ಮಂಗಳೂರು: ಪುರಾತನ ಗುಜ್ಜರಕೆರೆಯ ರಕ್ಷಣೆಗೆ ಆಗ್ರಹ; ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಪ್ರಧಾನಿ ಕಚೇರಿ ಸೂಚನೆ

ಮಂಗಳೂರು, ಸೆ.18: ಜಿಲ್ಲೆಯ ಅತೀ ಪುರಾತನ ಮತ್ತು ಬೃಹತ್ ಕೆರೆಗಳಲ್ಲಿ ಒಂದಾಗಿರುವ ನಗರದ ಗುಜ್ಜರಕೆರೆಯ ರಕ್ಷಣೆಗೆ ಪ್ರಧಾನಿ ಕಚೇರಿಗೆ ಮೊರೆ ಹೋಗಿದ್ದ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಲಾಗಿದೆ.
ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆಯು ಸಲ್ಲಿಸಿದ್ದ ಮನವಿಯನ್ನು ಸ್ವೀಕರಿಸಿರುವ ಪ್ರಧಾನಿ ಕಚೇರಿಯು ಸೂಕ್ತ ಕ್ರಮಕ್ಕೆ ಮಂಗಳೂರು ತಹಶೀಲ್ದಾರ್ ಗೆ ಪತ್ರ ಬರೆದಿದೆ. ಅದರಂತೆ ತಹಶೀಲ್ದಾರರು ‘ಮಂಗಳೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ದೂರುದಾರರಿಗೆ ಪ್ರತಿಕ್ರಿಯೆ ನೀಡುವಂತೆ ಕೇಳಿಕೊಂಡಿದ್ದಾರೆ.
ಈ ಕೆರೆಯು ಐತಿಹಾಸಿಕ ಮತ್ತು ಧಾರ್ಮಿಕವಾಗಿಯೂ ಮಹತ್ವವನ್ನು ಹೊಂದಿದೆ. ಸ್ಥಳೀಯ ಅಂತರ್ಜಲ ಸಂರಕ್ಷಣೆಯ ಆಗರವಾಗಿದೆ. ಕೆಲವು ವರ್ಷಗಳ ಹಿಂದೆ ಈ ಕೆರೆಯ ಅಭಿವೃದ್ಧಿ ಕಾರ್ಯಗಳು ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆದಿದೆ. ಆದರೆ ಸ್ಥಳೀಯರ ಮತ್ತು ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆಯ ಆಶಯಕ್ಕೆ ಪೂರಕವಾಗಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಕೆರೆಯ ಪರಿಸರ ಪ್ರಸ್ತುತ ಮೋಜು ಮಸ್ತಿಯ ತಾಣವಾಗಿ ಬದಲಾಗಿದೆ ಎಂದು ವೇದಿಕೆಯ ಕಾರ್ಯದರ್ಶಿ ನೇಮು ಕೊಟ್ಟಾರಿ ಪ್ರಧಾನಿ ಕಚೇರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಕೆರೆ ಅಭಿವೃದ್ಧಿ ಹೊಂದಿ ಮೇಲ್ನೋಟಕ್ಕೆ ಪ್ರವಾಸಿ ತಾಣದಂತೆ ಕಂಡುಬಂದರೂ ಕೂಡ ಕೆರೆಯ ಧಾರ್ಮಿಕ, ಐತಿಹಾಸಿಕ ಮಹತ್ವಕ್ಕೆ ಪೂರಕವಾಗಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ನೀರಿನ ಶುದ್ಧತೆಯ ಬಗ್ಗೆ ಕ್ರಮ ವಹಿಸಿಲ್ಲ. ನೀರಿನಲ್ಲಿ ವಿಷಕಾರಿ ಅಂಶಗಳಿರುವುದು ಮತ್ತು ಈ ನೀರು ಕುಡಿಯಲು ಯೋಗ್ಯವಲ್ಲದ ಬಗ್ಗೆ ಪ್ರಯೋಗಾಲಯ ವರದಿ ಬಂದಿವೆ ಎಂದು ಪತ್ರದಲ್ಲಿ ತಿಳಿಸಲಾಗಿತ್ತು.
ನಾವು ಪ್ರಧಾನಿ ಕಚೇರಿಗೆ ಸಲ್ಲಿಸಿದ್ದ ದೂರು ಸ್ವೀಕರಿಸಲಾಗಿದೆ. ಅಲ್ಲದೆ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಉಲ್ಲೇಖಿತ ಅರ್ಜಿಯನ್ನು ವರ್ಗಾಯಿಸಿದೆ. ಹಾಗಾಗಿ ಈ ಬಾರಿಯಾದರೂ ಸಂಬಂಧಿತ ಇಲಾಖೆಯಿಂದ ಪೂರಕ ಸ್ಪಂದನೆ ದೊರೆಯುವ ಭರವಸೆ ಇದೆ ಎಂದು ನೇಮು ಕೊಟ್ಟಾರಿ ಪ್ರತಿಕ್ರಿಯಿಸಿದ್ದಾರೆ.
ಈಗಾಗಲೇ ಮೋಜು ಮಸ್ತಿಯ ತಾಣವಾಗಿ ಮಾರ್ಪಟ್ಟಿರುವ ನಾಥ ಪಂಥದ ಯೋಗಿ ಗೋರಕ್ಷನಾಥರಿಂದ ನಿರ್ಮಿತ ಈ ಕೆರೆಯ ಗತ ವೈಭವವನ್ನು ಮರುಕಳಿಸಲು ಮತ್ತು ತೀರ್ಥದ ಪಾವಿತ್ರ್ಯತೆಯನ್ನು ಕಾಪಾಡಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮುಂದಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.