ಧರ್ಮಸ್ಥಳ ಪ್ರಕರಣ | ದೂರುದಾರನನ್ನು ಬೆದರಿಸಿದ ತನಿಖಾಧಿಕಾರಿಯನ್ನು ಎಸ್ಐಟಿ ವಿಚಾರಣೆಗೆ ಒಳಪಡಿಸಲಿ: ಸುಜಾತಾ ಭಟ್ ಪರ ವಕೀಲ ಆಗ್ರಹ

ಮಂಗಳೂರು: ಧರ್ಮಸ್ಥಳ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದ ತನಿಖಾಧಿಕಾರಿಗಳಲ್ಲಿ ಒಬ್ಬರಾದ ಮಂಜುನಾಥ್ ಗೌಡ ಎಂಬ ಪೊಲೀಸ್ ಅಧಿಕಾರಿಯು ಸಾಕ್ಷಿ ದೂರುದಾರನನ್ನ ಬೆದರಿಸಿ, ಆತನಿಂದ ವ್ಯತಿರಿಕ್ತ ಹೇಳಿಕೆಗಳನ್ನು ಪಡೆದು, ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ ಎಂಬ ಸಾಕ್ಷಿದಾರರ ಪರ ವಕೀಲರ ದೂರು ಎಸ್ಐಟಿಯನ್ನು ಮತ್ತಷ್ಟು ಬಲಪಡಿಸಲು ಸಹಾಯಕವಾಗುತ್ತದೆ ಎಂದು ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಎಂಬವರ ತಾಯಿ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಎನ್. ಹೇಳಿದ್ದಾರೆ.
ವಿಶೇಷ ತನಿಖಾ ದಳವು (ಎಸ್ಐಟಿ) ಮಂಜುನಾಥ್ ಗೌಡರನ್ನು ವಿಚಾರಣೆಗೆ ಒಳಪಡಿಸುವ ನಿರೀಕ್ಷೆ ಮತ್ತು ವಿಶ್ವಾಸವಿದೆ. ಪ್ರಣವ ಮೊಹಾಂತಿ ನೇತೃತ್ವದ ಈ ಎಸ್ಐಟಿಯು ಮುಂಜಾಗೃತಾ ಕ್ರಮ ವಹಿಸಿ ಮಂಜುನಾಥ್ ಗೌಡರ ಮೇಲೆ ಹಿಂದಿನಿಂದಲೇ ನಿಗಾ ವಹಿಸಿತ್ತು ಎಂದು ನಂಬಲರ್ಹ ಮೂಲಗಳು ಹೇಳಿವೆ. ಇಂದಿನ ಬೆಳವಣಿಗೆಯು ಎಸ್ಐಟಿಯನ್ನು ಮತ್ತಷ್ಟು ಬಲಪಡಿಸಲು ಸಹಾಯವಾಗುವುದೆಂಬ ವಿಶ್ವಾಸವಿದೆ ಎಂದು ಮಂಜುನಾಥ್ ಎನ್. ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿಯಲ್ಲಿರುವ ಮಂಜುನಾಥ ಗೌಡ ಎಂಬ ಪೊಲೀಸ್ ಅಧಿಕಾರಿಯು ದೂರು ಹಿಂಪಡೆಯುವಂತೆ ಸಾಕ್ಷಿ ದೂರುದಾರನಿಗೆ ಬೆದರಿಕೆ ಒಡ್ಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ದೂರುದಾರ ಪರ ವಕೀಲರು ಎಸ್ಐಟಿ ಮುಖ್ಯಸ್ಥರಿಗೆ ದೂರು ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ದೂರುದಾರರ ಪರ ವಕೀಲರು ಅಥವಾ ಎಸ್ಐಟಿ ಯಾವುದೇ ಹೇಳಿಕೆ ನೀಡಿಲ್ಲ.







