ಮಂಗಳೂರು| ʼಎನರ್ಜಿಯಾ ಕಾರ್ಪೊರೇಟ್ ಸೇವಾ ಕೇಂದ್ರʼ ಉದ್ಘಾಟನೆ

ಮಂಗಳೂರು: ಜಾಗತಿಕ ಇಂಧನ ಸೊಲ್ಯೂಷನ್ಸ್ ಕಂಪೆನಿ ‘ಎನರ್ಜಿಯಾ’ ಮಂಗಳೂರಿನಲ್ಲಿ ತನ್ನ ಕಾರ್ಪೊರೇಟ್ ಸೇವಾ ಕೇಂದ್ರವನ್ನು ರವಿವಾರ ಉದ್ಘಾಟಿಸಿದ್ದು, ಜಾಗತಿಕ ಕಾರ್ಪೊರೇಟ್ ಕಾರ್ಯಾಚರಣೆಗಳನ್ನು ಬಲಪಡಿಸುವುದರ ಜೊತೆಗೆ ಭಾರತದಲ್ಲಿ ತನ್ನ ಸೇವೆ ವಿಸ್ತರಿಸುವ ಮಹತ್ವದ ಹೆಜ್ಜೆಯಾಗಿದೆ.
ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರ ಸಮ್ಮುಖದಲ್ಲಿ ಹಾಗೂ ಮಂಗಳೂರಿನ ಉದ್ಯಮ ಮತ್ತು ಸಮುದಾಯ ವಲಯಗಳ ಗಣ್ಯರ ಉಪಸ್ಥಿತಿಯಲ್ಲಿ ಹೊಸ ಕಚೇರಿ ಉದ್ಘಾಟನೆ ನೆರವೇರಿತು.
ಸಮಾರಂಭದಲ್ಲಿ ಎನರ್ಜಿಯಾದ ಸಿಇಒ ಶಾಹಿದ್ ಹಸನ್, ವ್ಯವಸ್ಥಾಪಕ ನಿರ್ದೇಶಕ ಮೋಹಿನ್ ಶೇಖ್, ಕಾರ್ಯಾಚರಣೆ ನಿರ್ದೇಶಕ ರಾಜನ್ ಮೆಂಗೋತ್ ಹಾಗೂ ಕಂಪನಿ ಅಧ್ಯಕ್ಷ ಮೆಹಬೂಬ್ ಭಾಗವಹಿಸಿದ್ದರು. ಕಂಪೆನಿಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಂಗಳೂರಿನ ಈ ಕಾರ್ಪೊರೇಟ್ ಸೇವಾ ಕೇಂದ್ರವು ಸೌದಿ ಅರೇಬಿಯದಲ್ಲಿನ ಎನರ್ಜಿಯಾದ ಕಾರ್ಯಾಚರಣೆ ಗಳಿಗೆ ಬೆಂಬಲ ನೀಡಲು ಮೀಸಲಾದ ಕಚೇರಿಯಾಗಿ ಕಾರ್ಯನಿರ್ವಹಿಸಲಿದೆ. ಸಮನ್ವಯ ಸುಧಾರಣೆ, ಬ್ಯಾಕ್ ಆ್ಯಂಡ್ ಸಪೊರ್ಟ್ ಹಾಗೂ ಪ್ರಮುಖ ಕಾರ್ಪೊರೇಟ್ ಸೇವೆಯಲ್ಲಿ ಕಾರ್ಯಾಚರಣೆ ಬಲಪಡಿಸಲು ಇದು ನೆರವಾಗಲಿದೆ ಎಂದು ಕಂಪೆನಿ ತಿಳಿಸಿದೆ.
ಈ ಹೊಸ ಕೇಂದ್ರದಿಂದ ಮಂಗಳೂರಿನಲ್ಲಿ ವಿಶೇಷವಾಗಿ ಕಾರ್ಪೊರೇಟ್ ಸೇವೆಗಳು ಮತ್ತು ಅದಕ್ಕೆ ಬೇಕಾದ ಹುದ್ದೆಗಳ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಸ್ಥಳೀಯ ವೃತ್ತಿಪರರಿಗೆ ವೃತ್ತಿ ಮಾರ್ಗಗಳು ಹಾಗೂ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಚಯಿಸುವ ಯೋಜನೆಯೂ ಕಂಪೆನಿಗಿದೆ.
