ವಾಮಂಜೂರು-ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಆಗ್ರಹಿಸಿ ಧರಣಿ

ಮಂಗಳೂರು, ಸೆ.25: ವಾಮಂಜೂರು-ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೂಲಭೂತ ಸೌಕರ್ಯಗಳು ಮತ್ತು ಸಿಬ್ಬಂದಿಗಳ ಸಹಿತ ಮೇಲ್ದರ್ಜೆಗೆ ಏರಿಸಬೇಕೆಂದು ಒತ್ತಾಯಿಸಿ ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯ ವತಿಯಿಂದ ಸೋಮವಾರ ಧರಣಿ ನಡೆಯಿತು.
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ ಧಣಿಕರ ಜೇಬು ತುಂಬಿಸುವ 6 ಖಾಸಗಿ ಮೆಡಿಕಲ್ ಕಾಲೇಜುಗಳು ದ.ಕ. ಜಿಲ್ಲೆಗೆ ಬಂದರೂ ಕೂಡ ಬಡ-ಮಧ್ಯಮ ವರ್ಗದ ಜನತೆಗೆ ಸಹಕಾರಿಯಾಗುವಂತೆ ಒಂದು ಮೆಡಿಕಲ್ ಕಾಲೇಜನ್ನು ಸ್ಥಾಪಿಸಲು ಜನಪ್ರತಿನಿಧಿಗಳಿಗೆ ಸಾಧ್ಯವಾಗಲಿಲ್ಲ ಎಂದರು.
ಶಾಸಕ ಭರತ್ ಶೆಟ್ಟಿ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರವು ಮೇಲ್ದರ್ಜೆಗೆ ಏರದಿರವುದು ವಿಪರ್ಯಾಸ. ತನ್ನ ಗೆಲುವಿಗೆ ಹೆಚ್ಚಿನ ಕೊಡುಗೆ ನೀಡಿದ ಗುರುಪುರ ಹೋಬಳಿಯನ್ನು ಶಾಸಕರು ಮರೆತಿದ್ದಾರೆ. ಈ ಹೋಬಳಿಗೆ 40 ಬೆಡ್ಗಳ ಸಮುದಾಯ ಆಸ್ಪತ್ರೆಯನ್ನು ಮತ್ತು ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಶಾಸಕರು ಪ್ರಯತ್ನಿಸಬೇಕು ಎಂದರು.
ವಾಮಂಜೂರು ವಲಯ ಕಾಂಗ್ರೆಸ್ ಅಧ್ಯಕ್ಷ ರಾಜ್ಕುಮಾರ್ ಶೆಟ್ಟಿ ತಿರುವೈಲುಗುತ್ತು ಜನತೆಯ ಆರೋಗ್ಯದ ಹಕ್ಕನ್ನು ಉಳಿಸಿಕೊಳ್ಳಲು ಸಂಘಟಿತ ಹೋರಾಟದ ಅವಶ್ಯಕತೆ ಇದೆ. ಈ ಉದ್ದೇಶಕ್ಕಾಗಿ ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯು ಹೋರಾಟಕ್ಕೆ ಮುಂದಾಗಿದೆ. ಇಂತಹ ಹೋರಾಟಗಳು ಯಶಸ್ಸು ಸಿಗುವವರೆಗೂ ಮುಂದುವರಿಯಬೇಕಿದೆ ಎಂದರು.
ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ವಾಮಂಜೂರು ಇದರ ಸಂಚಾಲಕ ಅಶೋಕ್ ಬಂಗೇರ ಸಿಲ್ವರ್ ಕೋಡಿ, ಡಿವೈಎಫ್ಐ ದ.ಕ. ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರು, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮಂಗಳ ಜ್ಯೋತಿ ಘಟಕದ ಅಧ್ಯಕ್ಷ ಕರಿಯ ಕೆ, ಕಾರ್ಮಿಕ ಮುಖಂಡರಾದ ಕೆ. ಗಂಗಯ್ಯ ಅಮೀನ್, ತಾಪಂ ಮಾಜಿ ಸದಸ್ಯ ಯೂಸುಫ್ ಉಳೈಬೆಟ್ಟು, ರೈತ ಮುಖಂಡರಾದ ನೋಣಯ್ಯ ಗೌಡ ಮಾತನಾಡಿದರು.
ಸಾಮಾಜಿಕ ಹೋರಾಟಗಾರರಾದ ಬಾವಾ ಪದರಂಗಿ, ಅಬ್ದುಲ್ ಖಾದರ್ ಇಡ್ಮ, ಜೈ ಶಂಕರ್ ಮಿತ್ರ ಮಂಡಳಿಯ ಅಧ್ಯಕ್ಷ ದಿವಾಕರ್ ಆಚಾರ್ಯ, ಸಮಿತಿಯ ಮುಖಂಡರಾದ ವಸಂತ ಆಚಾರ್ಯ, ರಾಜೀವ್ ಸಾಲ್ಯಾನ್, ಹೊನ್ನಯ ಅಂಚನ್, ವಾಮಂಜೂರು ಪ್ರದೇಶ ಸಮಾನ ಮನಸ್ಕರಾದ ಅಶೋಕ್ ರೈ, ಸದಾನಂದ ಭಾಗವತ, ವಿಠಲ ಪತ್ರಕೋಡಿ, ಹರಿ ಪ್ರಸಾದ್ ಆಳ್ವ ಓಂಕಾರ ನಗರ್, ಇಸಾಕ್ ಉಳಾಯಿಬೆಟ್ಟು, ಬಿಲ್ಲವ ಮುಖಂಡರಾದ ಮಾರಪ್ಪಪೂಜಾರಿ, ಸದಾನಂದ ಪೂಜಾರಿ, ಕಾಂತಪ್ಪಪೂಜಾರಿ, ರೈತ ಮುಖಂಡರಾದ ಬಾಬು ಸಾಲ್ಯಾನ್, ಬೋಜ ಪೂಜಾರಿ ದೇವಸ, ಲಿಂಗಪ್ಪ ಸಾಲ್ಯಾನ್, ವೆಂಕಪ್ಪ ಪೂಜಾರಿ, ಕಾರ್ಮಿಕ ಮುಖಂಡರಾದ ಹೊನ್ನಯ ಅಮೀನ್, ಜಯಶೀಲ ಕರ್ಕೇರಾ, ಭವಾನಿ ಗಂಗಯ ಅಮೀನ್, ಯುವಜನ ಮುಖಂಡರಾದ ಮಹೇಶ್, ದಿನೇಶ್ ಬೊಂಡಂತಿಲ, ಪ್ರವೀಣ್ ಕುಮಾರ್ ಮಜಲು, ಚಂದ್ರಹಾಸ್ ಕಲ್ಲುಡೇಲು, ನೇತಾಜಿ ರಿಕ್ಷಾ ಪಾರ್ಕ್ನ ಶೇಖರ ಕೆತ್ತಿಕಲ್ಲು, ಮಹಿಳಾ ಕಾಂಗ್ರೆಸ್ನ ಜಯಂತಿ, ದಲಿತ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಕಟಿಂಜ ಮತ್ತಿತರರು ಉಪಸ್ಥಿತರಿದ್ದರು.







