ಕರಾವಳಿ ಭಾಗದ ಅಭಿವೃದ್ಧಿಗೆ ಸರಕಾರ ಬದ್ಧ: ಸಚಿವ ಪ್ರಿಯಾಂಕ್ ಖರ್ಗೆ

ಮಂಗಳೂರು, ನ.25: ರಾಜ್ಯದ ಆರ್ಥಿಕ ಬೆಳವಣಿಗೆಯನ್ನು ಕೇವಲ ಬೆಂಗಳೂರಿಗೆ ಸೀಮಿತಗೊಳಿಸದೆ, ಎರಡನೇ ಹಂತದ ನಗರಗಳಿಗೂ ವಿಸ್ತರಿಸುವ ‘ಬಿಯಾಂಡ್ ಬೆಂಗಳೂರು’ ನೀತಿಯಡಿ ಕರಾವಳಿ ಭಾಗದ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ ಎಂದು ಗೃಹ, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮಂಗಳೂರಿನ ಕೊಟ್ಟಾರ ಚೌಕಿ ಬಳಿ ಬುಧವಾರ ಡೆಲಾಯ್ಟ್ ಇಂಡಿಯಾದ ನೂತನ ಕಚೇರಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಬೆಂಗಳೂರು ನಂತರ ಕರ್ನಾಟಕದ ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಎರಡನೇ ಅತಿ ಹೆಚ್ಚು ಕೊಡುಗೆ ನೀಡುವ ಜಿಲ್ಲೆಯಾಗಿ ದಕ್ಷಿಣ ಕನ್ನಡ ಗುರುತಿಸಿಕೊಂಡಿದೆ. ಎಂದರು.
ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಜಿಲ್ಲೆಯ ಕೊಡುಗೆ ಶೇ. 5.3ರಷ್ಟಿದೆ. ಈ ಆರ್ಥಿಕ ಶಕ್ತಿ, ಈ ಭಾಗದ ಪ್ರತಿಭಾ ನ್ವಿತ ಮಾನವ ಸಂಪನ್ಮೂಲ, ಶೈಕ್ಷಣಿಕ ಸಂಸ್ಥೆಗಳು ಹಾಗೂ ಉತ್ತಮ ಜೀವನಮಟ್ಟದೊಂದಿಗೆ ಮಂಗಳೂರು, ಕರ್ನಾಟಕದ ಮುಂದಿನ ಹಂತದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.
ಮಂಗಳೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಇತ್ತೀಚೆಗೆ ನಡೆದ ಕರ್ನಾಟಕ ಸಚಿವ ಸಂಪುಟ ಸಭೆಯನ್ನು ಉಲ್ಲೇಖಿಸಿದ ಅವರು, ಈ ಭಾಗದ ಪ್ರಮುಖ ಬೆಳವಣಿಗೆಯ ಅವಕಾಶಗಳನ್ನು ಗುರುತಿಸಲಾಗಿದ್ದು, ಪ್ರದೇಶದ ಅಭಿವೃದ್ಧಿಗಾಗಿ ಸುಮಾರು ರೂ. 6,000 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.
