ದೇಶ ಕಟ್ಟುವಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದು: ಡಾ.ಹಕೀಂ ಅಝ್ಹರಿ

ಪುಣೆ: ಇಲ್ಲಿನ ಸಿದ್ರಾ ಫೌಂಡೇಶನ್ ಅಧೀನದ ಐದು ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಆಯೋಜಿಸಲಾಗಿದ್ದ ಲೀಡರ್ಸ್ ಟಾಲೆಂಟ್ ಶೋ, ಎಮಿನೆನ್ಸ್ ಮೀಟ್ ಕಾರ್ಯಕ್ರಮ ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮರ್ಕಝ್ ನಾಲೆಡ್ಜ್ ಸಿಟಿಯ ಡೈರೆಕ್ಟರ್ ಉಸ್ತಾದ್ ಡಾ.ಎ.ಪಿ.ಅಬ್ದುಲ್ ಹಕೀಮ್ ಅಝ್ಹರಿ, ದೇಶ ಕಟ್ಟುವಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದು. ದೇಶವನ್ನು ಬಲಿಷ್ಠಗೊಳಿಸುವಲ್ಲಿ ಶೈಕ್ಷಣಿಕ ಯೋಜನೆಗಳು ಮತ್ತು ಸಂಸ್ಥೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಸಮಾಜದ ಏಳಿಗೆಗಾಗಿ ದುಡಿಯುವ ಸಂಕಲ್ಪವನ್ನು ಪ್ರತಿಯೊಬ್ಬರೂ ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಶಿಕ್ಷಣದ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಎಲ್ಲರೂ ಒಗ್ಗಟ್ಟಿನಿಂದ ದುಡಿಯಬೇಕು. ಈ ಹಿನ್ನೆಲೆಯಲ್ಲಿ ಸಿದ್ರಾ ಫೌಂಡೇಶನ್ ಕೆಲವೇ ವರ್ಷಗಳಲ್ಲಿ ಶಿಕ್ಷಣದಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವುದನ್ನು ಶ್ಲಾಘಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಿದ್ರಾ ಫೌಂಡೇಶನ್‌ನ ಶಿಲ್ಪಿ ಉಸ್ತಾದ್ ಶಿಹಾಬುದ್ದೀನ್ ನೂರಾನಿ, ಸಿದ್ರಾ ಫೌಂಡೇಶನ್ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಮೌಲ್ಯಾಧಾರಿತ ಶಿಕ್ಷಣದ ಮೂಲಕ ಹಿಂದುಳಿದ ಸಮುದಾಯಗಳ ಉನ್ನತಿಗೆ ಶ್ರಮಿಸುತ್ತಿರುವ ಸಂಸ್ಥೆಯಾಗಿದೆ. ಈ ರೀತಿಯ ಕಾರ್ಯಕ್ರಮಗಳು ಯುವ ಪೀಳಿಗೆಯಲ್ಲಿ ನಾಯಕತ್ವ, ಸಮಾಜಮುಖಿ ಚಿಂತನೆ ಮತ್ತು ಸೇವಾ ಮನೋಭಾವವನ್ನು ಬೆಳೆಸುವಲ್ಲಿ ಮಹತ್ವದ ಕೊಡುಗೆ ನೀಡುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಪುಣೆ ನಗರದ ಪ್ರಮುಖ ಉದ್ಯಮಿಗಳು, ಶಿಕ್ಷಣ ತಜ್ಞರು, ರಾಜಕೀಯ ನಾಯಕರು ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿರುವ ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದರು.







