ಸಮಸ್ಯೆ ಇನ್ನಷ್ಟು ದಟ್ಟಣೆಯಾಗಿದೆ. ಸಂಚಾರ ಪೊಲೀಸರ ಸಹಕಾರ ಪಡೆದು ಈ ಎಲ್ಲಾ ಕಾಮಗಾರಿಗಳನ್ನು ಮುಂದಿನ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಡಿಸಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾವೇದ್ ಅಬ್ದುಲ್ಲಾ ಮಾತನಾಡಿ ಕೂಳೂರು ಹೊಸ ಸೇತುವೆ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಶೀಘ್ರದಲ್ಲೇ ಸೇತುವೆಯ ಒಂದು ಭಾಗ ಪೂರ್ಣ ಗೊಳ್ಳಲಿದೆ. ಕೂಳೂರಿನಿಂದ ಬೈಕಂಪಾಡಿವರೆಗೆ 6 ಲೇನ್‌ಗಳ ಹೆದ್ದಾರಿ ನಿರ್ಮಾಣಗೊಳ್ಳಲಿದೆ. ಈ ರಸ್ತೆಯ ಎರಡೂ ಕಡೆಗಳಲ್ಲಿ ಪ್ರತ್ಯೇಕವಾಗಿ ಸರ್ವಿಸ್ ರಸ್ತೆಯೂ ಇರಲಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿಯಿಂದ ಬೈಕಂಪಾಡಿ ಕೈಗಾರಿಕಾ ಪ್ರದೇಶಕ್ಕೆ ತಿರುವು ಪಡೆಯುವ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ನಿಭಾಯಿಸಲು ಹೊಸದಾಗಿ ರೈಲ್ವೆ ಅಂಡರ್‌ಪಾಸ್ ನಿರ್ಮಿಸಲು ಮಂಜೂರಾತಿ ದೊರಕಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಜಾವೇದ್ ಅಬ್ದುಲ್ಲಾ ಮಾಹಿತಿ ನೀಡಿದರು.
ರಾ.ಹೆ.ಯ ಕೂಳೂರು ಬಳಿಕದ ಪ್ರದೇಶಗಳಲ್ಲಿ ಬೀದಿದೀಪ ಅಳವಡಿಸಬೇಕು ಎಂದು ಮಹಾನಗರಪಾಲಿಕೆಗೆ ಹಾಗೂ ರಾ.ಹೆ.ಯ ಕಲ್ಲಾಪು, ಜಪ್ಪಿನಮೊಗರು, ಮಹಾಕಾಳಿಪಡ್ಪು ಜಂಕ್ಷನ್‌ಗಳಲ್ಲಿ ಸಿಗ್ನಲ್ ಅಳವಡಿಸುವ ಬಗ್ಗೆ ಟ್ರಾಫಿಕ್ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲು ರಾ.ಹೆ. ಪ್ರಾಧಿಕಾರಕ್ಕೆ ಸೂಚಿಸಿದರು.
ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಜಿಲ್ಲೆಯಲ್ಲಿ 2025ರ ಅ.30ರವರೆಗೆ ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದ 720 ಪ್ರಕರಣಗಳನ್ನು ದಾಖಲಿಸಿ 17.39 ಲಕ್ಷ ರೂ.ದಂಡ ಹಾಗೂ ಟಿಂಟೆಡ್ ಗ್ಲಾಸ್ ಅಳವಡಿಸಿದ ವಾಹನಗಳ ಮೇಲೆ 8,066 ಪ್ರಕರಣ ದಾಖಲಿಸಿ 38.39 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ನವಮಂಗಳೂರು ವ್ಯಾಪ್ತಿಯಲ್ಲಿ ಟ್ರಕ್, ಲಾರಿಗಳ ಪಾರ್ಕಿಂಗ್‌ಗೆ ತಣ್ಣೀರುಬಾವಿ ಮತ್ತು ಬೈಕಂಪಾಡಿಯಲ್ಲಿ ಎನ್‌ಎಂಪಿಎ ವತಿಯುಂದ ಟ್ರಕ್ ಟರ್ಮಿನಲ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಎಸ್ಪಿ ಡಾ.ಕೆ.ಅರುಣ್, ಮಂಗಳೂರು ಉಪ ವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮುಹಮ್ಮದ್ ನಝೀರ್, ಡಿಸಿಪಿ ರಶಂಕರ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ರಾಘವೇಂದ್ರ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.