‘‘ಕರ್ನಾಟಕದ ಪ್ರಮುಖ ಆರ್ಥಿಕ ಬೆಳವಣಿಗೆಯ ಕೇಂದ್ರವಾಗಿ ಹೊರಹೊಮ್ಮುವ ಅಪಾರ ಸಾಮರ್ಥ್ಯ ಮಂಗಳೂರಿ ಗಿದೆ. ಬಿಯಾಂಡ್ ಬೆಂಗಳೂರು ಮೂಲಕ ಪ್ರತಿಭೆಗಳು ಈಗಾಗಲೇ ಇರುವ ಪ್ರದೇಶಗಳಿಗೆ ಅವಕಾಶಗಳನ್ನು ಕೊಂಡೊಯ್ಯುವುದು ನಮ್ಮ ಉದ್ದೇಶವೇ ಹೊರತು, ಪ್ರತಿಭೆಗಳು ಬೆಂಗಳೂರಿಗೆ ಬರಬೇಕೆಂದು ನಿರೀಕ್ಷಿಸುವುದಲ್ಲ. ನಮ್ಮ ಪ್ರಾದೇಶಿಕ ನಗರಗಳಲ್ಲಿರುವ ಸಾಮರ್ಥ್ಯವನ್ನು ಉದ್ಯಮಗಳು ಗುರುತಿಸಿ, ಸದೃಢ ಆರ್ಥಿಕ ವ್ಯವಸ್ಥೆಗಳನ್ನು ನಿರ್ಮಿಸುವಲ್ಲಿ ನಮ್ಮ್ಮೊಂದಿಗೆ ಕೈಜೋಡಿಸಬೇಕು’’ ಎಂದು ಸಚಿವರು ಹೇಳಿದರು.
ಮಂಗಳೂರಿನಲ್ಲಿ ತನ್ನ ಕಚೇರಿಯನ್ನು ಸ್ಥಾಪಿಸುವ ಡೆಲಾಯ್ಟ್ ಸಂಸ್ಥೆಯ ನಿರ್ಧಾರವನ್ನು ಶ್ಲಾಘಿಸಿದ ಖರ್ಗೆ, ಈ ಹೂಡಿಕೆಯು ಸರ್ಕಾರದ ಬಿಯಾಂಡ್ ಬೆಂಗಳೂರು ದೃಷ್ಟಿಕೋನದಡಿ ಉತ್ತೇಜಿಸಲು ಬಯಸುತ್ತಿರುವ ಉದ್ಯಮ ವಲಯದ ಪಾಲ್ಗೊಳ್ಳುವಿಕೆಗೆ ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು.
‘‘ಈ ಕಾರ್ಯ ಸಾಕಾರಗೊಳ್ಳಲು ವಿಶೇಷವಾಗಿ ಶ್ರಮಿಸಿದ ಡೆಲಾಯ್ಟ್ ಸೌತ್ ಏಷ್ಯಾದ ಸಿಇಒ ರೋಮಲ್ ಶೆಟ್ಟಿ ಮತ್ತು ಅವರ ಇಡೀ ತಂಡವನ್ನು ನಾನು ಅಭಿನಂದಿಸಲು ಬಯಸುತ್ತೇನೆ. ಸರ್ಕಾರದ ಬಿಯಾಂಡ್ ಬೆಂಗಳೂರು ನೀತಿ ಉತ್ತೇಜಿಸಲು ಬಯಸುತ್ತಿರುವ ಉದ್ಯಮ ಸಹಭಾಗಿತ್ವ ಮತ್ತು ಬದ್ಧತೆ ಇದೇ ರೀತಿಯದ್ದಾಗಿದೆ. ಮಂಗಳೂರಿ ನಲ್ಲಿ ಅಪಾರ ಸಾಮರ್ಥ್ಯವಿದೆ ಎಂದು ನಾನು ಭಾವಿಸುತ್ತೇನೆ. ಇಂತಹ ಉಪಕ್ರಮಗಳು ಈ ಭಾಗದ ಅವಕಾಶ ಗಳನ್ನು ಅನಾವರಣಗೊಳಿಸಲು ನೆರವಾಗಲಿವೆ ಎಂದು ಅವರು ಹೇಳಿದರು.
