'ಚಲೋ ಬೆಳ್ತಂಗಡಿ'ಗೆ ದ.ಕ. ಜಿಲ್ಲಾ ವಿಮೆನ್ ಇಂಡಿಯಾ ಮೂವ್ ಮೆಂಟ್ ಬೆಂಬಲ
For 'Chalo Belthangadi' D.K. District Women India Movement support

ಮಂಗಳೂರು, ಆ.24: ಸೌಜನ್ಯಾ ಅತ್ಯಾಚಾರ -ಹತ್ಯೆ ಪ್ರಕರಣದ ಮರುತನಿಖೆಗೆ ಒತ್ತಾಯಿಸಿ ಆ.28ರಂದು ಬೆಳ್ತಂಗಡಿಯಲ್ಲಿ ನಡೆಯಲಿರುವ ವಿವಿಧ ಸಂಘಟನೆಗಳ ರಾಜ್ಯಮಟ್ಟದ ಸಾಮೂಹಿಕ ಪ್ರತಿಭಟನೆ ಮತ್ತು 'ಚಲೋ ಬೆಳ್ತಂಗಡಿ'ಗೆ ದ.ಕ. ಜಿಲ್ಲಾ ವಿಮೆನ್ ಇಂಡಿಯಾ ಮೂವ್ ಮೆಂಟ್ ಅಧ್ಯಕ್ಷೆ ನೌರಿನಾ ಆಲಂಪಾಡಿ ಬೆಂಬಲ ಸೂಚಿಸಿದ್ದಾರೆ.
ಸೌಜನ್ಯಾ ಪ್ರಕರಣದಲ್ಲಿ ಸೌಜನ್ಯರ ಕುಟುಂಬ ಮತ್ತು ರಾಜ್ಯದ ಜನತೆ ಸಮರ್ಪಕ ನ್ಯಾಯದ ನಿರೀಕ್ಷೆಯಲ್ಲಿದೆ. ಹಾಗಾಗಿ, ಜನಾಭಿಪ್ರಾಯ ರೂಢಿಯಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ವಿಮೆನ್ ಇಂಡಿಯಾ ಮೂವ್ ಮೆಂಟ್(WIM) ಕೂಡಾ ಬೆಂಬಲ ಘೋಷಿಸಿದೆ. ಬೆಳ್ತಂಗಡಿಯಲ್ಲಿ ಆ.28ರಂದು ನಡೆಯುವ ಚಲೋ ಬೆಳ್ತಂಗಡಿ ಕಾರ್ಯಕ್ರಮದಲ್ಲಿ ಮಹಿಳಾ ಹೋರಾಟಗಾರರು, ಚಿಂತಕರು, ನಾಡಿನ ಸಾಹಿತಿಗಳು ನಾಗರಿಕರು ಭಾಗವಹಿಸಲಿದ್ದಾರೆ. ಈಗಾಗಲೇ ಸೌಜನ್ಯ ಕುಟುಂಬ ಮತ್ತು ಸೌಜನ್ಯ ಪರ ಹೋರಾಟಗಾರರಿಗೆ ಬೆಂಬಲ ಸೂಚಿಸಿದ್ದಾರೆ.
ಸೌಜನ್ಯ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ನ್ಯಾಯಾಲಯ ಸರಿಯಾದ ರೀತಿಯಲ್ಲಿ ತನಿಖೆ ನಡೆಸುವಂತೆ ಆದೇಶಿಸಬೇಕು. ತಪ್ಪಿತಸ್ಥರಿಗೆ ಕೂಡಲೇ ಶಿಕ್ಷೆ ಆಗಬೇಕು. ಯಾವುದೇ ರಾಜಕೀಯ ಪ್ರಭಾವಕ್ಕೂ ಬಲಿಯಾಗದಂತೆ ತನಿಖೆ ಮಾಡಬೇಕು. ಅಪರಾಧಿಗಳನ್ನು ಪತ್ತೆ ಮಾಡಿ ಶಿಕ್ಷಿಸುವುದು ಸರ್ಕಾರದ ಆದ್ಯ ಕರ್ತವ್ಯ. ಈ ಕರ್ತವ್ಯ ನಿಭಾಯಿಸದೆ ಹೋದರೆ ಸಮಾಜದಲ್ಲಿ ಅರಾಜಕತೆ ಸೃಷ್ಟಿಯಾಗಲಿದೆ, ಸೌಜನ್ಯಾ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.







