ಧರ್ಮಸ್ಥಳ ದೂರು | ಗುರುತು ಮಾಡಿರುವ ವಿವಿಧ ಸ್ಥಳಗಳಲ್ಲಿದೆ ಎನ್ನಲಾದ ಮೃತದೇಹಗಳೆಷ್ಟು?
ಸುಜಾತಾ ಭಟ್ ಪರ ವಕೀಲರು ಹೇಳಿದ್ದೇನು?

ಮಂಗಳೂರು, ಜು.30: ಧರ್ಮಸ್ಥಳದಲ್ಲಿ ಸಾಮೂಹಿಕವಾಗಿ ಹೂತು ಹಾಕಿರುವ ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರದಿಂದ ಗುಂಡಿಗಳ ಉತ್ಖನನ ಕಾರ್ಯಕ್ಕೆ ವಿಶೇಷ ತನಿಖಾ ತಂಡ(SIT) ಚಾಲನೆ ನೀಡಿದೆ.
ತನಿಖಾ ತಂಡವು ಗುರುತು ಮಾಡಿರುವ ವಿವಿಧ ಸ್ಥಳಗಳಲ್ಲಿದೆ ಎನ್ನಲಾದ ಮೃತದೇಹಗಳ ಕುರಿತು, ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ಅವರ ತಾಯಿ ಸುಜಾತ ಭಟ್ ಪರ ವಕೀಲ ಮಂಜುನಾಥ್ ಎನ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು, ದೂರುದಾರ ಸಾಕ್ಷಿಯು ಹೂತುಹಾಕಿದ್ದೇನೆ ಎಂದು ಹೇಳಲಾಗಿರುವ ಗುರುತು ಮಾಡಿದ ಸ್ಥಳಗಳಲ್ಲಿದೆ ಎನ್ನಲಾದ ಮೃತ ದೇಹಗಳ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಮೊದಲನೆ ಸ್ಥಳದಲ್ಲಿ 2 ಶವಗಳು, ಎರಡನೆ ಸ್ಥಳದಲ್ಲಿ 2 ಶವಗಳು, ಮೂರನೆಯ ಸ್ಥಳದಲ್ಲಿ 2 ಶವಗಳು, ನಾಲ್ಕು ಮತ್ತು ಐದನೆಯ ಸ್ಥಳಗಳಲ್ಲಿ ಒಟ್ಟು 6 ಶವಗಳು, ಆರು, ಏಳು ಮತ್ತು ಎಂಟನೆ ಸ್ಥಳಗಳಲ್ಲಿ ಒಟ್ಟು 8 ಶವಗಳು, ಒಂಭತ್ತನೇ ಸ್ಥಳದಲ್ಲಿ 6 ರಿಂದ 7 ಶವಗಳು, ಹತ್ತನೆ ಸ್ಥಳದಲ್ಲಿ ಮೂರು ಶವಗಳು, ಹನ್ನೊಂದನೆ ಸ್ಥಳದಲ್ಲಿ 9 ಶವಗಳು, ಹನ್ನೆರಡನೆ ಸ್ಥಳದಲ್ಲಿ 4 ರಿಂದ 5 ಶವಗಳು ಹಾಗೂ 13ನೇ ಸ್ಥಳದಲ್ಲಿ ಅತ್ಯಧಿಕ ಸಂಖ್ಯೆಯ ಶವಗಳನ್ನು ಹೂಳಲಾಗಿದೆ ಎಂದು ದೂರುದಾರ ಮಾಹಿತಿ ನೀಡಿದ್ದಾನೆ ಎಂದು ತಿಳಿಸಿದ್ದಾರೆ.
ಆದರೆ, ಅತ್ಯಧಿಕ ಸಂಖ್ಯೆಯ ಶವಗಳನ್ನು ಹೊಂದಿರುವ ಸ್ಥಳವು ಸಾಕ್ಷಿದಾರ ದೂರುದಾರನ ಪ್ರಕಾರ, ಈಗ ಗುರುತು ಮಾಡಿರುವ 13 ಸ್ಥಳದಲ್ಲಿಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಈ ನಿರ್ದಿಷ್ಟ ಸ್ಥಳವು ಇನ್ನೂ ಕೊಂಚ ಮುಂದಿದ್ದು, ಹಾಲಿ ಸರಣಿಯ ಉತ್ಖನನ ಕಾರ್ಯ ಸಂಪೂರ್ಣಗೊಂಡ ನಂತರ, ಆ ಸ್ಥಳದ ಉತ್ಖನನ ಕಾರ್ಯ ಜರುಗಲಿದೆ ಎಂಬ ಮಾಹಿತಿ ನಮಗೆ ಲಭ್ಯವಾಗಿದೆ ಎಂದು ವಕೀಲ ಮಂಜುನಾಥ್ ಎನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