ಸ್ಥಳೀಯ ಪ್ರತಿಭೆಗಳಿಗೆ ಸ್ಥಳೀಯವಾಗಿಯೇ ಉದ್ಯೋಗ: ಬೆಂಗಳೂರಿನಲ್ಲಿರುವ ಒಟ್ಟು ಐಟಿ ಪ್ರತಿಭೆಗಳ ಪೈಕಿ ಶೇ. 15ರಷ್ಟು ಮಂದಿ ಕರಾವಳಿ ಹಾಗೂ ಮಂಗಳೂರು ಮೂಲದವರು. ‘ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ’ ಅಡಿಯಲ್ಲಿ ಸುಮಾರು 35 ಕೋಟಿ ಹೂಡಿಕೆಯೊಂದಿಗೆ ಸ್ಥಳೀಯ ಕ್ಲಸ್ಟರ್ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕೇವಲ ಕಂಪನಿಗಳನ್ನು ಆಹ್ವಾನಿಸುವುದಷ್ಟೇ ಅಲ್ಲ, ಇಲ್ಲಿನ ವಿದ್ಯಾರ್ಥಿಗಳಿಗೆ ‘ಡೆಲಾಯ್ಟ್’ನಂತಹ ಜಾಗತಿಕ ಕಂಪನಿಗಳ ಅಗತ್ಯಕ್ಕೆ ತಕ್ಕಂತೆ ಕೌಶಲ್ಯ ತರಬೇತಿ ನೀಡಿ, ಮಂಗಳೂರಿನಲ್ಲೇ ಉದ್ಯೋಗ ಸಿಗುವಂತೆ ಮಾಡುವುದು ನಮ್ಮ ಗುರಿಯಾಗಿದೆ ಎಂದರು.
‘‘ಕರ್ನಾಟಕದ ಮುಂದಿನ ಹಂತದ ಬೆಳವಣಿಗೆ ನಮ್ಮ ಪ್ರಾದೇಶಿಕ ನಗರಗಳಿಂದ ಬರಬೇಕು. ಬೆಂಗಳೂರಿನ ಆಚೆಗೂ ಇರುವ ಅವಕಾಶಗಳನ್ನು ಉದ್ಯಮಗಳು ಗುರುತಿಸಿ, ರಾಜ್ಯದಾದ್ಯಂತ ಸದೃಢ ಮತ್ತು ಸುಸ್ಥಿರ ಆರ್ಥಿಕ ವ್ಯವಸ್ಥೆ ಗಳನ್ನು ನಿರ್ಮಿಸುವಲ್ಲಿ ನಮ್ಮೊಂದಿಗೆ ಕೈಜೋಡಿಸಬೇಕು ಎಂಬುದು ನಮ್ಮ ಆಶಯ,’’ ಎಂದು ಅವರು ಹೇಳಿದರು.
*ಬಯೋಟೆಕ್ ಮತ್ತು ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ:ಮಂಗಳೂರು ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಪ್ರಮುಖ ಕೇಂದ್ರವಾಗಿರುವುದರಿಂದ ಇಲ್ಲಿ ಜೈವಿಕ ತಂತ್ರಜ್ಞಾನ ಮತ್ತು ಹೆಲ್ತ್ ಸೈನ್ಸಸ್ ಕ್ಷೇತ್ರಗಳಲ್ಲಿ ಸಂಶೋಧನೆ ಹಾಗೂ ಉತ್ಪಾದನೆಗೆ ವಿಶೇಷ ವಲಯಗಳನ್ನು ಸ್ಥಾಪಿಸಲಾಗುವುದು. ಇದರಿಂದ ಮೌಲ್ಯವರ್ಧಿತ ಉದ್ಯಮಗಳು ಈ ಭಾಗದಲ್ಲಿ ಬೆಳೆಯಲಿವೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ನವೋದ್ಯಮಗಳಿಗೆ 1 ಕೋಟಿ ಅನುದಾನ : ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ‘ಎಲಿವೇಟ್’ ಯೋಜನೆಯಡಿ ನವೋದ್ಯಮಗಳಿಗೆಯಾವುದೇ ಷೇರು ಪಾಲುದಾರಿಕೆ ಇಲ್ಲದೆ ರೂ.1 ಕೋಟಿವರೆಗೆ ಅನುದಾನ ನೀಡಲಾಗುತ್ತಿದೆ. ಅಲ್ಲದೆ, ಸರ್ಕಾರಿ ಸೇವೆಗಳಲ್ಲಿನ ಸಮಸ್ಯೆಗಳಿಗೆ ತಂತ್ರಜ್ಞಾನದ ಪರಿಹಾರ ನೀಡುವ ಸ್ಟಾರ್ಟ್ಅಪ್ಗಳಿಗೆ ‘ರೆಗ್ಯುಲೇಟರಿ ಸ್ಯಾಂಡ್ಬಾಕ್ಸ್ ಮೂಲಕ ಪ್ರಾಯೋಗಿಕ ಅವಕಾಶ ನೀಡಲಾಗುತ್ತಿದ್ದು, ಈಗಾಗಲೇ 16 ನವೋದ್ಯಮ ಗಳು ಇದರಲ್ಲಿ ತೊಡಗಿಸಿಕೊಂಡಿವೆ. ಮುಂದಿನ ದಿನಗಳಲ್ಲಿ ಇದನ್ನು 100ಕ್ಕೆ ವಿಸ್ತರಿಸಲಾಗುವುದು ಎಂದು ಮಾಹಿತಿ ನೀಡಿದರು.
