"2018ರಲ್ಲಿ ವಾಹನ ಅಪಘಾತದ ಮೂಲಕ ತಂದೆಯನ್ನು ಹತ್ಯೆಗೈಯಲಾಗಿದೆ": ಧರ್ಮಸ್ಥಳದ ವ್ಯಕ್ತಿಯಿಂದ ಕೇರಳದಲ್ಲಿ ದೂರು ದಾಖಲು

ಸಾಂದರ್ಭಿಕ ಚಿತ್ರ (PTI)
ಬೆಳ್ತಂಗಡಿ: ಜಾಗದ ವಿವಾದದ ಹಿನ್ನಲೆಯಲ್ಲಿ ತನ್ನ ತಂದೆಯನ್ನು ವಾಹನ ಅಪಘಾತದ ಮೂಲಕ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಈ ಹಿಂದೆ ಧರ್ಮಸ್ಥಳ ಹಾಗೂ ಬೆಳ್ತಂಗಡಿ ತಾಲೂಕಿನ ಇತರೆಡೆಗಳಲ್ಲಿ ವಾಸವಾಗಿದ್ದ, ಈಗ ಕೇರಳದಲ್ಲಿ ವಾಸವಾಗಿರುವ ಅನೀಶ್ ಜೋಯಿ ಎಂಬವರು ಕೇರಳದ ತಳಿಪರಂಬ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸಿದ್ದು, ಪೊಲೀಸರು ಇದರ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.
ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದಲ್ಲಿ ವಾಸಿಸುತ್ತಿದ್ದ ವೇಳೆ ಅನೀಶ್ ಅವರ ತಂದೆ ಜೋಯ್ ಅವರು 2018ರ ಎಪ್ರಿಲ್ 5ರಂದು ಮೂಡಬಿದ್ರೆ ಬೆಳುವಾಯಿ ಸಮೀಪ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಅಪರಿಚಿತ ವಾಹನ ಢಿಕ್ಕಿ ಹೊಡೆದು ಮೃತಪಟ್ಟಿದ್ದರು. ಆದರೆ ಈ ಬಗ್ಗೆ ಮೂಡಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರೂ ಪೊಲೀಸರು ಯಾವುದೇ ರೀತಿಯ ತನಿಖೆ ನಡೆಸಿರಲಿಲ್ಲ. ಅಪಘಾತ ನಡೆಸಿದ ವಾಹನವನ್ನು ಪತ್ತೆ ಹಚ್ಚುವ ಕಾರ್ಯಕ್ಕೂ ಮುಂದಾಗಲಿಲ್ಲ. ಇದರ ಹಿಂದೆ ಪ್ರಭಾವಿ ವ್ಯಕ್ತಿಗಳು ಇದ್ದಾರೆ ಎಂದು ಹೇಳಿ ಪೊಲೀಸರು ವಾಪಸ್ ಕಳುಹಿಸಿದ್ದರು ಎಂದು ಅನೀಶ್ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.
ಧರ್ಮಸ್ಥಳ ಗ್ರಾಮದಲ್ಲಿ ತನ್ನ ತಂದೆಯ ಹೆಸರಿನಲ್ಲಿ ಜಾಗವಿದ್ದು ಈ ಜಮೀನನ್ನು ಕಬಳಿಸಲು ಪ್ರಯತ್ನ ನಡೆಯುತ್ತಿತ್ತು, ಈ ಕುರಿತು ತಂದೆಗೆ ನಿರಂತರ ಬೆದರಿಕೆ ಕರೆಗಳು ಬರುತ್ತಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ತಮ್ಮ ಕುಟುಂಬಕ್ಕೆ ಸೇರಿದ ಸುಮಾರು 20ಎಕ್ರೆ ಜಾಗ ಧರ್ಮಸ್ಥಳ ಗ್ರಾಮದಲ್ಲಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ. ಧರ್ಮಸ್ಥಳದಲ್ಲಿ ನಡೆದಿರುವ ಹಲವಾರು ಹತ್ಯೆಗಳ ಬಗ್ಗೆ ಇದೀಗ ಮಾಹಿತಿಗಳು ಹೊರಬರುತ್ತಿರುವ ಹಿನ್ನಲೆಯಲ್ಲಿ ತನ್ನ ತಂದೆಯ ಅಸಹಜ ಸಾವಿನ ಬಗ್ಗೆಯೂ ತನಿಖೆ ನಡೆಸಬೇಕು ಹಾಗೂ ತನಗೂ ಜೀವಭಯವಿದ್ದು ರಕ್ಷಣೆ ನೀಡಬೇಕು ಎಂದು ದೂರಿನಲ್ಲಿ ಕೇಳಿಕೊಳ್ಳಲಾಗಿದೆ.







