ಫಾದರ್ ಬ್ಯಾಪ್ಟಿಸ್ಟ್ ಮಿನೇಜಸ್‌ಗೆ ಅಂತಿಮ ನಮನ

ಮಂಗಳೂರು : ಬುಧವಾರ ನಿಧನರಾದ ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಗಳ ಆಡಳಿತ ಮಂಡಳಿಯ ಮಾಜಿ ನಿರ್ದೇಶಕ ಅತಿ ವಂದನೀಯ ಫಾ.ಮೊನ್ಸಿಂಜರ್ ಬ್ಯಾಪ್ಟಿಸ್ಟ್ ಮಿನೇಜಸ್ ಅವರಿಗೆ ಫಾದರ್ ಮುಲ್ಲರ್ ಸಂಸ್ಥೆಯಲ್ಲಿ ಅಂತಿಮ ನಮನ ಸಲ್ಲಿಸಲಾಯಿತು.
ಫಾದರ್ ಮುಲ್ಲರ್ ಸಮೂಹ ಸಂಸ್ಥೆಗಳ ನಿರ್ದೇಶಕ ಫಾ. ರಿಚರ್ಡ್ ಅಲೋಶಿಯಸ್ ಕೊಯೆಲ್ಹೊ , ಫಾದರ್ ಮುಲ್ಲರ್ ಆಡಳಿತ ಮಂಡಳಿಯ ಧರ್ಮಗುರುಗಳೊಂದಿಗೆ ಹಾಗೂ ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಬಿಷಪ್ ಅತಿ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ, ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ರೆ.ಫಾ. ಪ್ರಕಾಶ್ ಡಿಸೋಜ ನೇತೃತ್ವದಲ್ಲಿ ಬಲಿಪೂಜೆಯನ್ನು ನೆರವೇರಿಸಲಾಯಿತು.
ಈ ಸಂದರ್ಭ ಪ್ರವಚನ ನೀಡಿದ ವಂದನೀಯ ಫಾ. ಅಜಿತ್ ಬಿ.ಮಿನೇಜಸ್, ಅವರು ಅಗಲಿದ ಫಾದರ್ ಬ್ಯಾಪ್ಟಿಸ್ಟ್ ಮಿನೇಜಸ್ ಅವರು ಸಂಸ್ಥೆಗಳಲ್ಲಿ ಅನೇಕ ಕೆಲಸಕಾರ್ಯಗಳನ್ನು ನಡೆಸಿದರು. ಆಧುನಿಕ ಮೂಲಸೌಕರ್ಯ ಮತ್ತು ಆರೋಗ್ಯ ಶಿಕ್ಷಣದ ಮೂಲಕ ಆರೋಗ್ಯ ರಕ್ಷಣೆಗೆ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಒದಗಿಸುವಲ್ಲಿ ಶ್ರಮಿಸಿದರು ಎಂದರು.
ವಂ. ಫಾ. ರಿಚರ್ಡ್ ಕೊಯೆಲ್ಹೋ ಅವರು ದಿವಂಗತ ಫಾ. ಬ್ಯಾಪ್ಟಿಸ್ಟ್ ಅವರೊಂದಿಗಿನ ಒಡನಾಟವನ್ನು ಮತ್ತು ಅವರು ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಿಕೊಂಡು ನುಡಿನಮನ ಸಲ್ಲಿಸಿದರು.
ವಿಶ್ರಾಂತ ಬಿಷಪ್ ಅತಿ ವಂ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು. ರೆ.ಫಾ ಬ್ಯಾಪ್ಟಿಸ್ಟ್ ರವರ ಅವಧಿಯಲ್ಲಿ ಕೆಲಸ ಮಾಡಿದ ಸಂಸ್ಥೆಯ ಅನೇಕ ಅಧ್ಯಾಪಕರು ಮತ್ತು ಸಿಬ್ಬಂದಿ ಹಾಜರಿದ್ದರು.
ಈ ಸಂದರ್ಭದಲ್ಲಿ ಫಾದರ್ ಮುಲ್ಲರ್ ಹೋಮಿಯೋಪತಿ ಆಸ್ಪತ್ರೆಯ ಆಡಳಿತ ಅಧಿಕಾರಿ ವಂದನೀಯ ಫಾ.ರೋಶನ್ ಕ್ರಾಸ್ತಾ, ತುಂಬೆ ಫಾದರ್ ಮುಲ್ಲರ್ ಚಾರಿಟೇಬಲ್ ಆಸ್ಪತ್ರೆಯ ಅಡಳಿತಾಧಿಕಾರಿ ಫಾ.ವಿನ್ಸೆಂಟ್ ಡಿಸೋಜ, ಫಾ.ಜೀವನ್ ಸಿಕ್ವೇರಾ, ಫಾ. ನೆಲ್ಸನ್ ಪೈಸ್ ಮುಂತಾದವರು ಉಪಸ್ಥಿತರಿದ್ದರು.