ಡೆಲಾಯ್ಟ್ ಸೌತ್ ಏಷ್ಯಾದ ಸಿಇಒ ರೋಮಲ್ ಶೆಟ್ಟಿ , ದ.ಕ. ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರ್ವಡೆ ವಿನಾಯ ಕಾರ್ಬರಿ, ಮನಪಾ ಆಯುಕ್ತ ರಾಹುಲ್ ರತ್ನಂ ಪಾಂಡೆ ಮತ್ತಿತರರು. ಉಪಸ್ಥಿತರಿದ್ದರು.
ಮಂಗಳೂರಿನಲ್ಲಿ ಡೆಲಾಯ್ಟ್ನ ಕಚೇರಿ ಆರಂಭ
ಜಾಗತಿಕ ವೃತ್ತಿಪರ ಸೇವಾ ಸಂಸ್ಥೆಯಾದ ಡೆಲಾಯ್ಟ್ನ ಕಚೇರಿ ಮಂಗಳೂರಿನಲ್ಲಿ ಆರಂಭವಾಗಿದ್ದು, ಇದು ಭಾರತದ ಡೆಲಾಯ್ಟ್ನ 27ನೇ ಕಚೇರಿಯಾಗಿದೆ ಮತ್ತು ಬೆಂಗಳೂರಿನ ಹೊರಗೆ ಎರಡನೇ ಕಚೇರಿಯಾಗಿದೆ ಎಂದು ಡೆಲಾಯ್ಟ್ ಸೌತ್ ಏಷ್ಯಾದ ಸಿಇಒ ರೋಮಲ್ ಶೆಟ್ಟಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಡೆಲಾಯ್ಟ್ ಕಚೇರಿಯ ಉದ್ಘಾಟನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆರಂಭದಲ್ಲಿ ಈ ಕಚೇರಿಯಲ್ಲಿ 250 ವೃತ್ತಿಪರರು ಕಾರ್ಯನಿರ್ವಹಿಸಲಿದ್ದು, ಹಂತಹಂತವಾಗಿ ಉದ್ಯೋಗಿಗಳ ಸಂಖ್ಯೆಯನ್ನು 1,000ಕ್ಕೂ ಹೆಚ್ಚಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ ಎಂದು ಮಾಹಿತಿ ನೀಡಿದರು.
