ಧರ್ಮಸ್ಥಳ ದೂರು | ಪ್ರಕರಣದ ತನಿಖೆಯನ್ನು ಎಸ್ ಐಟಿ ನಡೆಸಲಿದೆ, ತಾಳ್ಮೆ ಕಳೆದುಕೊಳ್ಳಬೇಡಿ: ಯು.ಟಿ.ಖಾದರ್

'ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಸರಣಿ ಹತ್ಯೆ ಆರೋಪ ಪ್ರಕರಣ'ವನ್ನು ವಿಶೇಷ ತನಿಖಾ ತಂಡ(ಎಸ್.ಐ.ಟಿ)ಕ್ಕೆ ವರ್ಗಾಯಿಸಿ ರಾಜ್ಯ ಸರಕಾರ ಶನಿವಾರ (ಜು.19) ಆದೇಶಿಸಿದೆ.
ಮಂಗಳೂರು, ಜು.21; ಧರ್ಮಸ್ಥಳದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಸರಣಿ ಹತ್ಯೆ ಮತ್ತು ಅಸಹಜ ಸಾವುಗಳ ಪ್ರಕರಣದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ತನಿಖೆಗೆ ಸರಕಾರ ಎಸ್ ಐಟಿಯನ್ನು ರಚಿಸಿದೆ. ತನಿಖೆಯ ಬಳಿಕ ಸತ್ಯಾಸತ್ಯತೆ ಬಹಿರಂಗಗೊಳ್ಳಬಹುದು. ಕಾನೂನು ಪ್ರಕಾರ ಮುಂದಿನ ಕ್ರಮ ನಡೆಯುತ್ತದೆ. ಅದಕ್ಕಿಂತ ಮೊದಲೇ ಪೂರ್ವಗ್ರಹ ಪೀಡಿತರಾಗಿ ಹೇಳಿಕೆ ನೀಡುವುದರ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ತನಿಖೆ ನಡೆಯುವವರೆಗೆ ಜನತೆ ತಾಳ್ಮೆ ಕಳೆದುಕೊಳ್ಳಬಾರದು ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿ ಯಲ್ಲಿಂದು ಮಾತನಾಡಿದ ಅವರು, ಸರಕಾರ ಪ್ರಕರಣವನ್ನು ಎಸ್ ಐಟಿಗೆ ವಹಿಸಿರುವ ಕಾರಣ ಧಾರ್ಮಿಕ ಪಾವಿತ್ರ್ಯತೆ ಯನ್ನು ಹೊಂದಿರುವ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯಾಗುವ ಹೇಳಿಕೆ ನೀಡುವುದರ ಬಗ್ಗೆ ಯೂ ಆತ್ಮಾವಲೋಕನ ಮಾಡಿಕೊಳ್ಳಬೇಕು.
ತನಿಖೆ ಸಮರ್ಪಕವಾಗಿ ನಡೆಯಲು ಎಸ್ಐಟಿ ಗೆ ಎಲ್ಲರ ಸಹಕಾರ ಅಗತ್ಯ ಎನ್ನುವುದು ನನ್ನ ಅಭಿಪ್ರಾಯ ಎಂದರು.





