ಧರ್ಮಸ್ಥಳ ಪ್ರಕರಣ | ಹೊಸ ಸ್ಥಳದಲ್ಲಿ ಶೋಧ ಕಾರ್ಯಾಚರಣೆ

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಹೂತು ಹಾಕಲಾಗಿದೆ ಎನ್ನಲಾದ ಮೃತದೇಹಗಳ ಪತ್ತೆಗಾಗಿ ನಡೆಯುತ್ತಿರುವ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಶನಿವಾರ ಎಸ್.ಐ.ಟಿ. ತಂಡ ಹೊಸ ಸ್ಥಳದಲ್ಲಿ ಪರಿಶೀಲನೆ ಆರಂಭಿಸಿದೆ.
ಧರ್ಮಸ್ಥಳ ಮುಖ್ಯದ್ವಾರದ ಸಮೀಪದ ಬಾಹಬಲಿ ಬೆಟ್ಟದ ಕೆಳಭಾಗದ ಅರಣ್ಯದಲ್ಲಿ ಶೋಧ ಕಾರ್ಯಕ್ಕೆ ಮುಂದಾಗಿದೆ. ಎಸ್.ಐ.ಟಿ ಅಧಿಕಾರಿಗಳು ಸಕಲ ಸಿದ್ಧತೆಯೊಂದಿಗೆ ಆಗಮಿಸಿದ್ದಾರೆ. ಜೊತೆಗೆ ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ವೈದ್ಯರ ತಂಡ, ಅರಣ್ಯಾಧಿಕಾರಿಗಳು, ಎಫ್.ಎಸ್.ಎಲ್. ತಂಡ, ಐ.ಎಸ್.ಡಿ. ಹಾಗೂ ಇತರ ಅಧಿಕಾರಿಗಳ ಸಹಿತ ಎಲ್ಲ ತಂಡಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿವೆ.
ಧರ್ಮಸ್ಥಳ ಗ್ರಾಮದ ಬೊಳಿಯಾರ್ ಗೋಂಕ್ರತಾರ್ ಎಂಬ ಪ್ರದೇಶದಲ್ಲಿ ಆ.8ರಂದು ಅನಾಮಿಕ ದೂರುದಾರನೊಂದಿಗೆ ಎಸ್.ಐ.ಟಿ ಅಧಿಕಾರಿಗಳು 16 ಮತ್ತು 16A ಎರಡು ಸ್ಥಳದಲ್ಲಿ ಶೋಧ ನಡೆಸಿತ್ತು. ಜೊತೆಗೆ ಇನ್ನೆರಡು ಸ್ಥಳ ಅಗೆದಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ಎಸ್ಐಟಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಶನಿವಾರ ಹೊಸ ಸ್ಥಳಕ್ಕೆ ಸಾಕ್ಷಿ ದೂರುದಾರನನ್ನು ಎಸ್ಐಟಿ ಅಧಿಕಾರಿಗಳು ಕರೆತಂದಿದ್ದಾರೆ. ಇಲ್ಲಿ ಸಾಕ್ಷಿ ದೂರುದಾರ ಎಷ್ಟು ಸ್ಥಳಗಳನ್ನು ಗುರುತಿಸುತ್ತಾನೆ ಎಂಬುದು ಕಾದು ನೋಡಬೇಕಿದೆ. 13ನೇ ಸ್ಥಳದ ಮಹಜರು ಪ್ರಕ್ರಿಯೆ ನಡೆಸಿದ ಬಳಿಕ ಆ ಸ್ಥಳದಲ್ಲಿ ಇನ್ನೂ ಕಾರ್ಯಾಚರಣೆ ಕೈಗೊಂಡಿಲ್ಲ. ಇದೀಗ ಹೊಸ ಸ್ಥಳದಲ್ಲಿ ಮಹಜರು ಪ್ರಕ್ರಿಯೆಗೆ ಆಗಮಿಸಿದ್ದಾರೆ.
ಅನಾಮಿಕ ಇಂದು ಬೆಳಗ್ಗೆ 10:15 ಗಂಟೆ ಸುಮಾರಿಗೆ ಪೊಲೀಸ್ ಬಂದೋಬಸ್ತ್ ನಲ್ಲಿ ಬೆಳ್ತಂಗಡಿ ಎಸ್.ಐ.ಟಿ. ಕಚೇರಿಗೆ ಆಗಮಿಸಿದ್ದು, ಅಲ್ಲಿಂದ 12:05ಕ್ಕೆ ಬೆಳ್ತಂಗಡಿಯಿಂದ ಹೊರಟು 12.45 ಸುಮಾರಿಗೆ ಧರ್ಮಸ್ಥಳ ಗ್ರಾಮಕ್ಕೆ ಆಗಮಿಸಿದ್ದಾನೆ.