ಇದು ಸಮಗ್ರ ಸಾಮರ್ಥ್ಯ ಮತ್ತು ವಿತರಣಾ ಕೇಂದ್ರವಾಗಿ ಕಾರ್ಯನಿರ್ವಹಿಸಲಿದ್ದು, ಸ್ಥಳೀಯ ಪ್ರತಿಭಾವಂತರನ್ನು ಡೆಲಾಯ್ಟ್ ಇಂಡಿಯಾದ ರಾಷ್ಟ್ರೀಯ ಮತ್ತು ಜಾಗತಿಕ ಗ್ರಾಹಕ ಜಾಲದ ಅವಕಾಶಗಳೊಂದಿಗೆ ಬೆಸೆಯಲಿದೆ. ವಿವಿಧ ವಲಯಗಳಲ್ಲಿ ಹೆಚ್ಚುತ್ತಿರುವ ಡೆಲಾಯ್ಟ್ ಇಂಡಿಯಾದ ಗ್ರಾಹಕರ ಅಗತ್ಯಗಳನು ಪೂರೈಸಲು ಈ ಹೊಸ ಕಚೇರಿಯು ತಂತ್ರಜ್ಞಾನ, ಕೃತಕಬುದ್ಧಿಮತ್ತೆ (ಎಐ), ಡೇಟಾ ಮತು ್ತಅನಾಲಿಟಿಕ್ಸ್, ಸೈಬರ್ ಸೆಕ್ಯುರಿಟಿ, ಕನ್ಸಲ್ಟಿಂಗ್, ತೆರಿಗೆ, ರಿಸ್ಕ್ ಅಡ್ವೈಸರಿ ಮತ್ತು ಇತರ ಉದಯೋನ್ಮುಖ ಕ್ಷೇತ್ರಗಳಲ್ಲಿ ಕೆಲಸ ಮಾಡುವ ವೃತ್ತಿಪರರಿಗೆ ವೇದಿಕೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿಭಾವಂತರ ಬಳಿಗೆ ಉದ್ಯೋಗಾವಕಾಶ: ಡೆಲಾಯ್ಟ್ ಇಂಡಿಯಾದ ಬೆಳವಣಿಗೆಗೆ ಅಸಾಧಾರಣ ಪ್ರತಿಭೆಗಳೇ ಶಕ್ತಿಯಾಗಿವೆ. ಪ್ರತಿಭೆಗಳು ಎಲ್ಲಿವೆಯೋ ಅಲ್ಲಿಯೇ ಅವಕಾಶಗಳನ್ನು ಸೃಷ್ಟಿಸುವ ಮಾರ್ಗಗಳನ್ನು ನಾವು ನಿರಂತರವಾಗಿ ಅನ್ವೇಷಿಸುತ್ತಿದ್ದೇವೆ, ನನ್ನ ಮಟ್ಟಿಗೆ ಮಂಗಳೂರಿನಲ್ಲಿ ಕಚೇರಿ ಆರಂಭಿಸುತ್ತಿರುವುದು ವಿಶೇಷ ಅರ್ಥವನ್ನು ಹೊಂದಿದೆ. ನನ್ನ ಕುಟುಂಬದ ಮೂಲ ಕರಾವಳಿ ಕರ್ನಾಟಕವಾಗಿದ್ದು, ಇದು ನನಗೆ ತವರಿಗೆ ಮರಳಿದಂತಹ ಅನುಭವ ನೀಡುತ್ತಿದೆ ಎಂದರು.
