ವಾರ್ತಾಭಾರತಿ ಹೆಸರಲ್ಲಿ ಸುಳ್ಳು ಸುದ್ದಿ ವೈರಲ್: ಎಫ್ ಐ ಆರ್ ದಾಖಲು

ಮಂಗಳೂರು, ಫೆ.6: ವಾರ್ತಾಭಾರತಿ ಫೇಸ್ ಬುಕ್ ಪೇಜ್ ನಲ್ಲಿ ಪ್ರಕಟವಾದ ಸುದ್ದಿಯ ಪೋಸ್ಟರ್ ಅನ್ನು ತಿರುಚಿ ಸುಳ್ಳು ಸುದ್ದಿ ಹರಡುತ್ತಿರುವ ಕುರಿತು ದೂರು ದಾಖಲಿಸಿದ್ದು ಮಂಗಳೂರು ದಕ್ಷಿಣ ಠಾಣೆಯಲ್ಲಿ ಗುರುವಾರ ಎಫ್ ಐ ಆರ್ ದಾಖಲಾಗಿದೆ.
ಜನವರಿ 21, 2024ರಂದು ವಾರ್ತಾಭಾರತಿ ಫೇಸ್ ಬುಕ್ ಪೇಜ್ ನಲ್ಲಿ "ನಮ್ಮನ್ನು ಕೆಣಕಿದರೆ ಸುಟ್ಟು ಹೋಗುತ್ತೀರಿ, ಬಿಜೆಪಿ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ " ಎಂಬ ವಾರ್ತಾಭಾರತಿ ವೆಬ್ ಸೈಟ್ ನಲ್ಲಿ ಸುದ್ದಿ ಹಾಗು ಪೋಸ್ಟರ್ ಪ್ರಕಟವಾಗಿತ್ತು. ಅದೇ ಪೋಸ್ಟರ್ ಅನ್ನು ತಿರುಚಿರುವ ಕಿಡಿಗೇಡಿಗಳು "ಹಂದಿ ತಿಂದ ನಂತರ ಬೆಕ್ಕು ಹಜ್ ಯಾತ್ರೆಗೆ ಹೋಯ್ತು , ವಿವಾದಾತ್ಮಕ ಹೇಳಿಕೆ ಕೊಟ್ಟ ಮಲ್ಲಿಕಾರ್ಜುನ ಖರ್ಗೆ" ಎಂಬ ಶೀರ್ಷಿಕೆ ಕೊಟ್ಟು ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ. ಈ ರೀತಿ ಮಲ್ಲಿಕಾರ್ಜುನ ಖರ್ಗೆಯವರು ಹೇಳಿಕೆ ಕೊಟ್ಟಿಲ್ಲ. ವಾರ್ತಾಭಾರತಿ ಇಂತಹ ಶೀರ್ಷಿಕೆಯ ಯಾವುದೇ ಸುದ್ದಿಯನ್ನು ಪ್ರಕಟಿಸಿರಲಿಲ್ಲ.
ನಕಲಿ ಸುದ್ದಿಯ ಪೋಸ್ಟರ್ ವಾರ್ತಾಭಾರತಿ ಹೆಸರಲ್ಲಿ ವೈರಲ್ ಆಗುತ್ತಿರುವುದನ್ನು ಗಮನಿಸಿದ ವಾರ್ತಾಭಾರತಿ ಮಂಗಳೂರು ದಕ್ಷಿಣ ಠಾಣೆಯಲ್ಲಿ ದೂರು ದಾಖಲಿಸಿತ್ತು. ಗುರುವಾರ ಪ್ರಕರಣದ ಎಫ್ ಐ ಆರ್ ದಾಖಲಾಗಿ ತನಿಖೆ ಶುರುವಾಗಿದೆ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ
► https://whatsapp.com/channel/0029VaA8ju86LwHn9OQpEq28





