ಮುಲ್ಕಿ ಸುಂದರ ರಾಮ್ ಶೆಟ್ಟಿ ಸ್ಮಾರಕ ಮರುಸ್ಥಾಪನೆಗೆ ಒತ್ತಾಯ

ಮಂಗಳೂರು, ಜೂ.13: ಮುಲ್ಕಿಯ ಬಪ್ಪನಾಡು ದೇವಸ್ಥಾನದ ಪ್ರವೇಶದ್ವಾರದ ಪಕ್ಕದಲ್ಲಿದ್ದ ಸುಂದರರಾಮ್ ಶೆಟ್ಟಿಯವರ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಅಗಲೀಕರಣದ ಹೆಸರಿನಲ್ಲಿ ಯಾವುದೇ ಪರ್ಯಾಯ ವ್ಯವಸ್ಥೆ ಅಥವಾ ಸ್ಥಳಾಂತರ ಮಾಡದೆ ಕೆಡವಿ ಹಾಕಿರುವುದು ಖಂಡನೀಯ. ಅವರ ನೆನಪನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು ಎಂದು ಮುಲ್ಕಿ ಸುಂದರರಾಮ್ ಶೆಟ್ಟಿ ಅವರ ಅಭಿಮಾನಿ ಬಳಗ ಆಗ್ರಹಿಸಿದೆ.
ಶನಿವಾರ ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಭಿಮಾನಿ ಬಳಗದ ಪರ ವಕೀಲರಾದ ದಿನೇಶ್ ಹೆಗ್ಡೆ ಉಳೆಪಾಡಿ, ಸಮಾಧಿ ಕೆಡವುವ ವೇಳೆ ಸುಂದರರಾಮ್ ಶೆಟ್ಟಿ ಅವರ ಕುಟುಂಬ ಸದಸ್ಯರು, ಅಭಿಮಾನಿಗಳು, ಸ್ಥಳೀಯರೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ. ಇದು ಮತ್ತಷ್ಟು ನೋವುಂಟು ಮಾಡುವ ಸಂಗತಿಯಾಗಿದೆ. ಸುಂದರ್ ರಾಮ್ ಶೆಟ್ಟಿಯವರು ಒಬ್ಬ ಬ್ಯಾಂಕರ್ ಮಾತ್ರವಲ್ಲದೆ, ಕರಾವಳಿ ಕರ್ನಾಟಕದ ಸಾವಿರಾರು ಕುಟುಂಬಗಳ ಬದುಕನ್ನು ರೂಪಿಸಿದ ಸಮಾಜ ನಿರ್ಮಾತೃ, ಶಿಕ್ಷಣ ಪ್ರೇಮಿ ಹಾಗೂ ಉದ್ಯೋಗದಾತರಾಗಿದ್ದರು. ಆದ್ದರಿಂದ ಅವರ ಸ್ಮಾರಕ ಸಂರಕ್ಷಿಸುವುದು ಸರಕಾರದ ನೈತಿಕ ಜವಾಬ್ದಾರಿಯಾಗಿದೆ ಎಂದರು.
ಸರಕಾರ ಮುಲ್ಕಿ ಅಥವಾ ಬಪ್ಪನಾಡು ವ್ಯಾಪ್ತಿಯ ಸೂಕ್ತ ಸ್ಥಳದಲ್ಲಿ ಕನಿಷ್ಠ ಒಂದು ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಂಡು ಒಂದು ಭಾಗದಲ್ಲಿ ಅವರ ಸಮಾಧಿಯನ್ನು ಮರುಸ್ಥಾಪಿಸಬೇಕು. ಇನ್ನೊಂದು ಕಡೆಯಲ್ಲಿ ಬ್ಯಾಂಕಿಂಗ್ ಪ್ರವೇಶ ಪರೀಕ್ಷೆ ಮತ್ತು ಸರಕಾರದ ಉನ್ನತ ಹುದ್ದೆಗಳಾದ ಐಎಎಸ್, ಕೆಎಎಸ್, ಐಪಿಎಸ್ ಹಾಗೂ ನ್ಯಾಯಾಂಗ ಸೇವೆಗಳ ಪರೀಕ್ಷೆಗಳಿಗೆ ತಯಾರಾಗುವ ಯುವಕರಿಗೆ ತರಬೇತಿ ಕೇಂದ್ರ ಸ್ಥಾಪಿಸಬೇಕು. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಲಾಗಿದೆ. ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸುಂದರರಾಮ್ ಶೆಟ್ಟಿ ಅಭಿಮಾನಿ ಬಳಗದ ನವೀನ್ ರೈ, ಬಾಲಕೃಷ್ಣ ರೈ ಹಾಗೂ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.






