ಪ್ರವಾಸೋದ್ಯಮ ಹೂಡಿಕೆದಾರರಿಗೆ ಎಲ್ಲ ರೀತಿಯ ಸಹಕಾರ ನೀಡಲು ಸರಕಾರ ಬದ್ಧ: ಸಿಎಂ ಸಿದ್ದರಾಮಯ್ಯ

ಮಂಗಳೂರು: ನಮ್ಮದು ನುಡಿದಂತೆ ನಡೆದ ಸರಕಾರ. ಏನು ಭರವಸೆ ಕೊಡುತ್ತೇವೊ ಅವುಗಳನ್ನು ಅನುಷ್ಠಾನ ಮಾಡುತ್ತೇವೆ. ಪ್ರವಾಸೋದ್ಯಮಕ್ಕೆ ಸೂಕ್ತ ಸ್ಥಳವಾದ ಕರಾವಳಿಯಲ್ಲಿ ಪ್ರವಾಸೋದ್ಯಮದಲ್ಲಿ ಹೂಡಿಕೆ ಮಾಡಲು ಮುಂದೆ ಬರುವ ಉದ್ಯಮೆದಾರರಿಗೆ ನಮ್ಮ ಸರಕಾರ ನೆರವು , ಪ್ರೋತ್ಸಾಹ ನೀಡಲಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಂಗಳೂರು ಅತ್ತಾವರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ನಡೆದ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶದ ಸಮಾರೋಪ ಭಾಷಣ ಮಾಡಿದರು.
ಪ್ರವಾಸೋದ್ಯಮಕ್ಕೆ ಎಲ್ಲ ರೀತಿಯ ಸಹಕಾರವನ್ನು ನಮ್ಮ ಸರಕಾರ ಪ್ರೋತ್ಸಾಹ ಕೊಡುತ್ತಿದೆ. ಮುಂದೆಯೂ ಕೊಡುತ್ತದೆ ಎಂದು ಸ್ಪಷ್ಟಪಡಿಸಿದರು.
*ಕರಾವಳಿಯ ಜನರು ಸಾಹಸ ಪ್ರವೃತ್ತಿಯವರು. ದೇಶ ವಿದೇಶಗಳಲ್ಲಿ ಹೋಗಿ ಉದ್ಯಮದಲ್ಲಿ ಯಶಸ್ಸು ಸಾಧಿಸಿ ದ್ದಾರೆ ಎಂದು ಶ್ಲಾಘಿಸಿದ ಸಿದ್ದರಾಮಯ್ಯ ನಾವು ಪ್ರವಾಸೋದ್ಯಮದಲ್ಲಿ ಮುಂದೆ ಇದ್ದೇವೆ. ಕೇರಳ ಶಿಕ್ಷಣ ಮತ್ತು ಪ್ರವಾಸೋದ್ಯಮದಲ್ಲಿಯೂ ಮುಂದೆ ಇದೆ. ನಾವು ಕೇರಳವನ್ನು ಹಿಂದಿಕ್ಕಿ ಮುಂದುವರಿಯಬೇಕಿದೆ. ಕೇರಳಕ್ಕಿಂತ ಯಾವುದೇ ಕೊರತೆ ಇಲ್ಲ. ಆದರೆ ನಮಗೆ ಆಸಕ್ತಿ ಬೇಕಾಗಿದೆ. ಆನೇಕ ಮಂದಿ ಬಂಡವಾಳ ಹೂಡಿಕೆಗೆ ಬಂದಿದ್ದಾರೆ ಅವರಿಗೆ ಸರಕಾರ ಕೃತಜ್ಞತೆಯನ್ನು ಅರ್ಪಿಸುತ್ತದೆ ಎಂದರು.
*ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ: ಪ್ರವಾಸೋದ್ಯಮ ಅಭಿವೃದ್ಧಿಗೆ ಕರ್ನಾಟಕದಲ್ಲಿ ಅದರಲ್ಲೂ ಕರಾವಳಿಯಲ್ಲಿ ಅಭಿವೃದ್ಧಿಗೆ ವಿಫುಲ ಅವಕಾಶ ಇದೆ. ಐದು ವರ್ಷಗಳ ಪ್ರವಾಸೋದ್ಯಮ ನೀತಿ 2024-29 ರಾಜ್ಯದಲ್ಲಿ ಜಾರಿಯಲ್ಲಿದೆ. ಕರಾವಳಿಯಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ಈ ವರೆಗೂ ಯಾವುದೇ ಸರಕಾರ ಗಮನ ಹರಿಸಿಲ್ಲ. ಈಗ ಉಪಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಮತ್ತು ಪ್ರವಾಸೋದ್ಯಮ ಸಚಿವ ಹೆಚ್ ಕೆ ಪಾಟೀಲ್ ಈ ನಿಟ್ಟಿನಲ್ಲಿ ಗಮನ ಹರಿಸಿದ್ದಾರೆ ಎಂದು ಹೇಳಿದರು.
ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ: ಪ್ರವಾಸೋದ್ಯಮ ಬೆಳೆಯಲು ಕಾನೂನು ಸುವ್ಯವಸ್ಥಿತ ಚೆನ್ನಾಗಿರಬೇಕು. ಈಗ ದ.ಕ.ಜಿಲ್ಲೆಯಲ್ಲಿ ಶಾಂತಿಯ ವಾತಾವರಣ ಇದೆ. ಇದು ಹೀಗೆಯೆ ಮುಂದುವರಿಯಬೇಕಾಗಿದೆ. ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಸರಿಯಲ್ಲ, ಸಮಾಜವನ್ನು ಒಡೆಯುವ ಕೆಲಸವನ್ನು ಯಾರೂ ಮಾಡ ಬಾರದು. ಎಲ್ಲಾ ಧರ್ಮಗಳು ಕೂಡಾ ಶಾಂತಿಯನ್ನು ಪ್ರತಿಪಾದಿಸುತ್ತದೆ. ಯಾವುದೇ ದ್ವೇಷಕ್ಕೆ ಪ್ರೋತ್ಸಾಹ ನೀಡುವುದಿಲ್ಲ, ಒಂದು ಧರ್ಮದ ಮೇಲೆ ಮತ್ತೊಂದು ಧರ್ಮವನ್ನು ಎತ್ತಿ ಕಟ್ಟುವುದರಿಂದ ದೇಶಭಕ್ತಿ ಬರುವುದಿಲ್ಲ. ಕುವೆಂಪು ಹೇಳಿದಂತೆ ಶಾಂತಿಯ ತೋಟವಾಗಬೇಕು ಎಂದರು.
ಕರಾವಳಿ ಕ್ರಿಸ್ತ ಪೂರ್ವದಲ್ಲೇ ಪ್ರಸಿದ್ಧವಾಗಿತ್ತು. ಶಿಕ್ಷಣ ಆರೋಗ್ಯ, ಬ್ಯಾಂಕಿಂಗ್‌ನಲ್ಲಿ ಅಭಿವೃದ್ಧಿಯಾಗಿದೆ. ತೆರಿಗೆ ಕೊಡುವುದರಲ್ಲಿಯೂ ಮುಂದೆ ಇದೆ ಎಂದು ನುಡಿದರು.
ದೇಶವಿದೇಶಗಳಿಂದ ಶಿಕ್ಷಣ ಪಡೆಯಲು ಕರಾವಳಿಗೆ ಬರುತ್ತಾರೆ. ಆದರೆ ಕೆಲಸಕ್ಕೆ ವಿದೇಶಕ್ಕೆ ಹೋಗುತ್ತಾರೆ. ಇದರಿಂದ ತಂದೆ ತಾಯಿಗಳನ್ನು ನೋಡುವರಿಲ್ಲ ಎಂದು ಹೇಳಿದರು.
