ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆಗೆ ಬೇಡಿಕೆ: ಐವನ್ ಡಿಸೋಜಾ

ಮಂಗಳೂರು, ಜು.5: ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ಈಗಾಗಲೇ ಚಾಮರಾಜನಗರ, ನಂದಿಹಿಲ್ಸ್, ಕಲಬುರ್ಗಿಯಲ್ಲಿ ಈಗಾಗಲೇ ಸಚಿವ ಸಂಪುಟ ಸಭೆ ನಡೆದಿದ್ದು, ವಿಜಯಪುರದಲ್ಲಿ ಮುಂದಿನ ಸಚಿವ ಸಂಪುಟ ಸಭೆ ನಡೆಯಲಿದೆ. ಬಳಿಕ ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಪೂರಕವಾಗಿ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಲು ರಾಜ್ಯ ಸರಕಾರಕ್ಕೆ ಬೇಡಿಕೆ ಸಲ್ಲಿಸುವುದಾಗಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದ್ದಾರೆ.
ಮನಪಾ ಕಟ್ಟಡದಲ್ಲಿರುವ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತಾಡಿದ ಅವರು, ಉತ್ತರ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳ ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆಯುವ ನಿಟ್ಟಿನಲ್ಲಿ ಈ ಭಾಗದಲ್ಲಿ ಸಂಪುಟ ಸಭೆ ನಡೆದರೆ ಅನುಕೂಲವಾಗಲಿದೆ ಎಂದವರು ಹೇಳಿದರು.
ದ.ಕ. ಜಿಲ್ಲೆ ಸೇರಿದಂತೆ ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಬಗ್ಗೆ ಈಗಾಗಲೇ ರಾಜ್ಯ ಮಟ್ಟದಲ್ಲಿ ಸಭೆ ನಡೆದಿದೆ. ಜಿಲ್ಲೆಗಳಲ್ಲಿ ಇನ್ನೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿ ದೊಡ್ಡ ಯೋಜನೆ ಘೋಷಣೆಯಾಗಿಲ್ಲ. ಮೀನುಗಾರಿಕೆಗೆ ಪೂರಕವಾಗಿ ಕರಾವಳಿಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಇದೇ ವೇಳೆ ದ.ಕ. ಜಿಲ್ಲೆಯನ್ನು ಮಂಗಳೂರು ಜಿಲ್ಲೆಯನ್ನಾಗಿ ನಾಮಕರಣಗೊಳಿಸುವ ಬಗ್ಗೆ ಚರ್ಚೆ ನಡೆದಿದೆ. ಮಂಗಳೂರು ಹೆಸರು ಅಂತಾರಾಷ್ಟ್ರೀಯವಾಗಿ ಮನ್ನಣೆ ಪಡೆದಿದೆ. ಈಗಾಗಲೇ ಹಲವು ಜಿಲ್ಲೆಗಳ ಮರು ನಾಮಕರಣ ನಡೆದಿದೆ. ಈ ಜಿಲ್ಲೆಗೂ ಹೊಸ ಹೆಸರು ನೀಡುವ ಬಗ್ಗೆ ಸಚಿವ ಸಂಪುಟದ ಸಭೆ ಕರೆಯಬೇಕು ಎಂದು ಅವರು ಆಗ್ರಹಿಸಿದರು.