ವಿದೇಶಿ ಕಾರ್ಯಾಚರಣೆಗಳಿಗೆ ತಕ್ಷಣದ ಬೆಂಬಲ ನೀಡುವುದು ಕೇಂದ್ರದ ಮೊದಲ ಆದ್ಯತೆಯಾಗಿದ್ದರೂ, ಭಾರತದಲ್ಲಿ ದೀರ್ಘಕಾಲೀನ ಸೇವೆ ನೀಡುವ ಉದ್ದೇಶವನ್ನೂ ಎನರ್ಜಿಯಾ ಕಂಪೆನಿಗಿದೆ. ದೇಶದ ವಿಸ್ತರಿಸುತ್ತಿರುವ ಶುದ್ಧ ಇಂಧನ ವಲಯಕ್ಕೆ ಹೊಂದುವಂತೆ ನವೀಕರಿಸಬಹುದಾದ ಇಂಧನ ಕ್ಷೇತ್ರದ ಅವಕಾಶಗಳನ್ನು ಅನ್ವೇಷಿಸಲಾಗುತ್ತಿದೆ ಎಂದು ಕಂಪೆನಿ ತಿಳಿಸಿದೆ.
ಮಂಗಳೂರಿನ ಕಚೇರಿಯು ಭವಿಷ್ಯದ ನವೀಕರಿಸಬಹುದಾದ ಇಂಧನ ಉಪಕ್ರಮಗಳಿಗೆ ಆಧಾರ ಕೇಂದ್ರವಾಗುವ ನಿರೀಕ್ಷೆಯಿದೆ.
“ಈ ಕಾರ್ಪೊರೇಟ್ ಸೇವಾ ಕೇಂದ್ರವು ಎನರ್ಜಿಯಾದ ದೀರ್ಘಕಾಲೀನ ಬದ್ಧತೆಯ ಪ್ರತಿಬಿಂಬವಾಗಿದೆ. ಮಂಗಳೂರು ಉತ್ತಮ ಗುಣಮಟ್ಟದ ಪ್ರತಿಭೆಗಳಿಗೆ ಪ್ರವೇಶ ಒದಗಿಸುವ ನಗರವಾಗಿದ್ದು, ಈ ಕಚೇರಿ ಸೌದಿ ಕಾರ್ಯಾಚರಣೆಗಳಿಗೆ ನಿರ್ಣಾಯಕ ಬೆಂಬಲ ನೀಡುವುದರ ಜೊತೆಗೆ ಭಾರತದಲ್ಲಿನ ಭವಿಷ್ಯದ ನವೀಕರಿಸಬಹುದಾದ ಉಪಕ್ರಮಗಳಿಗೆ ಸಿದ್ಧತೆ ನಡೆಸಲು ಸಹಕಾರಿಯಾಗಲಿದೆ,” ಎಂದು ಸಿಇಒ ಶಾಹಿದ್ ಹಸನ್ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ ಖಾದರ್, ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ, ಕರ್ನಾಟಕ ಅಲೈಡ್ ಆ್ಯಂಡ್ ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷರಾದ ಡಾ. ಯು.ಟಿ. ಇಫ್ತಿಕಾರ್, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ಮ್ಯಾನೇಜಿಂಗ್ ಡೈರೆಕ್ಟರ್ ENERGIA ಮುಈನ್ ಶೇಖ್, ನ್ಯೂ ಜುಮಾ ಮಸೀದಿ ಅಧ್ಯಕ್ಷರಾದ ಷರೀಫ್ ವೈಟ್‌ಸ್ಟೋನ್, ಟೀಮ್ ಬಿ–ಹ್ಯೂಮನ್ ಸಂಸ್ಥಾಪಕ ಆಸಿಫ್ ಡೀಲ್, ಡಾ. ಹಾರೂನ್ ಹುಸೇನ್ ಮತ್ತಿತರರು ಉಪಸ್ಥಿತರಿದ್ದರು.