ಮಂಗಳೂರಿನಲ್ಲಿ ಫೈವ್ ಸ್ಟಾರ್ ಹೋಟೆಲ್ ಇಲ್ಲ: ಮಂಗಳೂರು ಎಲ್ಲದರಲ್ಲೂ ಮುಂದುವರಿದರೂ ಒಂದು ಫೈವ್ ಸ್ಟಾರ್ ಹೋಟೆಲ್ ಇಲ್ಲ. ಉಡುಪಿ ಮತ್ತು ಉತ್ತರ ಕನ್ನಡದಲ್ಲೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ತೆರಿಗೆ ನೀಡುವುದರಲ್ಲಿ ಕರಾವಳಿಯ ಕೊಡುಗೆ ಹಿರಿದು
ಈ ಭಾಗದಲ್ಲಿ ಬ್ಯಾಂಕಿಂಗ್, ಶಿಕ್ಷಣ ಮತ್ತು ಆರೋಗ್ಯಕ್ಕೆ ವಿಶೇಷವಾಗಿ ಆದ್ಯತೆ ನೀಡಿ ಅಭಿವೃದ್ಧಿಯಾಗಿದೆ. ಕರಾವಳಿಯ ಸರಾಸರಿ ಸಾಕ್ಷರತಾ ಪ್ರಮಾಣ 2011 ರಲ್ಲಿ ಶೇ 88.56 ಇತ್ತು. ತೆರಿಗೆ ಕೊಡುವುದರಲ್ಲಿ ನಮ್ಮ ರಾಜ್ಯ ಮುಂದಿದೆ. ಜಿ ಎಸ್.ಟಿ ಸಂಗ್ರಹಣೆಯಲ್ಲಿ ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿದ್ದು, ಇದರಲ್ಲಿ ಕರಾವಳಿ ಜಿಲ್ಲೆಗಳ ಪಾತ್ರ ಹಿರಿದಿದೆ ಎಂದರು. ಬೆಂಗಳೂರು ಬಿಟ್ಟರೆ ಮಂಗಳೂರು ಹೆಚ್ಚಿನ ಕೊಡುಗೆ ನೀಡುತ್ತಿದೆ. ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಮಹಾರಾಷ್ಟ್ರವನ್ನು ಹಿಂದಿಕ್ಕುವ ಅವಕಾಶ ನಮಗಿದೆ ಎಂದರು.
ಮಂಗಳೂರಿನಲ್ಲಿ : ಉದ್ದಿಮೆ ಪ್ರಾರಂಭಿಸಿ: ಶಿಕ್ಷಣಕ್ಕೆ ದೇಶವಿದೇಶಗಳಿಂದ ಬರುತ್ತಾರೆ. ಆದರೆ ಇಲ್ಲಿನ ಜನ ಅರಬ್ ದೇಶಗಳಿಗೆ ಕೆಲಸ ಅರಸಿಕೊಂಡು ಹೋಗುವ ಪರಿಸ್ಥಿತಿ ವಿಷಾದನೀಯ. ಇಲ್ಲೇ ಉಳಿದುಕೊಂಡು ದುಡಿಮೆ ಮಾಡುವ ಪ್ರಯತ್ನ ಮಾಡುವುದು ಅವಶ್ಯ ಎಂದರು.
ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶ
ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಸಾಧ್ಯವಿದೆ. ಮಂಗಳೂರಿನಲ್ಲಿ ಪಂಚತಾರ ಹೋಟೆಲ್ ಸ್ಥಾಪಿಸಲು ಪ್ರಕಾಶ್ ಶೆಟ್ಟರು ಮುಂದಾಗಿರುವುದು ಶ್ಲಾಘನೀಯ ಎಂದರು.