1980ರಲ್ಲಿ ಆರಂಭಗೊಂಡಿರುವ ಮಂಗಳೂರು ವಿಶ್ವವಿದ್ಯಾನಿಲಯದ ಅಭಿವೃದ್ದಿಯ ನಿಟ್ಟಿನಲ್ಲಿ ವಿಶೇಷ ಪ್ಯಾಕೇಜ್‌ನ ಅಗತ್ಯವಿದೆ. ಮಂಗಳೂರು ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ದರ್ಜೆಯಾಗಿ ಹೆಸರಿಸಲ್ಪಟ್ಟಿದ್ದರೂ ಇನ್ನೂ ಆ ಘೋಷಣೆಗೆ ಪೂರಕವಾಗಿ ಬೆಳೆದಿಲ್ಲ. ಟೇಬಲ್ ಟಾಪ್ ಎಂಬ ಕಾರಣದೊಂದಿಗೆ ಈ ವಿಮಾನ ನಿಲ್ದಾಣ ವಿಸ್ತರಣೆಗೆ 30000 ಕೋಟಿ ರೂ.ಗಳ ಅಗತ್ಯವಿದೆ. ಶಿಕ್ಷಣದ ಕಾಶಿಯಾಗಿ ಗುರುತಿಸಿಕೊಂಡಿರುವ ಉಡುಪಿ ದ.ಕ. ಅವಿಭಜಿತ ಜಿಲೆಗಳಿಗೆ ಪೂರಕವಾದ ಅಭಿವೃದ್ಧಿ ಆಗಬೇಕಾಗಿದೆ. ಈ ಎಲ್ಲಾ ವಿಷಯಗಳ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸಚಿವ ಸಂಪುಟದ ಸಭೆ ನಡೆದರೆ ಕರಾವಳಿಯ ಅಭಿವೃದ್ದಿಗೆ ಪೂರಕವಾದ ಚರ್ಚೆಗಳಿಗೆ ಅವಕಾಶ ದೊರೆಯಲಿದೆ ಎಂದು ಅವರು ಹೇಳಿದರು.
ಮರಳು ಮತ್ತು ಕೆಂಪು ಕಲ್ಲಿನ ಸಮಸ್ಯೆ ಕುರಿತಂತೆ ಬೆಂಗಳೂರಿನಲ್ಲಿ ಇಂದು ಉನ್ನತ ಮಟ್ಟದ ಸಭೆ ನಡೆಯುತ್ತಿದ್ದು, ಇದನ್ನು ಕಾನೂನುಬದ್ಧವಾಗಿ ಸರಳೀಕರಣಗೊಳಿಸುವ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಉಸ್ತುವಾರಿ ಸಚಿವರನ್ನು ಆಗ್ರಹಿಸಲಾಗಿದೆ. ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ಸುಲಭವಾಗಿ ಹಾಗೂ ಕಾನೂನುಬದ್ಧವಾಗಿ ಸಿಗುವಂತಾಗಬೇಕು. ಕೆಂಪು ಕಲ್ಲಿನ ರಾಜಧನವನ್ನೂ ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ಕ್ರಮ ಆಗಬೇಕು ಎಂದು ಅವರು ಹೇಳಿದರು.
ತೋಡುಗಳು, ರಾಜಕಾಲುವೆಗಳ ಚರಳನ್ನು ತೆಗೆದು ಅದನ್ನು ರಸ್ತೆಗಳಿಗೆ ಬಳಸುವ ನಿಟ್ಟಿನಲ್ಲಿ ಕೆಡಿಪಿ ಸಭೆಯಲ್ಲಿ ಶಾಸಕ ಹರೀಶ್‌ಪೂಂಜಾ ಅವರು ಪ್ರಸ್ತಾವಿಸಿದ್ದರು. ಈ ಕ್ರಮದಿಂದ ನೆರೆ ಹಾವಳಿ ಕಡಿಮೆ ಆಗುವುದರಿಂದ ಗ್ರಾಮ ಪಂಚಾಯತ್ ಪಿಡಿಒಗಳ ಮೇಲುಸ್ತುವಾರಿಯಲ್ಲಿ ಅದಕ್ಕೆ ಅವಕಾಶ ನೀಡುವ ಕಾರ್ಯ ಆಗಬೇಕು. ಒಟ್ಟಾರೆಯಾಗಿ ಮರಳುಗಾರಿಕೆ ಸಂಬಂಧಿಸಿ ಕರಾವಳಿಗೆ ಪ್ರತ್ಯೇಕ ನೀತಿಯ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಅವರು ಹೇಳಿದರು.
