ಮಂಗಳೂರಿನ ಕೊಳತ್ತಮಜಲುವಿನಲ್ಲಿ ಯುವಕನ ಕೊಲೆ: ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಖಂಡನೆ
ಮಂಗಳೂರಿನಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ

ದಿನೇಶ್ ಗುಂಡೂರಾವ್
ಮಂಗಳೂರು: ಬಂಟ್ವಾಳದ ಕೊಳತ್ತಮಜಲು ಬಳಿ ನಡೆದ ಅಬ್ದುಲ್ ರಹಿಮಾನ್ ಎಂಬ ಯುವಕನ ಹತ್ಯೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಖಂಡನೆ ವ್ಯಕ್ತಪಡಿಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ DG &IGP ಹಾಗೂ ಕಾನೂನು ಸುವ್ಯವಸ್ಥೆ ADGP ಅವರಿಗೆ ದೂರವಾಣಿ ಮೂಲಕ ಮಾತನಾಡಿದ ಸಚಿವರು, ಸೂಕ್ತ ಬಿಗಿ ಕಾನೂನು ಕ್ರಮಗಳನ್ನ ಜರುಗಿಸುವಂತೆ ಸೂಚನೆ ನೀಡಿದರು.
ಅಲ್ಲದೇ ಮಂಗಳೂರು ಜಿಲ್ಲಾಧಿಕಾರಿ ಹಾಗೂ ಎಸ್.ಪಿ ಅವರೊಂದಿಗೆ ಮಾತನಾಡಿದ ಸಚಿವರು ಮಂಗಳೂರಿನಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳುವಂತೆ ಸೂಚನೆ ನೀಡಿದರು. ಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚಿನ ನಿಗಾ ವಹಿಸಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಅವರು, "ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿ ಹಾಳು ಮಾಡುವ ದುಷ್ಟ ಯತ್ನವೊಂದು ವ್ಯವಸ್ಥಿತವಾಗಿ ನಡೆಯುತ್ತಿದೆ. ಈ ಘಟನೆಯು ಇದರ ಒಂದು ಭಾಗದಂತೆ ಕಾಣಿಸುತ್ತಿದೆ. ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತಕ್ಕೆ ಕಠಿಣ ಸೂಚನೆ ನೀಡಿದ್ದೇನೆ. ಜನರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡುತ್ತೇನೆ." ಎಂದು ಹೇಳಿದ್ದಾರೆ.