ಪ್ರವಾಸೋದ್ಯಮ, ಪರಿಸರ ಸಚಿವರ ಭೇಟಿಗೆ ನಿಯೋಗ: ಡಿಸಿಎಂ
ಕೇರಳ ಹಾಗೂ ಗೋವಾ ಮಾದರಿಯಲ್ಲಿ ಕರಾವಳಿ ನಿಯಂತ್ರಣ ವಲಯ (ಸಿಆರ್ ಜೆಡ್) ಕಾನೂನು ಸರಳೀಕರಣ ಮಾಡಲಾಗುವುದು. ಇದರ ಬಗ್ಗೆ ಕೇಂದ್ರ ಪ್ರವಾಸೋದ್ಯಮ, ಪರಿಸರ ಸಚಿವರ ಬಳಿ ನಿಯೋಗ ತೆರಳಿ ಚರ್ಚೆ ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ಮೀನುಗಾರಿಕೆ, ಪ್ರವಾಸೋದ್ಯಮ ಹಾಗೂ ಇತರೇ ಸಂಬಂಧಪಟ್ಟವರ ಜೊತೆ ಸಿಆರ್‌ಝೆಡ್ ವಿಚಾರ ಚರ್ಚೆ ನಡೆಸಲಾಗಿದೆ. ಇಲ್ಲಿನ ಸಂಸದರಿಗೂ ಇದರ ಬಗ್ಗೆ ತಿಳಿಸಲಾಗಿದೆ. ಉದ್ಯಮಿಗಳು ಸೇರಿದಂತೆ ಅನೇಕರ ಸಲಹೆ ಸೂಚನೆಗಳನ್ನು ಸಹ ಪಡೆಯಲಾಗಿದೆ ಎಂದರು.
ಮೂರು ಜಿಲ್ಲೆಗಳ ಪ್ರವಾಸೋದ್ಯಮ ಅಭಿವೃದ್ಧಿ ವಿಚಾರದಲ್ಲಿ ನೋಡಲ್ ಅಧಿಕಾರಿ ಸೇರಿದಂತೆ, ಏಕಗವಾಕ್ಷಿ ಏಜೆನ್ಸಿ ಪ್ರಾರಂಭ ಮಾಡಲಾಗುವುದು. ಯಾವುದೇ ವಿಚಾರವಿದ್ದರೂ ನನಗೆ ಪತ್ರದ ಮುಖೇನ ಅಥವಾ ಈ ಮೇಲ್ ಮೂಲಕ ತಿಳಿಸಿ ಎಂದರು.
ಕರಾವಳಿ ಶಾಂತಿಯ ತೋಟವಾಗಿ ಉಳಿಯಬೇಕು
ಕರಾವಳಿ ಸದಾ ಶಾಂತಿಯ ತೋಟವಾಗಿ ಉಳಿಯಬೇಕು ಎಂಬುದೇ ನಮ್ಮ ಸರ್ಕಾರದ ಚಿಂತನೆ. ಶಾಂತಿ ಸಾಮರಸ್ಯ ಉಳಿಯಬೇಕು ಎಂದರೆ ಯುವಕರಿಗೆ ಉದ್ಯೋಗ ದೊರೆಯಬೇಕು. ಇಲ್ಲಿ ಹುಟ್ಟಿ ಬೆಳೆದವರು ಹೊರಗೆ ಸಾಕಷ್ಟು ಸಾಧನೆ ಮಾಡಿದ್ದಾರೆ. ಅವರು ಮತ್ತೆ ಬಂದು ತಾವು ಹುಟ್ಟಿದ ಊರಿಗೆ ಕೊಡುಗೆ ನೀಡಬೇಕು. ಯಾರೇ ಇಲ್ಲಿಗೆ ಬಂದರು ಅವರು ಶಾಂತಿಯಿಂದ ವ್ಯವಹಾರ ನಡೆಸುವಂತಾಗಬೇಕು ಎಂದು ಹೇಳಿದರು.
ಈ ಹಿಂದೆ ಉಡುಪಿಯ ಒಂದು ಶಿಕ್ಷಣ ಸಂಸ್ಥೆಯಲ್ಲಿ ಗಲಾಟೆ ನಡೆದಾಗ ಅನೇಕ ಶಿಕ್ಷಣ ಸಂಸ್ಥೆಯವರು ಬಂದು ನಮ್ಮಲ್ಲಿ ದಾಖಲಾತಿ ಕಡಿಮೆಯಾಗಿದೆ ಎಂದು ಅವಲತ್ತುಕೊಂಡಿದ್ದರು. ನನಗೆ ಆಶ್ಚರ್ಯಗೊಳಿಸಿದ ಇನ್ನೊಂದು ಸಂಗತಿ ಎಂದರೆ ಸುಮಾರು ೮೭ ಸಾವಿರ ಪಿಯು ವಿದ್ಯಾರ್ಥಿಗಳು ಹೊರಗಡೆಯಿಂದ ಬಂದು ಈ ಎರಡು ಜಿಲ್ಲೆಗಳಿಂದ ತಯಾರಾಗುತ್ತಿದ್ದಾರೆ. ಇಲ್ಲಿನ ವಿದ್ಯಾಸಂಸ್ಥೆಗಳು ಶಿಸ್ತು, ಸಂಸ್ಕೃತಿ ಕಲಿಸುತ್ತಿವೆ ಎಂದರು.
