ಧರ್ಮಸ್ಥಳ ಪ್ರಕರಣ | ಬೆಳ್ತಂಗಡಿ ಠಾಣೆಯಲ್ಲಿ 1,480 ಅಸ್ವಾಭಾವಿಕ ಸಾವು ಪ್ರಕರಣ; ವಿವಿಧ ಮೂಲಗಳ ದಾಖಲೆಗಳಲ್ಲಿ 1,510 ಪ್ರಕರಣ : SIT ಮಾಹಿತಿ
► 30 ಪ್ರಕರಣಗಳ ವ್ಯತ್ಯಾಸ ಪರಿಶೀಲಿಸುತ್ತಿರುವ ವಿಶೇಷ ತನಿಖಾ ತಂಡ ► ಮಹಿಳೆಯರು, ಯುವತಿಯರ ನಾಪತ್ತೆ, ಕೊಲೆ ಹಾಗೂ ಅಸಹಜ ಸಾವುಗಳ ತನಿಖಾ ಪ್ರಗತಿ ನೀಡುವಂತೆ ಪತ್ರ ಬರೆದಿದ್ದ ಮಹಿಳಾ ಆಯೋಗ

ಸಾಂದರ್ಭಿಕ ಚಿತ್ರ (AI)
ಬೆಂಗಳೂರು, ಸೆ.30: ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಸಂಗ್ರಹಿಸಿರುವ ದಾಖಲೆಗಳ ಪ್ರಕಾರ, 1998ರಿಂದ 2014ರವರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 1,480 UDR (ಅಸ್ವಾಭಾವಿಕ ಸಾವು) ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ ಪೊಲೀಸ್ ಠಾಣೆ, ರಾಜ್ಯ ಅಪರಾಧ ದಾಖಲೆಗಳ ಬ್ಯೂರೊ, ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಮೂಲಗಳಿಂದ ಸಂಗ್ರಹಿಸಿದ ದಾಖಲೆಗಳಲ್ಲಿ 1,510 UDR ಪ್ರಕರಣಗಳ ಮಾಹಿತಿ ಲಭ್ಯವಾಗಿದೆ. ಎರಡು ದಾಖಲೆಗಳ ನಡುವಿನ 30 ಪ್ರಕರಣಗಳ ವ್ಯತ್ಯಾಸವನ್ನು SIT ಪರಿಶೀಲಿಸುತ್ತಿದೆ.
ಈ ವಿವರಗಳು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಧರ್ಮಸ್ಥಳ ಪ್ರಕರಣದ SIT ಮುಖ್ಯಸ್ಥ ಡಾ. ಪ್ರಣವ್ ಮಹಾಂತಿ ಅವರು 2026ರ ಮಾರ್ಚ್ 24ರಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಿದ ಸಮಗ್ರ ವರದಿಯಲ್ಲಿವೆ.
ಧರ್ಮಸ್ಥಳ ಪೊಲೀಸ್ ಠಾಣೆಯ ಮೊ.ಸಂ.39/2025, BNS ಕಲಂ 211(ಎ) ಪ್ರಕರಣದ ಸಮಗ್ರ ತನಿಖೆಗಾಗಿ ಸರ್ಕಾರವು 2025ರ ಜುಲೈ 19ರಂದು SIT ರಚಿಸಿತ್ತು. ಧರ್ಮಸ್ಥಳ ಮತ್ತು ಉಜಿರೆ ಗ್ರಾಮಗಳಲ್ಲಿ 1998ರಿಂದ 2014ರವರೆಗೆ ನಡೆದ ಅಸ್ವಾಭಾವಿಕ ಸಾವುಗಳು, ಮಹಿಳೆಯರು ಮತ್ತು ಯುವತಿಯರ ನಾಪತ್ತೆ, ಅತ್ಯಾಚಾರ, ಕೊಲೆ ಹಾಗೂ ಅನುಮಾನಾಸ್ಪದ ಸಾವುಗಳು ಸೇರಿದಂತೆ ವಿವಿಧ ಪ್ರಕರಣಗಳ ಕುರಿತು SIT ತನಿಖೆ ನಡೆಸುತ್ತಿದೆ.
