ಧರ್ಮಸ್ಥಳ ಪ್ರಕರಣ: ಪಾಯಿಂಟ್ 13ರಲ್ಲಿ ಜಿಪಿಆರ್ ಕಾರ್ಯಾಚರಣೆಗೆ ಕ್ಷಣಗಣನೆ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಅನಾಮಿಕ ಸಾಕ್ಷಿದಾರ ಗುರುತಿಸಿರುವ ಜಾಗಗಳ ಪೈಕಿ ಪಾಯಿಂಟ್ ನಂಬರ್ 13ರಲ್ಲಿ ಜಿಪಿಆರ್ (ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್) ಬಳಸಿ ಶೋಧ ಕಾರ್ಯಾಚರಣೆ ಇಂದು ಕೆಲವೇ ಹೊತ್ತಿನಲ್ಲಿ ಆರಂಭವಾಗಲಿದೆ.
ಸೋಮವಾರವೇ ಎಸ್ಐಟಿ ಅಧಿಕಾರಿಗಳು ಜಿಪಿಆರ್ ತರಿಸಿದ್ದು, ಕ್ಲಿಷ್ಟಕರವಾದ 13ನೇ ಸ್ಥಳದಲ್ಲಿ ಕಾರ್ಯಾಚರಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಕೆಲವೇ ಹೊತ್ತಿನಲ್ಲಿ ಅಧಿಕೃತವಾಗಿ ಪರಿಶೀಲನಾ ಕಾರ್ಯ ನಡೆಯಲಿದೆ.
ನೇತ್ರಾವತಿ-ಅಜೆಕುರಿ ರಸ್ತೆಯಲ್ಲಿ ನೇತ್ರಾವತಿ ನದಿ ಪಕ್ಕದ ಕಿಂಡಿ ಅಣೆಕಟ್ಟಿನ ಸಮೀಪದ 13ನೇ ಸ್ಥಳದಲ್ಲಿ ಸೋಮವಾರ ಅಪರಾಹ್ನ 3ರಿಂದ 3:30ರ ವರೆಗೆ ಡ್ರೋನ್ ಆಧಾರಿತ ಜಿಪಿಆರ್ ಪ್ರಾಯೋಗಿಕ ಕಾರ್ಯಾಚರಣೆ ನಡೆಯಿತು. ಬಳಿಕ ಪೌರ ಕಾರ್ಮಿಕರು ಸುಮಾರು 60 ಅಡಿ ಉದ್ದ, 30 ಅಗಲದ ಈ ಜಾಗದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿದ್ದರು.
ಇಂದು ಸ್ಥಳದಲ್ಲಿ ಎಸ್.ಐ.ಟಿ ತಂಡದ ನೇತೃತ್ವದಲ್ಲಿ ಜಿಪಿಆರ್ ಮೂಲಕ ಪರಿಶೀಲನೆ ನಡೆಯಲಿದೆ.
ಸ್ಥಳದಲ್ಲಿ ಬಿಗು ಬಂದೋಬಸ್ತ್
ಕಾರ್ಯಾಚರಣೆ ನಡೆಯಲಿರುವ ನೇತ್ರಾವತಿ ಅಜಿಕುರಿ ರಸ್ತೆಯನ್ನು ಸಂಪೂರ್ಣ ಮುಚ್ಚಲಾಗಿದೆ. ರಸ್ತೆಯ ಎರಡೂ ಬದಿಯಲ್ಲಿ ಸಾಕಷ್ಟು ಪೊಲೀಸರನ್ನು ನಿಯೋಜಿಸಲಾಗಿದೆ. ಸ್ಥಳದಲ್ಲಿಯೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.