ತೆರಿಗೆ ಸೇರಿದಂತೆ ಯಾವ ವಿಚಾರವಾಗಿ ರಾಜ್ಯ ಸರ್ಕಾರ ಸಹಾಯ ಮಾಡಬಹುದು ಎಂದು ಉದ್ಯಮಿಗಳು ಸಲಹೆ ನೀಡಬಹುದು. ಪ್ರವಾಸೋದ್ಯಮ, ಆರೋಗ್ಯ ಪ್ರವಾಸೋದ್ಯಮ ಸೇರಿದಂತೆ ಇನ್ಯಾವುದೇ ವಿಚಾರ ಇದ್ದರೂ ನಮ್ಮ ಸರ್ಕಾರ ಸಹಕಾರ ನೀಡುವುದು ಎಂದರು.
ಇಡೀ ದೇಶದಲ್ಲಿಯೇ ಅತ್ಯಂತ ಹೆಚ್ಚು ಬ್ಯಾಂಕ್ ಗಳನ್ನು ನೀಡಿದ ನೆಲ ಕರಾವಳಿ. ಅವಿಭಜಿತ ಜಿಲ್ಲೆಯಲ್ಲಿ ೮ ಮೆಡಿಕಲ್ ಕಾಲೇಜು ಹೊಂದಿರುವುದೇ ಹೆಗ್ಗಳಿಕೆ. ಆರೋಗ್ಯ, ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಪ್ರದೇಶ ಕರಾವಳಿ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗುವುದಕ್ಕೆ ಮೊದಲು ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಿದರು.
ವಿಮಾನ ನಿಲ್ದಾಣ, ಬಂದರು ಸೇರಿದಂತೆ ಅನೇಕ ಅನುಕೂಲ ಇದ್ದರು ಒಂದಷ್ಟು ವಿಚಾರದಲ್ಲಿ ಕೊರತೆ ಕಂಡು ಬರುತ್ತಿದೆ. ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಮಾಡಿದ ಐಟಿ ನೀತಿ ಬೆಂಗಳೂರಲ್ಲಿ ಯಶಸ್ವಿಯಾಯಿತು ಆದರೆ ಮಂಗಳೂರಿನಲ್ಲಿ ಆಗಲಿಲ್ಲ. ಇನ್ಫೋಸಿಸ್ ಸೇರಿದಂತೆ ಅನೇಕ ಕಂಪೆನಿಗಳು ಬಂದವು ಆದರೆ ಕಾಲಕಳೆದಂತೆ ಕ್ಷೀಣಿಸುತ್ತಾ ಹೋಯಿತು. ಇಲ್ಲಿನ ಯುವಕರು ಬೆಂಗಳೂರು, ಮುಂಬೈ, ದುಬೈನಲ್ಲಿ ಕೆಲಸ ಮಾಡುವಂತಾಗಿದೆ ಎಂದರು.