ಮಹಿಳಾ ಆಯೋಗದ ಪತ್ರ
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು 2026ರ ಆಗಸ್ಟ್ 6ರಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ‘ನೆನಪೋಲೆ’ ಕಳುಹಿಸಿ, ಧರ್ಮಸ್ಥಳ ಠಾಣೆಯ ಮೊ.ಸಂ.39/2025ಕ್ಕೆ ಸಂಬಂಧಿಸಿದಂತೆ SIT ಕೈಗೊಂಡಿರುವ ತನಿಖಾ ಪ್ರಗತಿಯ ಸಮಗ್ರ ವರದಿಯನ್ನು ಆಯೋಗಕ್ಕೆ ಒದಗಿಸುವಂತೆ ಸೂಕ್ತ ನಿರ್ದೇಶನ ನೀಡಲು ಕೋರಿದ್ದರು.
ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯರು ಮತ್ತು ಯುವತಿಯರ ಮೇಲಿನ ಗಂಭೀರ ದೌರ್ಜನ್ಯ, ಅತ್ಯಾಚಾರ, ಕೊಲೆ, ಅಸಹಜ ಸಾವು ಹಾಗೂ ನಾಪತ್ತೆ ಪ್ರಕರಣಗಳ ಸಮಗ್ರ ತನಿಖೆಗಾಗಿ SIT ರಚಿಸಲಾಗಿದ್ದು, ಈ ಪ್ರಕರಣಗಳ ತನಿಖೆಯ ಪ್ರಗತಿಯನ್ನು ಮಹಿಳೆಯರ ಸುರಕ್ಷತೆ ಮತ್ತು ನ್ಯಾಯದ ದೃಷ್ಟಿಯಿಂದ ಪರಿಶೀಲಿಸುವುದು ಆಯೋಗಕ್ಕೆ ಅತ್ಯಂತ ಅಗತ್ಯ ಎಂದು ಪತ್ರದಲ್ಲಿ ತಿಳಿಸಲಾಗಿತ್ತು.
ಆಯೋಗವು ಇದಕ್ಕೂ ಮೊದಲು 2026ರ ಜನವರಿ 12ರಂದು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ತನಿಖಾ ಪ್ರಗತಿ ವರದಿ ನೀಡುವಂತೆ ಕೋರಿತ್ತು. ಆದರೆ ಆಗಸ್ಟ್ 6ರವರೆಗೆ SITಯಿಂದ ಯಾವುದೇ ತನಿಖಾ ಪ್ರಗತಿ ವರದಿ ಆಯೋಗಕ್ಕೆ ಸ್ವೀಕೃತವಾಗಿರಲಿಲ್ಲ ಎಂದು ತಿಳಿಸಿತ್ತು.
ಧರ್ಮಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದ ಮಹಿಳೆಯರು ಹಾಗೂ ಯುವತಿಯರ ನಾಪತ್ತೆ, ಕೊಲೆ ಮತ್ತು ಅಸಹಜ ಸಾವುಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ SIT ನಡೆಸಿರುವ ಸಮಗ್ರ ತನಿಖಾ ವರದಿಯನ್ನು ತುರ್ತಾಗಿ ಆಯೋಗಕ್ಕೆ ಸಲ್ಲಿಸುವಂತೆ SIT ಮುಖ್ಯಸ್ಥರಿಗೆ ನಿರ್ದೇಶನ ನೀಡಬೇಕು ಎಂದು ಆಯೋಗ ಕೋರಿತ್ತು.
‘ಮಾರ್ಚ್ನಲ್ಲೇ ವರದಿ ಸಲ್ಲಿಕೆ’
ಮಹಿಳಾ ಆಯೋಗದ ಪತ್ರಕ್ಕೆ ಪ್ರತಿಯಾಗಿ 2026ರ ಆಗಸ್ಟ್ 31ರಂದು ಪೊಲೀಸ್ ಮಹಾನಿರ್ದೇಶಕ, CID ಮತ್ತು SIT ಮುಖ್ಯಸ್ಥ ಡಾ. ಪ್ರಣವ್ ಮಹಾಂತಿ ಅವರು ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
ಧರ್ಮಸ್ಥಳ ಠಾಣೆಯ ಮೊ.ಸಂ.39/2025ರ ಪ್ರಕರಣಕ್ಕೆ ಸಂಬಂಧಿಸಿದಂತೆ SIT ಇದುವರೆಗೆ ನಡೆಸಿರುವ ವಿಚಾರಣೆ ಮತ್ತು ತನಿಖಾ ಪ್ರಗತಿಯ ಸಮಗ್ರ ವರದಿಯನ್ನು 2026ರ ಮಾರ್ಚ್ 24ರಂದೇ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಾರ್ಚ್ 24ರಂದು ಸಲ್ಲಿಸಿದ ವರದಿಯ ಪ್ರತಿಯನ್ನು ಮುಚ್ಚಿದ ಲಕೋಟೆಯಲ್ಲಿ ಲಗತ್ತಿಸಲಾಗಿದೆ ಎಂದು ಆಗಸ್ಟ್ 31ರ ಪತ್ರದಲ್ಲಿ ತಿಳಿಸಲಾಗಿದೆ.