ಇ ಆಟೋರಿಕ್ಷಾಗಳಿಗೂ ಉಚಿತ ಪರವಾನಿಗೆ ಪಡೆದು ಇಲ್ಲಿನ ಇತರ ಆಟೋರಿಕ್ಷಾಗಳ ವ್ಯವಸ್ಥೆಯಂತೆ ಬಾಡಿಗೆಗೆ ಅವಕಾಶ ನೀಡಿ ಆದೇಶ ನೀಡಿರುವ ಸರಕಾರದ ಕ್ರಮ ಸ್ವಾಗತಾರ್ಹ. ಈ ಬಗ್ಗೆ ಸೂಕ್ತ ಕಾನೂನು ರೂಪಿಸಲು ಹೋರಾಟ ಮಾಡಿದ್ದಲ್ಲದೆ, ವಿಧಾನ ಪರಿಷತ್‌ನಲ್ಲೂ ಪ್ರಶ್ನಿಸಿದ್ದೆ. ಅದಕ್ಕೆ ಸಾರಿಗೆ ಸಚಿವರು ಭರವಸೆ ನೀಡಿದ್ದರು. ಇದು ವಿಳಂಬ ಆದಾಗ ಸರಕಾರ ಭರವಸೆ ಸಮಿತಿಯಲ್ಲಿಯೂ ಈ ಬಗ್ಗೆ ಪ್ರಶ್ನಿಸಿದ್ದು, ಇದೀಗ ಆದೇಶವಾಗಿದೆ. ಇದರಿಂದ ನಗರದಲ್ಲಿ ಸುಮಾರು 1000ಕ್ಕೂ ಅಧಿಕ ಆಟೋರಿಕ್ಷಾಗಳ ಸಂಚಾರಕ್ಕೆ ಕಡಿವಾಣ ಬಿದ್ದು, ಒತ್ತಡ ಕಡಿಮೆಯಾಗಲಿದೆ. ಪರವಾನಿಗೆ ನೀಡಲಾಗುವ ಪ್ರದೇಶದಲ್ಲಿಯೇ ಬಾಡಿಗೆಗೆ ಅವಕಾಶ ಸಿಗುವುದರಿಂದ ಇತರ ಆಟೋರಿಕ್ಷಾಗಳವರ ಸಮಸ್ಯೆ ಬಗೆಹರಿಯಲಿದೆ ಎಂದು ಐವನ್ ಡಿಸೋಜಾ ಹೇಳಿದರು.
ಗೋಷ್ಟಿಯಲ್ಲಿ ಭಾಸ್ಕರ್, ನಾಗೇಂದ್ರ ಕುಮಾರ್, ಕೇಶವ ಮರೋಳಿ, ಸತೀಶ್ ಪೆಂಗಲ್, ಪ್ರೇಮ್ ಬಳ್ಳಾಲ್‌ಬಾಗ್, ಜೇಮ್ಸ್, ವಸಂತ ಶೆಟ್ಟಿ, ಮೀನಾ ಟೆಲ್ಲಿಸ್ ಮೊದಲಾದವರು ಉಪಸ್ಥಿತರಿದ್ದರು.
ಅಕ್ರಮ ಮರಳುಗಾರಿಕೆ ಸೇರಿ ಅಕ್ರಮ ಚಟುವಟಿಕೆಗಳಿಗೆ ಜಿಲ್ಲೆಯ ಈಗಿನ ಅಧಿಕಾರಿಗಳ ಮೂಲಕ ಕಟ್ಟುನಿಟ್ಟಿನ ಕ್ರಮ ಆಗಿದೆ. ಇದು ಉತ್ತಮ ವಿಚಾರ ಮರಳು ಮತ್ತು ಕೆಂಪು ಕಲ್ಲಿನ ಸಮಸ್ಯೆಗೆ ಸಂಬಂಧಿಸಿ ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಅವರ ಹೇಳಿಕೆ ನೋಡಿದೆ. ಒಂದು ಕಲ್ಲೂ ಸಿಗುವುದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಬಿಜೆಪಿ ಈ ಸಮಸ್ಯೆಯಿಂದ ಪ್ರಯೋಜನ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಹಾಗಿದ್ದರೆ, ಬಿಜೆಪಿ ಅವಧಿಯಲ್ಲಿ ಎಲ್ಲ ಕಾನೂನುಬಾಹಿರ ಆಗಲು ಅವಕಾಶ ನೀಡಿದ್ದು ಯಾಕೆ ಎಂದು ಐವನ್ ಡಿಸೋಜಾ ಪ್ರಶ್ನಿಸಿದರು.