ಮುಂಬೈ, ದುಬೈನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವವರು ಕರಾವಳಿಯ ಜನರೇ. ನಿಮಗೆ ಉದ್ದಿಮೆ ನಡೆಸುವ ಚಾಕಚಕ್ಯತೆಯಿದೆ. ಅದು ಇಲ್ಲಿ ಬಳಕೆಯಾಗಬೇಕು. ಚುನಾವಣೆ ಸಮಯದಲ್ಲಿ ಮಂಗಳೂರನದನು ನಾನು ಡೆಡ್ ಸಿಟಿ ಎಂದಿದ್ದೆ. ಆಗ ಬಿಜೆಪಿ ಶಾಸಕರು ಏಕೆ ಎಂದು ಪ್ರಶ್ನೆ ಮಾಡಿದ್ದರು. ನಾನು ಅದಕ್ಕೆ ಉತ್ತರ ನೀಡಿದ್ದೆ. ಆಗ ಅವರು ಒಪ್ಪಿಕೊಂಡರು. ಆಗ ನಮ್ಮ ಸರ್ಕಾರದ ಯೋಜನೆಗಳ ಅವರಿಗೆ ಹೇಳಿದಾಗ ನಾವು ಸಹ ಬೆಂಬಲ ನೀಡುವುದಾಗಿ ಹೇಳಿದ್ದರು ಎಂದರು.
ಈ ಭಾಗದಲ್ಲಿ ನಾವು ಇಬ್ಬರು ಶಾಸಕರನ್ನು ಹೊಂದಿರಬಹುದು ಆದರೆ ನಮಗೆ ಸಮಗ್ರ ಕರ್ನಾಟಕದ ಅಭಿವೃದ್ಧಿ ಮುಖ್ಯ. ಪಕ್ಷಾತೀತವಾಗಿ ಸಂಸದರು ಭಾಗವಹಿಸಿ ಬೆಂಬಲ ನೀಡಿದ್ದಾರೆ ಎಂದರು.
*ಜಾಗತಿಕ ಪ್ರವಾಸೋದ್ಯಮ ಸಾಧ್ಯ :ಪಾಟೀಲ್: ಪ್ರವಾಸೋದ್ಯಮ ಸಚಿವ ಎಚ್‌ಕೆ ಪಾಟೀಲ್ ಮಾತನಾಡಿ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮುಖ್ಯ ಮಂತ್ರಿ ಚಾಲನೆ ನೀಡಿದ್ದಾರೆ. ಕರಾವಳಿಯಲ್ಲಿ ಇಡು ಗುಂಜೆಯಿಂದ ಮಂಗಳೂರು ಕೊನೆಯ ತನಕ ಜಾಗತಿಕ ಪ್ರವಾಸೋದ್ಯಮ ಮಾಡಲು ಅವಕಾಶವಿದೆ ಎಂದರು.
ಪರಿಸ್ಕೃತ ವೆಬ್‌ಸೈಟ್‌ಗೆ ಸಿಎಂ ಚಾಲನೆ: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಪರಿಸ್ಕೃತ ವೆಬ್‌ಸೈಟ್‌ನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು.
ಇದೇ ಸಂದರ್ಭದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಜ.17 ಮತ್ತು 18 ರಂದು ಮಂಗಳೂರಿನಲ್ಲಿ ನಡೆಯಲಿರುವ ಅಂತರ್ ರಾಷ್ಟ್ರೀಯ ಗಾಳಿಪಟ್ಟ ಉತ್ಸವಕ್ಕೆ ಚಾಲನೆ ನೀಡಿದರು,
*ಹುಡುಕುವ ಪರಿಸ್ಥಿತಿ ಇಲ್ಲ: ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಲ ವೈದ್ಯ ಅವರು ಬಂಡವಾಳ ಹೂಡಿಕೆದಾರರು ಕರವಳಿಯಲ್ಲಿ ಇದ್ದಾರೆ. ಅವರನ್ನು ಹುಡುಕುವ ಪರಿಸ್ಥಿತಿ ಇಲ್ಲ. ಇವತ್ತಿನ ದೊಡ್ಡ ಸಮಸ್ಯೆ ಎಂದರೆ ಸಿಆರ್‌ಝೆಡ್ ಕಾಯ್ದೆಯಾಗಿದೆ. ಕರಾವಳಿ ಜಿಲ್ಲೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತ್ಯೇಕ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು.
ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ ‘ಕರಾವಳಿಯ ಪ್ರವಾಸೋದ್ಯಮ ಅಭಿವೃದ್ಧಿಗೆ ಬಂಡವಾಳ ಹೂಡಿಕೆಗೆ ಎಲ್ಲ ಕಡೆ ಜನ ಇದ್ದಾರೆ. ಆದರೆ ಕಾನೂನಿನ ತೊಡಕುಗಳು ನಿವಾರಣೆಯಾಗಬೇಕು ಎಂದರು.
ಕೇರಳ ಮಾಡೆಲ್ ಬೇಡ: ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ ಇದೊಂದು ಐತಿಹಾಸಿಕ ಸಭೆಯಾಗಿದೆ. ಇದೊಂದು ರೋಡ್ ಮ್ಯಾಪ್ ಮಾಡಲು ಇಟ್ಟ ಹೆಜ್ಜೆಯಾಗಿದೆ ಎಂದರು.
ಕರಾವಳಿ ಭಾಗದಲ್ಲಿ ಶಾಂತಿ,ಕಾನೂನು ಸುವ್ಯವಸ್ಥೆ ಸರಿಯಾಗಿದೆ, ಪ್ರವಾಸೋದ್ಯಮಕ್ಕೆ ನಿರ್ಭಿತಿಯ ವಾತಾವರಣಬೇಕು. ನಮಗೆ ಗೋವಾ ಮತ್ತು ಕೇರಳ ಮಾದರಿ ಬೇಡ. ಪ್ರವಾಸೋದ್ಯಮದಲ್ಲಿ ಕರ್ನಾಟಕವೇ ಮಾದರಿಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ನಂ.1 ಆಗಲು ಅವಕಾಶ: ಬ್ಯಾರಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸೈಯದ್ ಮುಹಮ್ಮದ್ ಬ್ಯಾರಿ ಕರಾವಳಿ ಜಿಲ್ಲೆಗಳ ಅಭಿವೃದ್ಧಿಯ ಬಗ್ಗೆ ವರದಿ ಮಂಡಿಸಿ ಕರಾವಳಿಯ ಕಡಲ ತೀರದಲ್ಲಿ ನೆಲೆಸಿರುವ ಮೀನುಗಾರರಿಗೆ ತೊಂದರೆಯಾಗದಂತೆ ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡಲು ಅವಕಾಶ ಇದೆ. ಕರ್ನಾಟಕ ಪ್ರಪಂಚದಲ್ಲೇ ಪ್ರವಾಸೋದ್ಯಮದಲ್ಲಿ ನಂ.1 ಆಗಬೇಕು. ಅದಕ್ಕೆ ಎಲ್ಲ ಅವಕಾಶ ಇಲ್ಲಿದೆ. ಕೇರಳ ಮತ್ತು ಗೋವಾವನ್ನು ಕಾಪಿಮಾಡ ಬೇಕಾದ ಅಗತ್ಯ ಇಲ್ಲ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿ ಮಾಡಲು ಸಾಧ್ಯವಿದೆ ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂಎ ಗಫೂರ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಸ್ಪೀಕರ್ ಯು.ಟಿ.ಖಾದರ್, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಕೆ. ವಿ. ತಿಲೋಕ ಚಂದ್ರ , ಶಾಸಕ ಸುರೇಶ್ ಗುರ್ಮೆ, ಸತೀಶ್ ಸೈಲ್, ಭೀಮಣ್ಣ ನಾಯಕ್, ಅಶೋಕ್ ರೈ, ರಾಜೇಗೌಡ, ವಿಧಾನ ಪರಿಷತ್ ಸದಸ್ಯರಾದ ಡಾ.ಮಂಜುನಾಥ ಭಂಡಾರಿ, ಐವನ್ ಡಿಸೋಜ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮ್ಮದ್ ಮಾಜಿ ಸಚಿವರಾದ ಬಿ.ರಮಾನಾಥ ರೈ , ವಿನಯ್ ಕುಮಾರ್ ಸೊರಕೆ ಮೊದಲಾದವರು ಉಪಸ್ಥಿತರಿದ್ದರು.