SIT ತನಿಖೆ ಕೇವಲ ಪ್ರಕರಣದ ದೂರುದಾರ ಹಾಗೂ ಪ್ರಸ್ತುತ ಆರೋಪಿ ‘ಚಿನ್ನಯ್ಯ’ ನೀಡಿದ ಹೇಳಿಕೆಗೆ ಸೀಮಿತವಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ಶೋಧ ನಡೆಸಿದಾಗ 7 ತಲೆಬುರುಡೆಗಳು ಹಾಗೂ ಮಾನವ ಅಸ್ಥಿಪಂಜರಗಳು ಪತ್ತೆಯಾಗಿವೆ. ಅವು ಪುರುಷರದ್ದೋ ಅಥವಾ ಮಹಿಳೆಯರದ್ದೋ, ಸಾವಿನ ಕಾರಣವೇನು ಎಂಬ ಬಗ್ಗೆ ತಜ್ಞರ ಅಭಿಪ್ರಾಯ ಪಡೆಯಲು ಕಳುಹಿಸಲಾಗಿದೆ. ಅವುಗಳ ಗುರುತು ಪತ್ತೆಹಚ್ಚಲು ಲಭ್ಯ ಸಾಕ್ಷ್ಯಾಧಾರಗಳ ಆಧಾರದಲ್ಲಿ ರಕ್ತ ಸಂಬಂಧಿಕರನ್ನು ಪತ್ತೆ ಮಾಡಿ ತನಿಖೆ ನಡೆಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಹಳೆಯ ಪ್ರಕರಣಗಳ ಪರಿಶೀಲನೆ
2002ರ UDR ಸಂಖ್ಯೆ 37/2002: ಅಸ್ವಾಭಾವಿಕ ಸಾವು ಸಂಭವಿಸಿದ ಸ್ಥಳವು ಅರ್ಜಿದಾರರು ಉಲ್ಲೇಖಿಸಿದ್ದ ಬೋಳಿಯಾರು ಕುದ್ರಯಾ ಅರಣ್ಯ ಪ್ರದೇಶವೇ ಎಂದು SIT ಪರಿಶೀಲನೆಯಲ್ಲಿ ತಿಳಿದುಬಂದಿದೆ. ಅಲ್ಲಿ ಅಪರಿಚಿತ ಯುವತಿಯ ಶವ ಪತ್ತೆಯಾಗಿದ್ದು, UDR ಪ್ರಕರಣ ದಾಖಲಾಗಿತ್ತು. ಅರ್ಜಿದಾರರು ಮತ್ತು ಸಂಬಂಧಿತ ಸಾಕ್ಷಿದಾರರನ್ನು ವಿಚಾರಿಸಲಾಗಿದೆ.
2009ರ ಅಪರಿಚಿತ ಮಹಿಳೆಯ ಕೊಲೆ: ಧರ್ಮಸ್ಥಳ ಠಾಣೆಯ ಮೊ.ಸಂ.39/2025ರ ಫಿರ್ಯಾದಿಯು, ಈಗಿನ ಧರ್ಮಸ್ಥಳ ಪೊಲೀಸ್ ಠಾಣೆಯ ಸಮೀಪ ರಸ್ತೆ ಬದಿಯಲ್ಲಿ ಮುಖಕ್ಕೆ ಆಸಿಡ್ ಹಾಕಿ ಕೊಲೆಯಾದ ಮಹಿಳೆಯ ಶವವನ್ನು ತಾನು ಹೂತು ಹಾಕಿರುವುದಾಗಿ ಹೇಳಿದ್ದ.
