ಸಂಸ್ಕೃತಿ ಜೀವಂತಾಗಿದ್ದರೆ ಸೌಹಾರ್ದತೆ ಸಾಧ್ಯ: ಫಾ. ವಾಲ್ಟರ್ ಡಿಸೋಜಾ

ಮಂಗಳೂರು, ಆ.4: ಪಾಶ್ಚತ್ಯ ಸಂಸ್ಕೃತಿಯ ಮೋಹದಿಂದಾಗಿ ನಮ್ಮ ನೆಲದ ಸಂಸ್ಕೃತಿ ನಾಶವಾಗುತ್ತಿರುವ ಇಂದಿನ ದಿನಗಳಲ್ಲಿ ಆಟಿಯ ವಿಶೇಷತೆಗಳಂತಹ ನಮ್ಮ ಸಂಸ್ಕೃತಿಯನ್ನು ಜೀವಂತವಾಗಿಸಬೇಕಾಗಿದೆ. ನಮ್ಮ ಸಂಸ್ಕೃತಿ ಜೀವಂತಾಗಿದ್ದರೆ ಸೌಹಾರ್ದ ಜೀವನ ಸಾಧ್ಯವಾಗಲಿದೆ ಎಂದು ಬೆಂದೂರ್‌ವೆಲ್‌ನ ಸೈಂಟ್ ಸೆಬಾಸ್ಟಿನ್‌ನ ಧರ್ಮಗುರು ರೆ.ಫಾ. ವಾಲ್ಟರ್ ಡಿಸೋಜಾ ಅಭಿಪ್ರಾಯಿಸಿದ್ದಾರೆ.
ನಗರದ ಸೈಂಟ್ ಸೆಬಾಸ್ಟಿನ್ ಚರ್ಚ್‌ನ ಸಭಾಂಗಣದಲ್ಲಿ ಮಂಗಳೂರು ನಗರ ಮಹಿಳಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೋಮವಾರ ಆಯೋಜಿಸಲಾದ ‘ಆಟಿಡೊಂಜಿ ದಿನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯುವಜನಾಂಗಕ್ಕೆ ನಮ್ಮ ಸಂಸ್ಕೃತಿಯನ್ನು ತಿಳಿಸುವ ಅನಿವಾರ್ಯ ಸ್ಥಿತಿಗೆ ನಾವಿಂದು ತಲುಪಿದ್ದೇವೆ. ಆದರೆ ಇದು ಅಗತ್ಯವಾಗಿ ಆಗಬೇಕಾಗಿದೆ. ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ಜೀವಂತವಾಗಿಸಿ ಮುಂದಿನ ಜನಾಂಗಕ್ಕೆ ಕೊಂಡೊಯ್ಯುವಲ್ಲಿ ಇಂತಹ ಕಾರ್ಯಕ್ರಮಗಳು ಪೂರಕ ಎಂದವರು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್, ಆಟಿಯ ವಿಶೇಷತೆಗಳನ್ನು ಸಾರುವ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣ. ಆಟಿ ತಿಂಗಳಲ್ಲಿ ತಯಾರಿಸಲಾಗುವ ತಿಂಡಿ ತಿನಿಸುಗಳು ಆರೋಗ್ಯಕರವಾಗಿದ್ದು, ಮಹಿಳಾ ಕಾಂಗ್ರೆಸ್‌ನವರು ತಮ್ಮ ಮನೆಯಲ್ಲಿ ತಯಾರಿಸಿದ ತಿಂಡಿಗಳನ್ನು ತಂದು ನಮ್ಮ ಸಂಸ್ಕೃತಿಯನ್ನು ಇತರರಿಗೆ ತಿಳಿಸುವ ಕಾರ್ಯ ಮಾಡುತ್ತಿರುವುದು ಉತ್ತಮ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಮಹಿಳಾ ಕಾಂಗ್ರೆಸ್ ನಿಕಟಪೂರ್ವ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್
ಸಾಲಿಯಾನ್, ಮುಖಂಡರಾದ ಚಂದ್ರಕಲಾ ಚಜೋಗಿ, ನಮಿತಾಡಿ. ರಾವ್ ಉಪಸ್ಥಿತರಿದ್ದರು.
ವಸಂತಿ ಅಂಚನ್ ಪ್ರಾರ್ಥಿಸಿದರು. ನಗರ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಚೇತನ್ ಸ್ವಾಗತಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಮಹಿಳೆಯರು ತಮ್ಮ ಮನೆಯಲ್ಲಿ ತಯಾರಿಸಿ ತಂಡ ಉಪ್ಪರ್ ಪಚ್ಚಿಲ್, ಸಾರಣೆ ಅಡ್ಯ, ತಜಂಕ್ ಸೊಪ್ಪು ಸೇರಿದಂತೆ ಹಲವು ಆಟಿಯ ವಿಶೇಷ ತಿಂಡಿ ತಿನಿಸುಗಳ ಸಹಭೋಜನ ನಡೆಯಿತು.