ಭಾರತ ಅಭಿವೃದ್ಧಿ ಹೊಂದಬೇಕಾದರೆ ಕೇವಲ 10 ಮೆಟ್ರೋ ನಗರಗಳು ಬೆಳೆದರೆ ಸಾಲದು, ಕನಿಷ್ಠ 100 ನಗರ ಗಳು ಪ್ರಮುಖ ಆರ್ಥಿಕ ಕೇಂದ್ರಗಳಾಗಿ ಬೆಳೆಯಬೇಕು. ದಕ್ಷಿಣ ಕನ್ನಡದ ಸಂಸದ ಬ್ರಿಜೇಶ್ ಚೌಟ ಹಾಗೂ ಕರ್ನಾಟಕ ಸರಕಾರ ಬೆಂಬಲದಿಂದ ಅತಿ ವೇಗವಾಗಿ ಮಂಗಳೂರಿನಲ್ಲಿ ಕಚೇರಿ ಆರಂಭಿಸಲು ಸಾಧ್ಯವಾಯಿತು. ನಮ್ಮ ಆಗಮನದಿಂದ ಇತರ ಜಾಗತಿಕ ಕಂಪನಿಗಳೂ ಮಂಗಳೂರಿನತ್ತ ಮುಖ ಮಾಡಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳೂರು ಮೊದಲಿನಿಂದಲೂ ತನ್ನ ಬಲಿಷ್ಠ ಶಿಕ್ಷಣಸಂಸ್ಥೆಗಳು, ಉದ್ಯಮಶೀಲತಾ ಮನೋಭಾವ ಮತ್ತು ಪ್ರತಿಭಾವಂತ ವೃತ್ತಿಪರರಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಅನೇಕರು ಉದ್ಯೋಗಾವಕಾಶಗಳನ್ನು ಅರಸಿ ಸಾಂಪ್ರದಾಯಿಕವಾಗಿ ದೊಡ್ಡ ನಗರಗಳಿಗೆ ವಲಸೆಹೋಗುತ್ತಿದ್ದರು. ಇಲ್ಲಿ ಗಮನಾರ್ಹ ಅಸ್ತಿತ್ವವನ್ನು ಸ್ಥಾಪಿಸುವ ಮೂಲಕ, ನಾವು ವಿಶ್ವದರ್ಜೆಯ ವೃತ್ತಿಜೀವನದ ಅವಕಾಶಗಳನ್ನು ಅವರ ಮನೆ ಬಾಗಿಲಿಗೆ ತರುತ್ತಿದ್ದೇವೆ. ಇದರಿಂದ ಪ್ರತಿಭಾವಂತರು ತಮ್ಮ ಕುಟುಂಬ ಮತ್ತು ಸಮುದಾಯದೊಂದಿಗೆ ಬೆರೆತುಕೊಂಡೇ ಭಾರತ ಮತ್ತು ಪ್ರಪಂಚದಾ ದ್ಯಂತದ ಗ್ರಾಹಕರಿಗಾಗಿ ಪರಿಣಾಮಕಾರಿ ಯೋಜನೆಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪ್ರತಿಭೆಯ ಬುನಾದಿಯ ಮೇಲೆ ನಿರ್ಮಾಣವಾದ ಕಾರ್ಯತಂತ್ರದ ತಾಣ ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಹಲವಾರು ಇಂಜಿನಿಯರಿಂಗ್ ಮತ್ತು ವೃತ್ತಿಪರ ಕಾಲೇಜುಗಳ ಬಲಿಷ್ಠ ವ್ಯವಸ್ಥೆಯ ಬೆಂಬಲದೊಂದಿಗೆ, ಮಂಗಳೂರು ಭಾರತದ ಅತ್ಯಂತ ಭರವಸೆಯ ಪ್ರತಿಭಾ ಕೇಂದ್ರಗಲ್ಲಿ ಒಂದಾಗಿ ಹೊರಹೊಮ್ಮಿದೆ. ಈ ಪ್ರದೇಶವು ಪ್ರತಿವರ್ಷ ಅನೇಕ ಪದವೀಧರರನ್ನು ರೂಪಿಸುತ್ತಿದ್ದು, ತಂತ್ರಜ್ಞಾನ ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳ ಹೂಡಿಕೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸುತ್ತಿದೆ.
ಈ ನಗರವು ಬಲಿಷ್ಠ ಮೂಲಸೌಕರ್ಯ ಮತ್ತು ಬೆಳೆಯುತ್ತಿರುವ ಡಿಜಿಟಲ್ ಹಾಗೂ ತಂತ್ರಜ್ಞಾನ ವ್ಯವಸ್ಥೆಯನ್ನು ಸಹ ಹೊಂದಿದೆ ಎಂದು ನುಡಿದರು.