ಈ ಕುರಿತು 2009ರ ಸೆಪ್ಟೆಂಬರ್ 18ರಂದು ಕೆ.ಬಿ. ವೀರಪ್ಪ ಮಲೆಕುಡಿಯ ದೂರು ನೀಡಿದ್ದರು. ಅದರ ಆಧಾರದಲ್ಲಿ ಬೆಳ್ತಂಗಡಿ ಠಾಣೆಯಲ್ಲಿ ಅಪರಾಧ ಸಂಖ್ಯೆ 206/2009, IPC ಕಲಂ 302 ಮತ್ತು 201ರಡಿ ಪ್ರಕರಣ ದಾಖಲಾಗಿತ್ತು.
ಮೃತರ ವಾರಸುದಾರರು ಪತ್ತೆಯಾಗದ ಹಿನ್ನೆಲೆಯಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಕೋರಿಕೆಯಂತೆ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಅಪರಿಚಿತ ಶವಗಳ ದಫನ ಗುತ್ತಿಗೆದಾರ ಮಾಕ್ಸಿಂ ಡಿಸಿಲ್ವಾ ಅವರಿಗೆ ಶವ ದಫನ ಮಾಡುವಂತೆ ಆದೇಶಿಸಿದ್ದರು. ಅದರಂತೆ 2009ರ ಸೆಪ್ಟೆಂಬರ್ 30ರಂದು ಅಪರಿಚಿತ ಮಹಿಳೆಯ ಶವವನ್ನು ಮಂಗಳೂರು ನಂದಿಗುಡ್ಡೆ ಸ್ಮಶಾನದಲ್ಲಿ ದಫನ ಮಾಡಲಾಗಿತ್ತು.
2010ರ ಶರಾವತಿ ವಸತಿಗೃಹದಲ್ಲಿ ಕೊಲೆ: ಎಪ್ರಿಲ್ 4ರ ಬೆಳಿಗ್ಗೆ 6.50ರಿಂದ ಎಪ್ರಿಲ್ 6ರ ಬೆಳಿಗ್ಗೆ 6.30ರ ನಡುವೆ, ಧರ್ಮಸ್ಥಳದ ಶರಾವತಿ ವಸತಿಗೃಹದ ಕೊಠಡಿ ಸಂಖ್ಯೆ 246ರಲ್ಲಿ ದಾಖಲೆಗಳಲ್ಲಿ ನರಸಿಂಹರಾಜು ಎಂದು ಹೆಸರು ನೀಡಿರುವ ಅಪರಿಚಿತ ವ್ಯಕ್ತಿಯೊಬ್ಬರು ಮಹಿಳೆಯ ಬಾಯಿಗೆ ಬಟ್ಟೆ ತುರುಕಿ, ಕುತ್ತಿಗೆ ಒತ್ತಿ ಕೊಲೆ ಮಾಡಿದ್ದಾನೆ ಎಂದು ಸುರೇಂದ್ರ ಬಳ್ಳಾಲ್ ಅವರು ಎಪ್ರಿಲ್ 6ರಂದು ಬೆಳಿಗ್ಗೆ 10.45ಕ್ಕೆ ದೂರು ನೀಡಿದ್ದರು.
ಈ ದೂರಿನ ಆಧಾರದಲ್ಲಿ ಅಪರಾಧ ಸಂಖ್ಯೆ 83/2010, IPC ಕಲಂ 302 ಮತ್ತು 201ರಡಿ ಪ್ರಕರಣ ದಾಖಲಾಗಿತ್ತು. ಶವ ಪರೀಕ್ಷೆ ನಡೆಸಲಾಗಿದೆ ಎಂದು ಠಾಣಾ ದಾಖಲೆಗಳಲ್ಲಿ ನಮೂದಿಸಿದ್ದರೂ ಶವ ಪರೀಕ್ಷೆಯ ವರದಿ ಲಭ್ಯವಿಲ್ಲ. ಅಗತ್ಯ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
2003ರ ನೇತ್ರಾವತಿ ಪ್ರಕರಣ: 2003ರ ಸೆಪ್ಟೆಂಬರ್ 2ರಂದು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಕಿಂಡಿ ಅಣೆಕಟ್ಟಿನ ಬಳಿ ನದಿಯಲ್ಲಿ ಸುಮಾರು 35ರಿಂದ 45 ವರ್ಷದ ಅಪರಿಚಿತ ವ್ಯಕ್ತಿ ಹಾಗೂ 10ರಿಂದ 12 ವರ್ಷದ ಅಪ್ರಾಪ್ತ ಬಾಲಕಿಯ ಶವ ಪತ್ತೆಯಾಗಿತ್ತು.
