ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ವಿರುದ್ಧ ಮಾನಹಾನಿಕರ ಪೋಸ್ಟ್: ಗಿರೀಶ್ ಮಟ್ಟಣ್ಣವರ್ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ ಮೇ 8: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮಾನಿಹಾನಿಕರ ಪೋಸ್ಟ್ ಗಳನ್ನು ಹಾಕಿರುವ ಆರೋಪದಲ್ಲಿ ಗಿರೀಶ್ ಮಟ್ಟಣ್ಣವರ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧರ್ಮಸ್ಥಳ ನಿವಾಸಿ ಸುಬ್ರಹ್ಮಣ್ಯ ಪ್ರಸಾದ್ ಎಂಬವರು ಈ ಬಗ್ಗೆ ದೂರು ನೀಡಿದ್ದಾರೆ.
ಗಿರೀಶ್ ಮಟ್ಟಣ್ಣನವರ್ ಸಾಮಾಜಿಕ ಮಾಧ್ಯಮ ಇನ್ ಸ್ಟಾಗ್ರಾಂ ನಲ್ಲಿ ಸತ್ಯಕ್ಕೆ ದೂರವಾದ ಗಂಭೀರ ಆರೋಪಗಳನ್ನು ಮಾಡುವ ಮೂಲಕ ಡಾ.ಹೆಗ್ಗಡೆಯವರ ವ್ಯಕ್ತಿತ್ವಕ್ಕೆ ಕುಂದುತರುವ ಪ್ರಯತ್ನ ನಡೆಸಿ ಸಮಾಜದಲ್ಲಿ ಅವರ ಸ್ಥಾನಮಾನಕ್ಕೆ ಹಾನಿಯುಂಟು ಮಾಡುವ ಪ್ರಯತ್ನ ಮಾಡಿದ್ದಾರೆ. ಅಲ್ಲದೇ, ಸಮಾಜದಲ್ಲಿ ವೈರತ್ವ ದ್ವೇಷ ವೈಮನಸ್ಸು ಉಂಟು ಮಾಡಲು ಪ್ರಯತ್ನಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಈ ದೂರಿನನ್ವಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ BNS-2023 (u/s-353(2)ರಡಿ ಗಿರೀಶ್ ಮಟ್ಣಣ್ಣನವರ್ ವಿರುದ್ಧ ಎಪ್ರಿಲ್ 18ರಂದು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ತನಿಖೆಗೆ ಹಾಜರಾಗಲು ನೋಟಿಸ್ ಜಾರಿ
ಗಿರೀಶ್ ಮಟ್ಟಣ್ಣವರ್ ಎಸ್ಐಟಿ ಕಚೇರಿಗೆ ಮೇ 7ರಂದು ಗಿರೀಶ್ ಮಟ್ಟಣ್ಣವರ್ ಹಾಜರಾಗಿರುವ ಬಗ್ಗೆ ಮಾಹಿತಿ ಪಡೆದ ಧರ್ಮಸ್ಥಳ ಸಬ್ ಇನ್ ಸ್ಪೆಕ್ಟರ್ ಸಮರ್ಥ ಆರ್. ಗಾಣಿಗೇರ ನೇರವಾಗಿ ಎಸ್ಐಟಿ ಕಚೇರಿಗೆ ತೆರಳಿ ಮಟ್ಟಣ್ಣವರ್ ರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ನೋಟಿಸ್ ಸ್ವೀಕರಿಸಿದ ಒಂದು ವಾರದೊಳಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.