ಈ ಕುರಿತು ಬೆಳ್ತಂಗಡಿ ಠಾಣೆಯಲ್ಲಿ UDR ಸಂಖ್ಯೆ 69/2003, CrPC ಕಲಂ 174ರಡಿ ನದಿ ನೀರಿನಲ್ಲಿ ಮುಳುಗಿ ಆಕಸ್ಮಿಕವಾಗಿ ಮೃತಪಟ್ಟಿರುವುದಾಗಿ ಪ್ರಕರಣ ದಾಖಲಾಗಿತ್ತು. ಮೃತದೇಹಗಳನ್ನು ದಫನ ಮಾಡಿರುವ ಬಗ್ಗೆ ಠಾಣಾ ದಾಖಲೆಗಳಲ್ಲಿ ಉಲ್ಲೇಖವಿದೆ.
ಆದರೆ ಠಾಣೆಯ UDR ನೋಂದಣಿಯ ದಫನ ವಿವರಗಳು ಮತ್ತು ಗ್ರಾಮ ಪಂಚಾಯಿತಿಯ ದಫನ ದಾಖಲೆಯ ಅಂಕಿ-ಅಂಶಗಳ ನಡುವೆ ವ್ಯತ್ಯಾಸ ಕಂಡುಬಂದಿದ್ದು, ಪರಿಶೀಲನೆ ನಡೆಯುತ್ತಿದೆ.
ವರ್ಷವಾರು UDR
ಬೆಳ್ತಂಗಡಿ ಠಾಣೆಯ ದಾಖಲೆಗಳ ಪ್ರಕಾರ 1998ರಲ್ಲಿ 75, 1999ರಲ್ಲಿ 78, 2000ರಲ್ಲಿ 81, 2001ರಲ್ಲಿ 90, 2002ರಲ್ಲಿ 101, 2003ರಲ್ಲಿ 95, 2004ರಲ್ಲಿ 88, 2005ರಲ್ಲಿ 69, 2006ರಲ್ಲಿ 89, 2007ರಲ್ಲಿ 95, 2008ರಲ್ಲಿ 82, 2009ರಲ್ಲಿ 96, 2010ರಲ್ಲಿ 89, 2011ರಲ್ಲಿ 70, 2012ರಲ್ಲಿ 92, 2013ರಲ್ಲಿ 80 ಮತ್ತು 2014ರಲ್ಲಿ 110 UDR ಪ್ರಕರಣಗಳು ದಾಖಲಾಗಿವೆ. ಇವುಗಳ ಒಟ್ಟು ಸಂಖ್ಯೆ 1,480.
ವಿವಿಧ ಮೂಲಗಳ ದಾಖಲೆಗಳ ಪ್ರಕಾರ 1998ರಲ್ಲಿ 78, 1999ರಲ್ಲಿ 79, 2000ರಲ್ಲಿ 82, 2001ರಲ್ಲಿ 95, 2002ರಲ್ಲಿ 102, 2003ರಲ್ಲಿ 99, 2004ರಲ್ಲಿ 91, 2005ರಲ್ಲಿ 72, 2006ರಲ್ಲಿ 93, 2007ರಲ್ಲಿ 96, 2008ರಲ್ಲಿ 85, 2009ರಲ್ಲಿ 99, 2010ರಲ್ಲಿ 83, 2011ರಲ್ಲಿ 70, 2012ರಲ್ಲಿ 96, 2013ರಲ್ಲಿ 80 ಮತ್ತು 2014ರಲ್ಲಿ 110 ಸೇರಿದಂತೆ ಒಟ್ಟು 1,510 ಪ್ರಕರಣಗಳ ಮಾಹಿತಿ ಲಭ್ಯವಾಗಿದೆ.
ಒಟ್ಟಾರೆ 30 UDR ಗಳಲ್ಲಿ ವ್ಯತ್ಯಾಸ ಕಂಡು ಬಂದಿರುತ್ತದೆ.
SIT ಈವರೆಗೆ 73 ದೂರು ಅರ್ಜಿಗಳನ್ನು ಸ್ವೀಕರಿಸಿದೆ. ಸ್ಥಳೀಯ ಠಾಣೆಗಳು, ಔಟ್ಪೋಸ್ಟ್ಗಳು, ಎಸಿ ಕಚೇರಿ, ಗ್ರಾಮ ಪಂಚಾಯಿತಿಗಳು, DCRB, SCRB ಹಾಗೂ ದೇವಸ್ಥಾನ ಟ್ರಸ್ಟ್ ನ ಮಾಹಿತಿ ಕಚೇರಿಯಿಂದ UDR, ಕಾಣೆಯಾದವರು, ಕೊಲೆ ಪ್ರಕರಣಗಳು ಸೇರಿದಂತೆ ವಿವಿಧ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಈ ಮಾಹಿತಿಯನ್ನು ವಿಚಾರಣೆ ನಡೆಸಿ, ಸಮಗ್ರಗೊಳಿಸಿ ಮತ್ತು ವಿಶ್ಲೇಷಿಸುವ ಪ್ರಕ್ರಿಯೆ ಮುಂದುವರಿದಿದೆ.
ಮಹಿಳಾ ಆಯೋಗವು ಪತ್ರದಲ್ಲಿ ಪ್ರಸ್ತಾಪಿಸಿರುವ ಹಳೆಯ ಪ್ರಕರಣಗಳು ಹಾಗೂ ಮಹಿಳೆಯರಿಗೆ ಸಂಬಂಧಿಸಿದ ಇತರ ಅಪರಾಧಗಳನ್ನು ತನಿಖೆ ಮಾಡಲು SITಗೆ ಸ್ವಯಂಪ್ರೇರಿತ ಅಧಿಕಾರವಿಲ್ಲ. ಸರ್ಕಾರದ ಮೂಲ ಆದೇಶದಂತೆ, ಡಿಜಿ ಮತ್ತು ಐಜಿಪಿ ಅವರು ಆ ಪ್ರಕರಣಗಳನ್ನು SITಗೆ ವರ್ಗಾಯಿಸಿ ಆದೇಶ ಹೊರಡಿಸಿದರೆ ಮಾತ್ರವೇ ಅವುಗಳ ನಿಷ್ಪಕ್ಷಪಾತ ತನಿಖೆ ನಡೆಸಿ ವರದಿ ಸಲ್ಲಿಸಲು ಸಾಧ್ಯ ಎಂದು ಮಾರ್ಚ್ 24ರ ವರದಿಯಲ್ಲಿ SIT ಸ್ಪಷ್ಟಪಡಿಸಿದೆ.
ಧರ್ಮಸ್ಥಳ ಠಾಣೆಯ ಮೊ.ಸಂ.39/2025ರ ತನಿಖಾ ವರದಿ ಮತ್ತು ದಾಖಲೆಗಳನ್ನು 2025ರ ನವೆಂಬರ್ 20ರಂದು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಕಲಂ 215ರ ಅಡಿಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು SIT ತಿಳಿಸಿದೆ.
ಧರ್ಮಸ್ಥಳ ಠಾಣೆಯ ಮೊ.ಸಂ.39/2025ಕ್ಕೆ ಸಂಬಂಧಿಸಿದ ಮಹಿಳೆಯರು ಮತ್ತು ಯುವತಿಯರ ನಾಪತ್ತೆ, ಅತ್ಯಾಚಾರ, ಕೊಲೆ, ಅಸಹಜ ಹಾಗೂ ಅನುಮಾನಾಸ್ಪದ ಸಾವುಗಳು ಸೇರಿದಂತೆ ಇತರ ಪ್ರಕರಣಗಳ ಹೆಚ್ಚಿನ ತನಿಖೆಯನ್ನು ಸರ್ಕಾರದ ಆದೇಶದಂತೆ ಎಲ್ಲ ಆಯಾಮಗಳಲ್ಲೂ ನಿಷ್ಪಕ್ಷಪಾತವಾಗಿ ನಡೆಸಲಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಈ ಸಮಗ್ರ ವರದಿಗೆ 2026ರ ಮಾರ್ಚ್ 24ರಂದು ಡಾ. ಪ್ರಣವ್ ಮಹಾಂತಿ ಸಹಿ ಮಾಡಿದ್ದು, ಆಗಸ್ಟ್ 31ರಂದು ಇದೇ ವರದಿಯ ಪ್ರತಿಯನ್ನು ಮಹಿಳಾ ಆಯೋಗಕ್ಕೆ ಕಳುಹಿಸಲಾಗಿದೆ.






